ಮನೆ ಕಾನೂನು ಅಂಗವಿಕಲತೆ ಇಲ್ಲದಿದ್ದರೂ ಜೀವನಾಂಶಕ್ಕೆ ಆದೇಶಿಸುವುದು ಸೋಮಾರಿತನಕ್ಕೆ ಉತ್ತೇಜನ ನೀಡಿದಂತೆ : ಹೈಕೋರ್ಟ್

ಅಂಗವಿಕಲತೆ ಇಲ್ಲದಿದ್ದರೂ ಜೀವನಾಂಶಕ್ಕೆ ಆದೇಶಿಸುವುದು ಸೋಮಾರಿತನಕ್ಕೆ ಉತ್ತೇಜನ ನೀಡಿದಂತೆ : ಹೈಕೋರ್ಟ್

0

ʼಕೂತು ಸೋಮಾರಿಯಾಗದೇ ಸಕ್ರಿಯವಾಗಿ ಸವೆಯುವುದು ಉತ್ತಮʼ ಎಂದು ಅರ್ಜಿದಾರ ಪತಿಯೊಬ್ಬರಿಗೆ ಬುದ್ಧಿವಾದ ಹೇಳಿರುವ ಕರ್ನಾಟಕ ಹೈಕೋರ್ಟ್ ನಿರುದ್ಯೋಗಿಯಾಗಿರುವುದರಿಂದ ಜೀವನ ನಿರ್ವಹಣೆಗೆ ಪತ್ನಿಯಿಂದ ಜೀವನಾಂಶ ಕೊಡಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ವಜಾ ಮಾಡಿದೆ.

ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರ ಅಡಿ ಜೀವನಾಂಶ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿ ವಿಚಾರಣಾಧೀನ ನ್ಯಾಯಾಲಯ ಮಾಡಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ತಿರಸ್ಕರಿಸಿದೆ.

“ಜೀವನಾಂಶ ವಿತರಣೆಗೆ ಸಂಬಂಧಿಸಿದಂತೆ ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24 ಲಿಂಗ ತಟಸ್ಥವಾಗಿದೆ ಎಂದ ಮಾತ್ರಕ್ಕೆ ಪತಿಯ ಸಂಪಾದನೆಗೆ ಯಾವುದೇ ಅಡ್ಡಿ ಅಥವಾ ಅಂಗವಿಕಲತೆ ಇಲ್ಲದಿದ್ದರೂ ಜೀವನಾಂಶಕ್ಕೆ ಆದೇಶಿಸುವುದು ಸೋಮಾರಿತನಕ್ಕೆ ಉತ್ತೇಜನ ನೀಡಿದಂತಾಗುತ್ತದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ತನ್ನ ಜೀವನನ್ನೇ ಸಾಗಿಸಲು ಉದ್ಯೋಗವಿಲ್ಲ. ಹೀಗಾಗಿ, ಪತ್ನಿಯ ಜೀವನ ವೆಚ್ಚ ನಿರ್ವಹಿಸಲು ಸಾಧ್ಯವಿಲ್ಲ. ಇದರಿಂದ ಪತ್ನಿಯೇ ಜೀವನಾಂಶ ನೀಡಬೇಕು ಎಂಬ ವಾದವನ್ನು ಒಪ್ಪಲಾಗದು. ಈ ವಾದವು ಮೂಲದಲ್ಲೇ ಸಮಸ್ಯಾತ್ಮಕವಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಅರ್ಜಿದಾರರು ಕೋವಿಡ್ನಿಂದ ಉದ್ಯೋಗ ಕಳೆದುಕೊಂಡಿದ್ದಾರೆ ಎಂದ ಮಾತ್ರಕ್ಕೆ ಅವರು ದುಡಿಯಲು ಸಮರ್ಥರಲ್ಲ ಎಂದು ಹೇಳಲಾಗದು. ಪತ್ನಿಯಿಂದ ಜೀವನಾಂಶ ಕೋರುವ ಮೂಲಕ ಪತಿಯು ಸೋಮಾರಿಯಾಗಿ ಬದುಕಲು ನಿರ್ಧರಿಸಿದ್ದಾರೆ ಎಂಬುದು ಅವರ ನಡತೆಯಿಂದ ನಿರ್ವಿವಾದವಾಗಿ ತಿಳಿಯುತ್ತದೆ” ಎಂದು ನ್ಯಾಯಾಲಯ ಹೇಳಿದೆ.

“ಉದ್ಯೋಗ ಕಂಡುಕೊಂಡು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ದೈಹಿಕ ಅಥವಾ ಮಾನಸಿಕ ಅನಾರೋಗ್ಯ ಇರುವುದನ್ನು ಸಾಬೀತುಪಡಿಸದ ಹೊರತು ಕಾಯಿದೆಯ ಸೆಕ್ಷನ್ 24ರ ಅಡಿ ಪತಿಯು ಜೀವನಾಂಶ ಕೋರಲಾಗದು. ಪತ್ನಿ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಸದೃಢ ಪತಿಯ ಕರ್ತವ್ಯವಾಗಿದೆ” ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಪತಿ-ಪತ್ನಿಯ ನಡುವೆ ವೈಮನಸ್ಸು ಉಂಟಾಗಿದ್ದರಿಂದ ಪತಿಯು ವಿಚ್ಚೇದನ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೀಗಾಗಿ, ಪತ್ನಿಯು ವೈವಾಹಿಕ ಹಕ್ಕುಗಳ ಜಾರಿ ಕೋರಿ ಅರ್ಜಿ ಸಲ್ಲಿಸಿದ್ದರು. ಪತ್ನಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಜೀವನಾಂಶ ಮತ್ತು 25 ಸಾವಿರ ರೂಪಾಯಿ ಕಾನೂನು ವೆಚ್ಚ ಭರಿಸಬೇಕು ಎಂದು ಆದೇಶಿಸಿದ್ದ ನ್ಯಾಯಾಲಯವು 2 ಲಕ್ಷ ರೂಪಾಯಿ ಜೀವನಾಂಶ ಮತ್ತು 30 ಸಾವಿರ ರೂಪಾಯಿ ಕಾನೂನು ವೆಚ್ಚವನ್ನು ಪತ್ನಿಯಿಂದ ಕೊಡಿಸಬೇಕು ಎಂದು ಕೋರಿದ್ದ ಪತಿಯ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.