ಮನೆ ಸ್ಥಳೀಯ ಬಡವರ, ದೀನ ದಲಿತರ ಹಾಗೂ ದನಿ ಇಲ್ಲದವರ ದನಿಯಾಗಿರುವುದೇ ನಮ್ಮ ದೈವ ಗ್ರಂಥ ಸಂವಿಧಾನ: ಡಾ....

ಬಡವರ, ದೀನ ದಲಿತರ ಹಾಗೂ ದನಿ ಇಲ್ಲದವರ ದನಿಯಾಗಿರುವುದೇ ನಮ್ಮ ದೈವ ಗ್ರಂಥ ಸಂವಿಧಾನ: ಡಾ. ಪುಷ್ಪ ಅಮರ್ ನಾಥ್

0

ಮೈಸೂರು: ಬಡವರ, ದೀನದಲಿತರ, ಮಹಿಳೆಯರ ಹಾಗೂ ಸಮಾಜದಲ್ಲಿ ದನಿ ಇಲ್ಲದ ಜನರ ದನಿಯಾಗಿ ನಮ್ಮನ್ನು ಕಾಯುತ್ತಿರುವುದೇ ನಮ್ಮ ದೈವ ಗ್ರಂಥವಾಗಿರುವ ಸಂವಿಧಾನ ಎಂದು ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರ್ ನಾಥ್ ಅವರು ಹೇಳಿದರು.

Join Our Whatsapp Group

ಇಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ಕರ್ನಾಟಕ ಕಲಾ ಮಂದಿರದ ಆವರಣದಲ್ಲಿ ಆಯೋಜಿಸಲಾಗಿದ್ದ, “ಸಂವಿಧಾನ ದಿನ” ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ರಾಜ್ಯದಾದ್ಯಂತ ಪ್ರತಿಯೊಂದು ಕಾರ್ಯಕ್ರಮ ಹಾಗೂ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆಯನ್ನು ವಾಚಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ನಾವು ಅದರಲ್ಲಿರುವ ಪ್ರತಿಯೊಂದು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ನಡೆದು ಸಮಾನತೆಯ ಸಮಾಜವನ್ನು ನಿರ್ಮಿಸಲೆಂದು. ಹಾಗಾಗಿ ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅವದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಸಮಾಜದಲ್ಲಿ ಶಾಂತಿಯುತವಾಗಿ ಜೀವಿಸಲು, ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಬಲರಾಗಿ ಬದುಕಲು, ಜನರಿಗೆ ನ್ಯಾಯ ಒದಗಿಸಲು ಸಂವಿಧಾನವು ಅತ್ಯವಶ್ಯಕ. ರಾಷ್ಟ್ರದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಹಲವಾರು ಧರ್ಮಗಳ ಆಚರಣೆ ಚಾಲ್ತಿಯಲ್ಲಿದೆ ಹಾಗೂ ಪ್ರತಿಯೊಂದು ಧರ್ಮವು ತಮ್ಮದೇ ಆದ ಧರ್ಮ ಗ್ರಂಥಗಳನ್ನು ಒಳಗೊಂಡಿವೆ. ಆದರೇ ಅದನ್ನೆಲ್ಲ ಮೀರಿದ ಎಲ್ಲಾ ಧರ್ಮದವರಿಗೂ ಅನ್ವಯಿಸುವ ದೈವ ಗ್ರಂಥ ರಾಷ್ಟ್ರೀಯ ಗ್ರಂಥವೇ ನಮಗೆ ಡಾ. ಬಿ ಆರ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ.  ಅದನ್ನು ಉಳಿಸಿ ರಕ್ಷಿಸುವುದು ಹಾಗೂ ಪಾಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಸಂವಿಧಾನದ  ಆಶಾಯದಲ್ಲಿರುವ ಪ್ರಜಾಸತ್ತಾತ್ಮಕ, ಗಣರಾಜ್ಯ ದೇಶವನ್ನಿ ನಿರ್ಮಿಸಲು ಎಲ್ಲರೂ ಒಂದಾಗಿ ಸಮಾನತೆಯ ರಾಷ್ಟ್ರದ ನಿರ್ಮಾಣ ಮಾಡಬೇಕು. ಒಂದು ದೇಶವು ಎಲ್ಲಾ ರೀತಿಯಿಂದಲೂ ಮುಂದುವರೆಯಬೇಕು ಎಂದರೆ ಮಹಿಳೆಯರು ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ಸಂವಿಧಾನದಲ್ಲಿರುವ ಮಹಿಳಾ ಮೀಸಲಾತಿಯನ್ನು ಉಪಯೋಗಿಸಿಕೊಂಡು ಪರಿಶ್ರಮದಿಂದ ಮಹಿಳೆಯರು ಹೆಚ್ಚಾಗಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಬೇಕು. ಹಾಗೂ ಸಂವಿಧಾನವನ್ನು ಪ್ರತೋಯೊಬ್ಬರು ಒಪ್ಪಿ ಅಪ್ಪಿಕೊಳ್ಳಬೇಕು ಎಂದು ಹೇಳಿದರು.

ಇಂದು ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರವು ಸಂವಿಧಾನದ ಆಶಯಗಳನ್ನು ಒಳಗೊಂಡಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದೆ. ಈ ಯೋಜನೆಗಳ ದೂರದೃಷ್ಟಿ ಕೋನವನ್ನು  ಅರಿತು ಜನರು ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮನ್ನು ಸಾಕಿ ಸಲಹುತ್ತಿರುವ ಸಂವಿಧಾನವನ್ನು ಅದರ ಆಶಯಗಳನ್ನು ಸಂರಕ್ಷಿಸುವ ಹಾಗೂ ಜನರಿಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಅದಕ್ಕೆ ತಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ಹಿರಿಯ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಡಾ. ಡಿ ಆನಂದ್ ಅವರು ಮಾತನಾಡಿ, ಇಂದು ಭಾರತದ ಸಂವಿಧಾನ ದಿನ. ಪ್ರತಿ ವರ್ಷ ನವೆಂಬರ್ 26 ರಂದು ಭಾರತದ ಸಂವಿಧಾನ ದಿನವನ್ನಾಗಿ ಸರ್ಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಆಚರಣೆ ಮಾಡಲಾಗುತ್ತದೆ. ಅದರಲ್ಲು ಶಾಲಾ, ಕಾಲೇಜುಗಳಲ್ಲಿ ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡುವುದರ ಮೂಲಕ ಈ ದಿನದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತದೆ. ಇದರಿಂದ ಸಮಾಜದ ಮುಂದಿನ ಪೀಳಿಗೆಗಾಳಾಗಿರುವ ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವ ತಿಳಿಯುತ್ತದೆ ಹಾಗೂ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿ, ಸರ್ವರಿಗೂ ಸಮಾನತೆಯನ್ನು ಒದಗಿಸಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹು ದೊಡ್ಡ ಕಾನೂನಾಗಿದೆ. ಈ ಕಾನೂನನ್ನು ಪಾಲಿಸುವುದರ ಮೂಲಕ ಅದನ್ನು ರಕ್ಷಿಸುವುದು ನಮ್ಮ ಹೊಣೆ ಎಂದರು.

ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವದರ ಜತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿ ಕೊಡುವುದು ಈ ದಿನದ ವಿಶೇಷತೆಯಾಗಿದೆ. 2015 ನೆೇ ಇಸವಿಯಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳ ಅನುಮೋಧನೆಯೊಂದಿಗೆ ನವೆಂಬರ್ 26 ರಂದು ಸಂವಿಧಾನ ದಿನ ಎಂದು ಘೋಶಿಸಲಾಯಿತು. ಇಂದು ರಾಜ್ಯ ಸರ್ಕಾರ  ಇನ್ನೂ ಒಂದು ಹೆಜ್ಜೆ ಮುಂದೆ ನಡೆದು ಸಂವಿಧಾನದ ಅಭಿಯಾನವನ್ನು ಕೈಗೊಂಡು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಗೆಯನ್ನು ಪ್ರಾರ್ಥನೆಯಾಗಿ ಓದಿಸುವ, ಅರ್ಥೈಸುವ ಕೆಲಸವನ್ನು ಮಾಡಿದೆ. ಈ ಮೂಲಕ ಸಂವಿಧಾನದ ಆಶಯ ಎಲ್ಲಾ ಮಕ್ಕಳಿಗೂ ತಿಳಿಸುವಂತೆ ಮಾಡುತ್ತಿದೆ ಎಂದು ಹೇಳಿದರು.

ಸಂವಿಧಾನ ಎಂದರೆ ಅಂಬೇಡ್ಕರ್, ಅಂಬೇಡ್ಕರ್ ಎಂದರೆ ಸಂವಿಧಾನ. ನಮ್ಮ ಸಂವಿಧಾನ ಇತರೆ ದೇಶಗಳ ಸಂವಿಧಾನದಂತಲ್ಲ. ಸ್ವತಂತ್ರ ಪೂರ್ವ, ಸ್ವತಂತ್ರದ ಸಮಯ ಹಾಗೂ ನಂತರದ ವಿಷಯಗಳನ್ನು ಒಳಗೊಂಡಿರುವ ಭೂತ, ವರ್ತಮಾನ, ಮತ್ತು ಭವಿಷ್ಯತ್ ಕಾಲದ ಒಂದು ಗ್ರಂಥ. ಇದನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಮೊದಲು ಭಾರತವನ್ನು ಅದರ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಸಂವಿಧಾನದ ಮಹತ್ವವನ್ನು ತಿಳಿಯಲು ಸಾಧ್ಯವಿಲ್ಲ ಎಂದರು.

ಸ್ವಾತಂತ್ರ್ಯ ಎನ್ನುವುದು ಸ್ವೇಚ್ಚಚಾರವಲ್ಲ. ಅದನ್ನು ನಮ್ಮಗೆ ನಾವೇ ಪಡೆದುಕೊಂಡಿದ್ದು. ಭಾರತ ವಿಶಿಷ್ಟವಾದ ದೇಶ. ಗಾತ್ರದಲ್ಲಿ 7 ನೆೇ ಹಾಗೂ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಜನಸಂಖ್ಯೆಯನ್ನು ಮಾನವ ಸಂಪನ್ಮೂಲವನ್ನಾಗಿ  ಸದ್ಬಳಕೆ  ಮಾಡಿಕೊಳ್ಳಬೇಕು. ನಮ್ಮ ಸಂವಿಧಾನವನ್ನು ರಚಿಸಲು 7 ಜನರ   ಗುಂಪನ್ನು ನಿರ್ಮಿಸಲಾಗಿತ್ತು, ಸಂವಿಧಾನದ ರಚನಾ ಸಭೆಯಲ್ಲಿ 6 ಜನರು ನಾನಾ ಕಾರಣಗಳಿಂದ ಸಕ್ರಿಯವಾಗಿ ಸಂವಿಧಾನ ರಚನೆಯಲ್ಲಿ ಭಾಗವಹಿಸದಿದ್ದಾಗ, ಬಾಬಾ ಸಾಹೇಬ್ ಅಂಬೇಡ್ಕರ್ ರವರೆ ಸಂವಿಧಾನ ರಚನೆಯ ಹೊಣೆ ಹೊತ್ತು,  ದಿನದ 18 ಗಂಟೆಗಳ ಕಾಲ ಶ್ರಮವಹಿಸಿ, ಸತತ 2 ವರ್ಷ 11 ತಿಂಗಳ 17 ದಿನಗಳ ಕಾಲಾವಧಿಯಲ್ಲಿ ಬಡವರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ಹಾಗೂ ಸಮಾಜದ ಎಲ್ಲಾ ಜನರಿಗೂ  ಉಪಯುಕ್ತ ವಾಗುವಂತಹ ಸಂವಿಧಾನವನ್ನು ರಚಿಸಿ ನೀಡಿದರು. ಈ ಕಾರಣದಿಂದಲೇ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಸಂವಿಧಾನದ ಶಿಲ್ಪಿ ಎಂದು ಕರೆಯಲಾಗುತ್ತದೆ  ಎಂದು ಮಾಹಿತಿ ನೀಡಿದರು.

ಸಂವಿಧಾನವನ್ನು ಜಾರಿ ಮಾಡುವ ಸಂದರ್ಭದಲ್ಲಿ 7000ಕ್ಕೂ ಹೆಚ್ಚು ಟೀಕೆ ಟಿಪ್ಪಣಿಗಳು ಬಂದಿದ್ದವು.ಅವುಗಳಿಗೆ  ಸಮರ್ಥನೀಯ  ಸ್ಪಷ್ಟನೆ ನೀಡುವ ಮೂಲಕ ಅಂಬೇಡ್ಕರ್ ರವರು ಪ್ರಪಂಚದ ಬೃಹತ್ ಹಾಗೂ ಅರ್ಥಪೂರ್ಣ ಸಂವಿಧಾನವನ್ನು ನಮಗೆ ನೀಡಿದರು. ಅಂತಹ ಸಂವಿಧಾನವನ್ನು ದೇಶದ ಭರವಸೆ ನಮ್ಮ ಯುವ ಶಕ್ತಿಯು ರಕ್ಷಿಸಬೇಕು. ಸಂವಿಧಾನ ಆಶಾಯದ ಸ್ವತಂತ್ರ, ಸಮಾನತೆ ಭಾವನೆಯನ್ನು ಬೆಳೆಸಿಕೊಂಡು ಯುವ ಜನತೆ ಮೊದಲು ಮುಂದೆ ಬರಬೇಕು. ದೇಶದ ಪ್ರತಿಯೊಬ್ಬರು ಅದರಲ್ಲಿ ಮುಖ್ಯವಾಗಿ ಯುವ ಶಕ್ತಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಒಂದು ಪ್ರಜಾಪ್ರಭುತ್ವ ದೇಶವನ್ನು ನಿರ್ಮಾಣ ಮಾಡಲು  ನೀವು ಯಾವ ಸರ್ಕಾರವನ್ನು ಪಡೆದುಕೊಳ್ಳಬೇಕು ಎಂಬುದು ನಮ್ಮ ಆಯ್ಕೆಯಾಗಿರುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆಗಳ ಮೂಲಕ ಅದನ್ನು ಸರಿ ದಾರಿಯಲ್ಲಿ ತೆಗೆದು ಕೊಂಡು ಹೋಗುವಂತೆ ಯುವ ಜನರು ಜಾಗೃತರಾಗಿರಬೇಕು.. ಈ ಮೂಲಕ ಈ ದೇಶವನ್ನು ಭದ್ರವಾಗಿ ಕಟ್ಟುವಲ್ಲಿ ಯುವ ಜನತೆ ಕೈ ಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಆಶಾದ್ ಉರ್ ರಹಮಾನ್ ಶರೀಫ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ, ಅಹಿಂದ ಜವರೇಗೌಡ ಹಾಗೂ ಸೋಮಯ್ಯ ಮಲೆಯೂರು ಸೇರಿದಂತೆ  ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿದ್ಯಾರ್ಥಿ ನಿಲಯದ ನಿಲಯಪಾಲಕರು ಮತ್ತು  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.