ಮನೆ ಕ್ರೀಡೆ ನಮ್ಮ ಮುಂದಿನ ಗುರಿ ಟಿ20 ವಿಶ್ವಕಪ್‌: ವಿರಾಟ್‌ ಕೊಹ್ಲಿ

ನಮ್ಮ ಮುಂದಿನ ಗುರಿ ಟಿ20 ವಿಶ್ವಕಪ್‌: ವಿರಾಟ್‌ ಕೊಹ್ಲಿ

0

ದುಬೈ(Dubai): ಅಫಘಾನಿಸ್ತಾನ ವಿರುದ್ಧ ಏಷ್ಯಾ ಕಪ್‌ ಟೂರ್ನಿಯ ಸೂಪರ್‌-4ರ ಪಂದ್ಯದಲ್ಲಿ ಟಿ-20ಐ ಕ್ರಿಕೆಟ್‌ನ ಚೊಚ್ಚಲ ಶತಕ ಸಿಡಿಸಿದ್ದಕ್ಕೆ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಗುರುವಾರ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ವಿರಾಟ್‌ ಕೊಹ್ಲಿ ಎದುರಿಸಿದ 61 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್‌ ಹಾಗೂ 12 ಮನಮೋಹಕ ಬೌಂಡರಿಗಳೊಂದಿಗೆ ಅಜೇಯ 122 ರನ್ ಸಿಡಿಸಿದರು.
ವಿರಾಟ್‌ ಕೊಹ್ಲಿ ಶತಕದ ಬಲದಿಂದ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ ಕೇವಲ 2 ವಿಕೆಟ್‌ ನಷ್ಟಕ್ಕೆ 212 ರನ್‌ ಗಳಿಸಿತು. ಬಳಿಕ 213 ರನ್‌ ಗುರಿ ಹಿಂಬಾಲಿಸಿದ ಅಫಘಾನಿಸ್ತಾನ ತಂಡ, ಭುವನೇಶ್ವರ್‌ ಕುಮಾರ್‌(4ಕ್ಕೆ 5) ಮಾರಕ ದಾಳಿಗೆ ನಲುಗಿ 111 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ 101 ರನ್‌ಗಳಿಂದ ಸೋಲು ಅನುಭವಿಸಿತು.

ಪಂದ್ಯದ ಬಳಿಕ ಸಂದರ್ಶನದಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, ಒಂದು ತಂಡವಾಗಿ ನಮಗೆ ಇಂದು ಅತ್ಯಂತ ವಿಶೇಷ ದಿನ. ಕೊನೆಯ ಪಂದ್ಯದ ಬಳಿಕ ನಾವು ವರ್ತನೆಯ ಬಗ್ಗೆ ಮಾತನಾಡಿದ್ದೆವು. ಅದರಂತೆ ಈ ರೀತಿಯ ವರ್ತನೆ ಪಂದ್ಯದಲ್ಲಿ ನಮಗೆ ಅಗತ್ಯವಿದೆ. ಈ ಟೂರ್ನಿ ನಮಗೆ ಅಗತ್ಯವಿತ್ತು. ನಾಕೌಟ್‌ ಹಂತಕ್ಕೆ ಹಾಗೂ ಒತ್ತಡಕ್ಕೆ ನಾವು ಹೊಂದಿಕೊಂಡಿದ್ದೆವು. ಗುರಿ ಏನೆಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಅದೇನೆಂದರೆ ಆಸ್ಟ್ರೇಲಿಯಾದಲ್ಲಿನ ಟಿ20 ವಿಶ್ವಕಪ್‌. ಈ ಟೂರ್ನಿಗಾಗಿ ನಾವು ಸುಧಾರಣೆ ಕಂಡುಕೊಳ್ಳುತ್ತೇವೆ ಹಾಗೂ ಅನುಭವದಿಂದ ನಾವು ಕಲಿಯುತ್ತೇವೆ. ಆದರೆ, ಕೆಲ ಪಂದ್ಯಗಳು ನಮ್ಮ ಪಾಲಿಗೆ ಚೆನ್ನಾಗಿರಲಿಲ್ಲ ಎಂದು ಹೇಳಿದರು.
ಪಂದ್ಯದಲ್ಲಿ ಮುಕ್ತವಾಗಿ ಬ್ಯಾಟ್‌ ಮಾಡುವ ಸಲುವಾಗಿ ಟೀಮ್‌ ಮ್ಯಾನೇಜ್‌ಮೆಂಟ್‌ ಜೊತೆ ನಡೆಸಿದ್ದ ಸಂಭಾಷಣೆಯನ್ನು ವಿರಾಟ್‌ ಕೊಹ್ಲಿ ಇದೇ ವೇಳೆ ಬಹಿರಂಗಪಡಿಸಿದ್ದಾರೆ. ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡುಕೊಳ್ಳುವುದು ತಮ್ಮ ಮುಖ್ಯ ಗುರಿ ಎಂದು ತಿಳಿಸಿದರು.
ಇದೇ ಹಾದಿಯಲ್ಲಿ ನಾನು ಬ್ಯಾಟ್‌ ಮಾಡಬೇಕಾಗಿದೆ. ಏಕೆಂದರೆ ನಮ್ಮ ಮುಖ್ಯ ಗುರಿ ಟಿ20 ವಿಶ್ವಕಪ್‌ ಟೂರ್ನಿ. ನಾನು ಚೆನ್ನಾಗಿ ಆಡಿದರೆ, ತಂಡಕ್ಕೆ ಇನ್ನಷ್ಟು ಕೊಡುಗೆಯನ್ನು ನೀಡಬಹುದು. ಇದು ನನ್ನ ಯೋಜನೆ. ರಾಹುಲ್ ದ್ರಾವಿಡ್‌ ಬಳಿ ಮಾತನಾಡಿದಾಗ, ಮೊದಲು ಬ್ಯಾಟ್‌ ಮಾಡುವಾಗ ಹೇಗೆ ಬ್ಯಾಟಿಂಗ್‌ ಸುಧಾರಣೆ ಕಂಡುಕೊಳ್ಳಬಹುದು ಹಾಗೂ ಸ್ಟ್ರೈಕ್‌ ರೇಟ್ ಹೇಗೆ ಹೆಚ್ಚಿಸಿಕೊಳ್ಳಬೇಕೆಂಬ ಬಗ್ಗೆ ಅವರು ಹೇಳಿದರು. ತಂಡದ ಅಗತ್ಯತೆಗೆ ತಕ್ಕಂತೆ ಬ್ಯಾಟಿಂಗ್‌ ಸುಧಾರಿಸಿಕೊಳ್ಳಲು ನಾನು ಈ ಟೂರ್ನಿಯಲ್ಲಿ ಪ್ರಯತ್ನಿಸಿದೆ ಎಂದು ವಿರಾಟ್‌ ಕೊಹ್ಲಿ ಹೇಳಿದರು.

ಹಿಂದಿನ ಲೇಖನದೇಶಾದ್ಯಂತ ಜಲಪ್ರಳಯ ಎದುರಾಗಲಿದೆ: ಕೋಡಿಮಠದ ಶ್ರೀಗಳ ಭವಿಷ್ಯ
ಮುಂದಿನ ಲೇಖನಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕನ ಶವವಿಟ್ಟು ಪ್ರತಿಭಟನೆ: ಲಾಠಿ ಪ್ರಹಾರ