ಮನೆ ರಾಜಕೀಯ ಯುವ ಜನತಾದಳದಲ್ಲಿ ಸಂಘಟನಾತ್ಮಕವಾಗಿ, ಸಾಂಸ್ಥಿಕವಾಗಿ ಅಮೂಲಾಗ್ರ ಬದಲಾವಣೆ: ನಿಖಿಲ್ ಕುಮಾರಸ್ವಾಮಿ

ಯುವ ಜನತಾದಳದಲ್ಲಿ ಸಂಘಟನಾತ್ಮಕವಾಗಿ, ಸಾಂಸ್ಥಿಕವಾಗಿ ಅಮೂಲಾಗ್ರ ಬದಲಾವಣೆ: ನಿಖಿಲ್ ಕುಮಾರಸ್ವಾಮಿ

0

ಬೆಂಗಳೂರು (Bengaluru): ಯುವ ಜನತಾದಳದಲ್ಲಿ ಸಂಘಟನಾತ್ಮಕವಾಗಿ, ಸಾಂಸ್ಥಿಕವಾಗಿ ಅಮೂಲಾಗ್ರ ಬದಲಾವಣೆ ಮಾಡಲಾಗುವುದು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಇಂದು ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಂದು ಪಕ್ಷ ಸಂಘಟನೆ ಕುರಿತು ಸಭೆ ಕರೆಯಲಾಗಿತ್ತು. ಹಿರಿಯರು ಹಲವಾರು ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ. ಯುವ ಘಟಕವನ್ನು ಸಂಘಟನಾತ್ಮಕವಾಗಿ, ಸಾಂಸ್ಥಿಕವಾಗಿ ಬಲ ಪಡಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರದ ವೈಫಲ್ಯ, ನಿರುದ್ಯೋಗ ಸಮಸ್ಯೆ ಸೇರಿದಂತೆ ಯುವಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಯುವಜನತಾದಳ ಸಂಘಟನೆಗೆ ಸಜ್ಜಾಗುತ್ತಿದೆ. ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ದರು. ಇದರಿಂದ ನಮ್ಮ ಪಕ್ಷದ ಅಡಿಪಾಯ ಭದ್ರವಾಗಿದೆ ಎಂಬುದು ಗೊತ್ತಾಗುತ್ತಿದೆ. ಇದರೊಂದಿಗೆ ನಾವು ಒಂದಿಷ್ಟು ಬದಲಾವಣೆ ಮಾಡಬೇಕಾಗುತ್ತದೆ. ಎಲ್ಲಾ ಜಾತಿ, ಸಮುದಾಯದವರು ಸೇರಿ ಪಕ್ಷ ಸಂಘಟನೆ ಮಾಡಬೇಕು. ಹಿರಿಯ ನಾಯಕರು ಸಲಹೆಗಳನ್ನು ನೀಡಿದ್ದಾರೆ. ಅವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಯುವ ಜನತಾದಳ ಕಟ್ಟುವ ಕೆಲಸ ಮಾಡುತ್ತೇವೆ ಎಂದರು.

ಪ್ರತಿ ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಬೇಕಾಗುತ್ತದೆ. ಯುವ ಜನತಾದಳ ಸಂಘಟನೆ ವಿಚಾರವಾಗಿ ಸಜ್ಜಾಗುತ್ತಿದೆ. ಇಂದು 30‌ ಜಿಲ್ಲೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಹಲವಾರು ವಿಚಾರಗಳನ್ನು ಬಹಿರಂಗವಾಗಿ ಚರ್ಚೆ ಮಾಡಿದ್ದೇವೆ. ಯುವ ನಾಯಕ  ಶರಣಗೌಡರು ಕೂಡ ಸಂಘಟನೆ ವಿಚಾರವಾಗಿ ಮಾತಾಡಿದ್ದಾರೆ. ನಾವು ಯುವಕರ ಧ್ವನಿಯಾಗಿ ಕೆಲಸ ಮಾಡುತ್ತೇವೆ. ಈಗಾಗಲೇ ಕುಮಾರಸ್ವಾಮಿ ಅವರು ಶೇ.30ರಷ್ಟು ಸೀಟುಗಳನ್ನು ಯುವಕರಿಗೆ ಕೊಡಬೇಕು ಎಂದು ಹೇಳಿದ್ದಾರೆ ಎಂದರು.

ಕೋಮುವಾದಿಗಳಿಗೆ ಕಾಂಗ್ರೆಸ್ ಬೆಂಬಲ:

ಜಾತ್ಯಾತೀತ ತತ್ವದ ಬಗ್ಗೆ ಮಾತನಾಡುವ ಕಾಂಗ್ರೆಸ್ ಕೋಮುವಾದಿಗಳಿಗೆ ಬೆಂಬಲ ನೀಡಿದೆ. ರಾಜ್ಯಸಭೆ ಚುನಾವಣೆ ವಿಚಾರವಾಗಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ಕೇಂದ್ರದ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿದ್ದರು. ಆದರೆ, ರಾಜ್ಯ ನಾಯಕರ ಬಳಿ ಕೇಂದ್ರದ ನಾಯಕರಿಗೂ ಕಿಮ್ಮತ್ತು ಇಲ್ಲ ಎಂಬುದು ಗೊತ್ತಾಗಿದೆ. ಕಾಂಗ್ರೆಸ್ ಯಾರ ಟೀಂ ಎಂಬುದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ವ್ಯಂಗ್ಯವಾಡಿದರು.

ಇನ್ನೂ ಜನತಾದಳ ಪಕ್ಷದಲ್ಲಿ ಅಸಮಧಾನಿತರು ಇದ್ದಾರೆ ಎನ್ನುತ್ತಿದ್ದರು. ಆದರೆ, ಶ್ರೀನಿವಾಸ ಗೌಡ ಅವರನ್ನು ಬಿಟ್ಟು ಉಳಿದ ಎಲ್ಲರೂ ಪಕ್ಷದ ಜೊತೆಗೆ ಇದ್ದಾರೆ. ಇದರ ಬಗ್ಗೆ ಸಂಜೆ ಆರು ಗಂಟೆ ನಂತರ ನಾನು ಮಾತಡುತ್ತೇನೆ. ಜಿ.ಟಿ.ದೇವೇಗೌಡರು, ರಾಮಸ್ವಾಮಿ, ಶಿವಲಿಂಗೇಗೌಡರು ಎಲ್ಲರೂ ನಮ್ಮ ಜೊತೆಯಲ್ಲೇ ಇದ್ದಾರೆ ಎಂದು ಸ್ಪಷ್ಟಪಡಿಸಿದರು.