ಕನ್ನಡದಲ್ಲಿ ಕಾಲೇಜ್ ಲವ್ ಸ್ಟೋರಿಗಳು ಸಾಕಷ್ಟು ಬಂದಿವೆ. ಕಾಲೇಜಿನ ಹರೆಯದಲ್ಲಿ ಆರಂಭವಾಗುವ ಪ್ರೀತಿ ಮುಂದೆ ನಾನಾ ಸ್ವರೂಪ ಪಡೆಯುವುದರೊಂದಿಗೆ ಸಾಗುತ್ತದೆ. ಈ ವಾರ ತೆರೆಕಂಡಿರುವ “ಔಟ್ ಆಪ್ ಸಿಲೆಬಸ್’ ಚಿತ್ರ ಕೂಡಾ ಒಂದು ಲವ್ ಸ್ಟೋರಿ. ಹಾಗಂತ ಕೇವಲ ಲವ್ ಸ್ಟೋರಿಯಾಗದೇ ಇಂದಿನ ಯೂತ್ಸ್ ಗೆ ಬೇಕಾದ ಒಂದಷ್ಟು ಉತ್ತಮ ಸಂದೇಶ ಕೂಡಾ ಇದೆ.
ಕಥೆಯ ಬಗ್ಗೆ ಹೇಳುವುದಾದರೆ ಸಣ್ಣ ವಯಸ್ಸಿನಲ್ಲೇ ಸ್ವಂತಃ ಕಾಲ ಮೇಲೆ ನಿಂತಿರುವ ಯುವಕ ಮುಂದೆ ಬೆಳೆದು ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋಗುತ್ತಾನೆ. ಹೀಗಿರುವಾಗ ಆತನ ಪ್ರೀತಿಸಿದ ಯುವತಿ, ಆಕೆಯ ಮನೆಯವರ ಒತ್ತಡ.. ಇಂತಹ ಗೊಂದಲಮಯ ಸನ್ನಿವೇಶದಲ್ಲಿ ಪ್ರೇಮಿಗಳು ಒಂದಾಗುತ್ತಾರಾ ಅಥವಾ ಬೇರೆಯಾಗುತ್ತಾರಾ ಎಂಬುದೇ ಚಿತ್ರದ ಕುತೂಹಲದ ಘಟ್ಟ.
ಚಿತ್ರದಲ್ಲಿ ಕಾಲೇಜು ಲೈಫ್, ಪ್ರೀತಿ, ಪ್ರೇಮ, ಜೀವನ ಪಯಣದ ಏರಿಳಿತಗಳನ್ನು ಚಿತ್ರದಲ್ಲಿ ತುಂಬಾ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಮುಖ್ಯವಾಗಿ ಚಿತ್ರದಲ್ಲಿ ಬರುವ ಭಾವುಕ ದೃಶ್ಯಗಳು ಗಮನ ಸೆಳೆಯುತ್ತವೆ. ಕಾಲೇಜು ವಿದ್ಯಾರ್ಥಿಗಳಿಗೆ, ಪ್ರೇಮಿಗಳಿಗೆ ಸಂಬಂಧಿಸಿದ ಹಲವು ಅಂಶಗಳು ಚಿತ್ರದಲ್ಲಿದ್ದು, ಕಥೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ.
ನಟನೆ, ನಿರ್ದೇಶನದಲ್ಲಿ ಪ್ರದೀಪ್ ಗಮನ ಸೆಳೆಯುತ್ತಾರೆ. ಒಂದು ಸರಳ ಕಥೆಯನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ. ನಾಯಕಿಯಾಗಿ ದಿವ್ಯಾ ಪಾತ್ರದಲ್ಲಿ ಹೃತಿಕಾ ನಟಿಸಿದ್ದಾರೆ. ಉಳಿದಂತೆ ಜಹಾಂಗೀರ್, ಯೋಗರಾಜ್ ಭಟ…, ಮಹಾಂತೇಶ್ ಮತ್ತು ಲಕ್ಷ್ಮಣ್ ನಟಿಸಿದ್ದಾರೆ. ಒಂದು ಪ್ರಯತ್ನವಾಗಿ ಔಟ್ ಆಫ್ ಸಿಲೆಬಸ್ ಮೆಚ್ಚಬಹುದಾದ ಸಿನಿಮಾ.














