ಬೆಂಗಳೂರು: ನಮ್ಮ ಉದ್ದೇಶ ಅಧಿಕಾರಕ್ಕೆ ಬರುವುದಲ್ಲ. ನಮ್ಮ ಉದ್ದೇಶ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯಾತೀತತೆ ಹಾಗೂ ಸಾಮಾಜಿಕ ನ್ಯಾಯ ರಕ್ಷಿಸುವುದಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ಒಕ್ಕೂಟದ ಸಭೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ವಿಪಕ್ಷಗಳ ಮೈತ್ರಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಅಧಿಕಾರದ ಆಸೆ ಅಥವಾ ಪ್ರಧಾನಿಯಾಗುವ ಇಚ್ಛೆ ಇಲ್ಲ. ನಮ್ಮ ಉದ್ದೇಶ ಅಧಿಕಾರಕ್ಕೆ ಬರುವುದಲ್ಲ ಎಂದಿದ್ದಾರೆ.
ನಾವಿಲ್ಲಿ 26 ಪಕ್ಷಗಳಿದ್ದೇವೆ. ಒಟ್ಟಿಗೆ ನಾವು 11 ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿದ್ದೇವೆ. ಬಿಜೆಪಿ ತನ್ನದೇ ಸ್ವಂತ ಬಲದಲ್ಲಿ 303 ಸ್ಥಾನಗಳನ್ನು ಗಳಿಸಲು ಸಾಧ್ಯವಿಲ್ಲ. ಬಿಜೆಪಿ ತನ್ನ ಮೈತ್ರಿಯ ಮತಗಳನ್ನು ಬಳಸಿ ಅಧಿಕಾರಕ್ಕೆ ಬಂದಿದೆ. ಬಳಿಕ ಮೈತ್ರಿ ಪಕ್ಷಗಳನ್ನು ದೂರ ಮಾಡಿದೆ. ಇಂದು ಬಿಜೆಪಿ ಅಧ್ಯಕ್ಷರು ಮತ್ತು ಅದರ ನಾಯಕರು ತಮ್ಮ ಹಳೆ ಮಿತ್ರ ಪಕ್ಷಗಳನ್ನು ಒಟ್ಟಾಗಿ ಕೊಂಡೊಯ್ಯಲು ರಾಜ್ಯ, ರಾಜ್ಯ ಸುತ್ತುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ವಿಪಕ್ಷಗಳ ವಿರುದ್ಧ ಎಲ್ಲಾ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಶಸ್ತ್ರವಾಗಿ ಬಳಸುತ್ತಿದ್ದಾರೆ. ಸಿಬಿಐ, ಇಡಿ ಮತ್ತು ಐಟಿಯನ್ನು ನಿರಂತರವಾಗಿ ವಿಪಕ್ಷಗಳ ವಿರುದ್ಧ ಬಳಸುತ್ತಿದ್ದಾರೆ. ನಮ್ಮ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ನಮ್ಮ ಸಂಸದರ ವಜಾಕ್ಕೆ ಬಳಸುತ್ತಿದ್ದಾರೆ. ಶಾಸಕರನ್ನು ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ. ಅವರನ್ನು ಬಿಜೆಪಿಗೆ ಹೋಗುವಂತೆ ಮಾಡಿ, ಸರ್ಕಾರಗಳನ್ನು ಬೀಳಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ಸಭೆಯಲ್ಲಿ ಆತಂಕ ಹೊರಹಾಕಿದ್ದಾರೆ ಎಂದು ಹೇಳಲಾಗಿದೆ.