ಅ) ಬಾಯಿಗೆ ಬೆರಳು : ಕೆಲವು ಮಕ್ಕಳು ಹೆಬ್ಬರಳನ್ನು ಬಾಯಿಯಲ್ಲಿಟ್ಟುಕೊಂಡು ಚೀಪುತ್ತಾರೆ. ಇಂತಹ ಅಭ್ಯಾಸ ಒಂದು ಮತ್ತು ಎರಡನೇ ವರ್ಷದ ಮಕ್ಕಲಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸೀಸೆಯಲ್ಲಿ ಹಾಲು ಕುಡಿಯುವ ಮಕ್ಕಳಿಗೆ ಈ ಅಭ್ಯಾಸ ಮತ್ತಷ್ಟು ಹೆಚ್ಚು. ಸಾಮಾನ್ಯವಾಗಿ 3ವರ್ಷ ತುಂಬಿದಾಗ ಈ ಅಭ್ಯಾಸ ಹೋಗುತ್ತದೆ. 3ನೇ ವರ್ಷದ ನಂತರವೂ ಈ ಅಭ್ಯಾಸ ಉಳಿದಿದ್ದರೆ ಅಷ್ಟು ಸುಲಭವಾಗಿ ಈ ಅಭ್ಯಾಸ ಹೋಗುವುದಿಲ್ಲ. ಮಕ್ಕಳಲ್ಲಿ ಭದ್ರತೆಯ ಕೊರತೆ ಈ ಅಭ್ಯಾಸಕ್ಕೆ ಮುಖ್ಯಕಾರಣ. ತಾಯಿ ಪ್ರೀತಿ ಹೆಚ್ಚಾಗಿದಗದರೆ ಈ ಅಭ್ಯಾಸ ಅಷ್ಟಾಗಿರುವುದಿಲ್ಲ. 4 ವರ್ಷದ ನಂತರವೂ ಈ ಅಭ್ಯಾಸ ಹಾಗೆಯೇ ಇದ್ದರೆ ಮನೋವೈದ್ಯರಿಗೆ ತೋರಿಸಬೇಕಾಗುತ್ತದೆ.
ಆ) ಉಗುರು ಕಡಿಯುವುದು : ಈ ಅಭ್ಯಾಸ ಚಿಕ್ಕಂದಿನಲ್ಲಿಯೇ ಬರುತ್ತದೆ. ಸಾಮಾನ್ಯವಾಗಿ 16-17 ವರ್ಷದ ನಂತರವು ಈ ಅಭ್ಯಾಸವನ್ನು ಮರೆಯುತ್ತಾರೆ. ಅನಗತ್ಯವಾದ ಭಯ, ಗೊಂದಲ ಇರುವ ಮಕ್ಕಳಲ್ಲಿ ಉಗುರು ಕಡಿಯುವ ಅಭ್ಯಾಸವು ಹೆಚ್ಚು.
ಇ) ಪೈಕಾ : ಆಹಾರವಲ್ಲದ ಪದಾರ್ಥಗಳಾದ ಮಣ್ಣು, ಸುಣ್ಣ, ಚಾಕ್ ಪೀಸ್ ಇತ್ಯಾದಿಗಳನ್ನು ತಿನ್ನುವ ಅಭ್ಯಾಸವನ್ನು ಪೈಕಾ ಎನ್ನುತ್ತಾರೆ. ಸಾಮಾನ್ಯವಾಗಿ ಈ ಅಭ್ಯಾಸ 15 ತಿಂಗಳ ನಂತರ ಆರಂಭವಾಗುತ್ತದೆ. ಹೊಟ್ಟೆಯಲ್ಲಿ ಜಂತುಹುಳಗಳಿರುವುದು, ರಕ್ತಹೀನತೆ ಈ ಅಭ್ಯಾಸಕ್ಕೆ ಸ್ವಲ್ಪ ಮಟ್ಟಿಗೆ ಕಾರಣವಾಗುತ್ತದೆ. ಈ ಅಭ್ಯಾಸಗಳಿದ್ದಾಗ ಅವುಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ಮಾಡಬೇಕು.
ಈ) ಕೂದಲು ಕಿತ್ತುಕೊಳ್ಳುವುದು : ಕೆಲವು ಮಕ್ಕಳು ಅತಿಯಾಗಿ ತಲೆಕೂದಲನ್ನು ಕಿತ್ತುಕೊಳ್ಳುತ್ತಿರುತ್ತಾರೆ. ಅದರಿಂದ ತಲೆ ಬೋಳಾಗುತ್ತದೆ. ಇಂತಹ ಅಭ್ಯಾಸವನ್ನು ಬಿಡಿಸಲು ಕ್ಲೋಮಿಕ್ ಪೆರಮೈನ್ ಸಹಕರಿಸುತ್ತದೆ.
ಶೌಚಾಲಯದ ಸಮಸ್ಯೆಗಳು :-
ಅ) ಹಾಸಿಗೆಯಲ್ಲಿ ಮೂತ್ರವಿಸರ್ಜನೆ : ಒಂದು ವರ್ಷ ತುಂಬುವವರೆಗೆ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವುದು ಸಹಜ. ವರ್ಷದ ನಂತರ ಈ ಅಭ್ಯಾಸ ಕಡಿಮೆ ಆಗುತ್ತದೆ. ಮೂತ್ರ ಚೀಲದ ನಿಯಂತ್ರಣ ಹಿಡಿತಕ್ಕೆ ಬರುತ್ತದೆ. 3ವರ್ಷ ತುಂಬುವಷ್ಟರಲ್ಲಿ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವುದು ನಿಂತು ಹೋಗುತ್ತದೆ. ಆದಾಗ್ಯೂ ಮೂತ್ರ ವಿಸರ್ಜಿಸುತ್ತಿದ್ದರೆ ಮೂಲ ಕಾರಣ ಪರಿಶೀಲಿಸಬೇಕು. ಕೆಲವರಲ್ಲಿ ಹುಟ್ಟಿದಾಗ ಮಕ್ಕಳು ಮೂರು 3-4 ವರ್ಷವಾದರೂ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುತ್ತಾರೆ. ಕೆಲವು ಕುಟುಂಬಗಳಲ್ಲಿ ತಾಯಿ ತಂದೆಯ ನಡುವೆ ಜಗಳವಿರುತ್ತದೆ. ಆ ಜಗಳ ಮಗುವಿನ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಅವರಲ್ಲಿ ವಿನಾಕಾರಣ ಗೊಂದಲವನ್ನು ಉಂಟುಮಾಡುತ್ತದೆ. ಆ ಭಯ, ಗಾಬರಿ, ಗೊಂದಲ, ಹಾಸಿಗೆಯಲ್ಲಿ ಮೂತ್ರವಿರ್ಸಜಿಸಲು ಕಾರಣವಾಗಬಹುದು. ತಂದೆ-ತಾಯಿಯರಿಂದ ದೂರವಾದ ಮಕ್ಕಳು ಕೂಡ ಹಾಗೆ ಹಾಸಿಗೆಯಲ್ಲಿ ಮೂತ್ರವಿಸರ್ಜಿಸುತ್ತಾರೆ. ಇದಕ್ಕೆಲ್ಲ ಮಾನಸಿಕ ಪರಿಸ್ಥಿತಿಯೇ ಕಾರಣ. ಹೊಟ್ಟೆಯ ಜಂತುಹುಳುಗಳು, ಮೂತ್ರ ಕೋಶದ ರೋಗಗಳು ಕೂಡ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸಲು ಕಾರಣವಾಗುತ್ತದೆ. ಕೆಲವರಿಗೆ ಮೆಂಟಲ್ ರಿಟಾರ್ಡೇಷನ್ ಇರುತ್ತದೆ. ಮಾನಸಿಕ ರೋಗಗಳು ಇರುತ್ತದೆ. ಇಂತಹ ಮಕ್ಕಳು ಕೂಡ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುತ್ತದೆ. ಎಪಿಲಪ್ಸಿ, ಅಂಗವೈಕಲ್ಯ, ದೀರ್ಘಕಾಲದ ಅನಾರೋಗ್ಯ, ಸೆರಿಬ್ರಲ್ ಪಾಲ್ಸಿ ಇರುವ ಮಕ್ಕಳು ಕೂಡ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುತ್ತಾರೆ.
ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುತ್ತಿದ್ದಾಗ ಎಲ್ಲಾ ಕೋನದಿಂದಲೂ ಪರಿಶೀಲಿಸಬೇಕು. ಕೆಲವರಿಗೆ ಮೂತ್ರಕೋಶದ ಸಾಮರ್ಥ್ಯ ಇರುತ್ತದೆ. ಇಂತಹ ಮಕ್ಕಳಿಗೆ ನಿದ್ರಿಸುವ ಮೊದಲು ಮೂತ್ರ ವಿಸರ್ಜಿಸುವಂತೆ ರೂಢಿ ಮಾಡಿದರೆ ಆ ಸಮಸ್ಯೆಯಿರುವುದಿಲ್ಲ. ಮೂತ್ರ ವಿಸರ್ಜಿಸುವಾಗ ಉರಿಯುತ್ತಿದೆಯೆಂದು ಹೇಳಿದರೆ, ಮೂತ್ರನಾಳದ ಸೋಂಕಿದೆತೇನೋ ಪರೀಕ್ಷಿಸಬೇಕು. ಸಾಮಾನ್ಯವಾಗಿ ಇಂತಹ ಮಕ್ಕಳಿಗೆ ಸೋಂಕುಂಟಾಗಿರುತ್ತದೆ. ಸೋಂಕಿಗೆ ಔಷಧಿ ಕೊಟ್ಟರೆ ವಾಸಿಯಾಗುತ್ತದೆ.
ಕೆಲವು ಮಕ್ಕಳಿಗೆ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸಲು ಯಾವ ಕಾರಣವೂ ಕಂಡು ಬರುದಿಲ್ಲ. ಇಂತಹ ಮಕ್ಕಳ ಚಿಕಿತ್ಸೆ ಬೇರೆ ರೀತಿಯಲ್ಲಿರುತ್ತದೆ. ಸಂಜೆ 6 ರಿಂದ 7 ಗಂಟೆವರೆಗೆ ಊಟ ಮಾಡಿಸಿ ಆನಂತರ ನೀರಾಗಲೀ, ಇತರ ದ್ರವ ಪದಾರ್ಥಗಳನ್ನು ತೆಗೆದುಕೊಳ್ಳದಂತೆ ರೂಢಿ ಮಾಡಬೇಕು. ನಿದ್ರಿಸುವ ಮುಂಚೆ ತಪ್ಪದೇ ಮೂತ್ರ ವಿಸರ್ಜಿಸುವಂತೆ ಶಿಕ್ಷಣ ಕೊಡಬೇಕು.
ಆ) ಮೂತ್ರ ಚೀಲದ ಸಾಮರ್ಥ್ಯ :- ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ಮಕ್ಕಳಿಗೆ ಬ್ಲಾಡರ್ ಟ್ರೈನಿಂಗ್ ಕೊಡಬೇಕು. ಹಗಲಿನಲ್ಲಿ ಹೊಟ್ಟೆ ತುಂಬಾ ನೀರು ಕುಡಿದು ಮೂತ್ರ ಬರುತ್ತಿದ್ದರೂ ಬಹಳಷ್ಟು ಸಮಯ ತೆರೆದುಕೊಳ್ಳುವ ಶಿಕ್ಷಣ ಕೊಡಬೇಕು. ಇದರಿಂದ ಅವರ ಬ್ಲಾಡರ್ ಸಾಮರ್ಥ್ಯ ಸುಧಾರಿಸುತ್ತದೆ. ಈ ಅವಧಿಯಲ್ಲಿ ದಿನೇ ದಿನೇ ಏರಿಸಬೇಕು.
ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸಿದಾಗ, ಹೀಗಳೆಯಬಾರದು. ಶಿಕ್ಷೆ ಕೊಡುವುದಂತೂ ಮಾಡಲೇಬಾರದು. ಇದರಿಂದ ಮೂತ್ರ ವಿಸರ್ಜಿಸುವುದು ಇನ್ನೂ ಜಾಸ್ತಿಯಾಗುತ್ತದೆ.
ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸದಿದ್ದರೆ ಬಹುಮಾನ ಕೊಡುವುದಾಗಿ ಪ್ರೋತ್ಸಾಹಿಸಬೇಕು. ಮೂತ್ರ ಮಾಡದಿದ್ದ ದಿನ ತಪ್ಪದೇ ಅವರಿಗೆ ಇಷ್ಟವಾದ ಬಹುಮಾನ ಕೊಡಬೇಕು. ಹೀಗೆ ಮಾಡುವುದರ ಮಕ್ಕಳು ಬಹುಮಟ್ಟಿಗೆ ಮೂತ್ರ ವಿಸರ್ಜಿಸುವುದಿಲ್ಲ.
ಔಷಧಿಗಳು :-
ಮೇಲೆ ವಿವರಿಸಿದಂತೆ ಮಾಡಿದಾಗ ಫಲಿತಾಂಶ ಬರಲು ಕೆಲಕಾಲ ಹಿಡಿಯಬಹುದು. ಆದರೆ ಒಮ್ಮೆ ಫಲಿತಾಂಶ ಆರಂಭವಾದ ನಂತರ ನಿಯಂತ್ರಣಕ್ಕೆ ಬರುತ್ತದೆ. 6 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಇಮಿಪ್ರಮಿನ್ ಇಲ್ಲವೇ ಕ್ಲೋಮಿಪ್ರಮಿನ್ ಮಾತ್ರೆಗಳನ್ನು ರಾತ್ರಿ ಮಲಗುವ ಒಂದೆರಡು ಗಂಟೆ ಮೊದಲು ಕೊಡಬೇಕು. ಸಾಮಾನ್ಯವಾಗಿ ಕೆಲವು ವಾರಗಳಲ್ಲೇ ಉತ್ತಮ ಫಲಿತಾಂಶ ಬರುತ್ತದೆ.
ಎಚ್ಚರವಿದ್ದಾಗ ಬಟ್ಟೆಯಲ್ಲಿಯೇ ಮೂತ್ರ ವಿಸರ್ಜನೆ :- ಕೆಲವು ಮಕ್ಕಳು ಹಗಲಿನಲ್ಲಿ ಎಚ್ಚರವಿದ್ದಾಗಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾರೆ. ಇದನ್ನ “ಡೇ ಟೈಮ್ ವೆಟ್ಟಿಂಗ್” ಇಲ್ಲವೇ ಡಯಾರನಲ್ ಎನ್ಯೂರಸಿನ್ ಎನ್ನುತ್ತಾರೆ.
ಹಗಲಿನಲ್ಲಿ ಬಟ್ಟೆಗಳಲ್ಲಿಯೇ ಮೂತ್ರ ವಿಸರ್ಜಿಸಲು ಬ್ಲಾಡರ್ ನಿಯಂತ್ರಣ ಕಡಿಮೆ ಇರುವುದೂ ಒಂದು ಕಾರಣ. ಹೆಚ್ಚು ಸಮಯ ಮೂತ್ರವನ್ನು ತೆಡೆದುಕೊಳ್ಳಬೇಕಿದ್ದಾಗ ಇದ್ದಕ್ಕಿದ್ದಂತೆ ಮೂತ್ರ ಹೋಗಿಬಿಡುತ್ತದೆ. ಮೂತ್ರನಾಳದ ಸೋಂಕು ಮಲಬದ್ಧತೆ ಮಾನಸಿಕ ಒತ್ತಡ, ನ್ಯೂರೋಜೆನಿಕ್ ಬ್ಲಾಡರ್, ಮಧುಮೇಹ ಇತ್ಯಾದಿಗಳಿದ್ದಾಗ ಹಗಲಿನಲ್ಲಿ ಉಟ್ಟಬಟ್ಟೆಗಳಲ್ಲಿ ಮೂತ್ರ ವಿಸರ್ಜನೆಯಾಗುತ್ತದೆ. ಮಾನಸಿಕ ಹಾಗೂ ಶಾರೀರಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ ಅದಕ್ಕೆ ತಕ್ಕಂತೆ ಚಿಕಿತ್ಸೆ ಮಾಡಬೇಕು.