ನವದೆಹಲಿ : ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 1000ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇಂಡಿಗೋ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದು, ಫೆಬ್ರವರಿ ವೇಳೆಗೆ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದೆ.
ಈ ಕುರಿತು ಇಂಡಿಗೋ ಡಿಜಿಸಿಎಗೆ ಮಾಹಿತಿ ನೀಡಿದ್ದು, ಸದ್ಯದಲ್ಲೇ ಈ ಸಮಸ್ಯೆಗೆ ಪರಿಹಾರ ಸಿಗದಿರಬಹುದು. ಆದರೆ ಫೆಬ್ರವರಿ 10ರ ವೇಳೆಗೆ ವಿಮಾನಗಳ ಹಾರಾಟವನ್ನು ಪುನರಾರಂಭಿಸಲಾಗುವುದು ಎಂದು ತಿಳಿಸಿದೆ. ಕಳೆದೆರಡು ದಿನಗಳಿಂದ ಸಮಸ್ಯೆ ಅನುಭವಿಸುತ್ತಿರುವ ಗ್ರಾಹಕರಿಗೆ ಕ್ಷಮೆಯಾಚಿಸಿದೆ.
ಕಳೆದ ಮೂರು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, ಸಿಬ್ಬಂದಿ ಸಮಸ್ಯೆಯಿಂದ ಅಂತಾರಾಷ್ಟ್ರೀಯ ಹಾಗೂ ದೇಶೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಕೂಡ ದೇಶವ್ಯಾಪಿ ಸಮಸ್ಯೆ ಮುಂದುವರಿದಿದ್ದು, ಇಂಡಿಗೋ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
ದೆಹಲಿಯಲ್ಲಿ ನಿರ್ಗಮನ ಮತ್ತು ಆಗಮನ ಸೇರಿದಂತೆ 220ಕ್ಕೂ ಹೆಚ್ಚು ವಿಮಾನ, ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ವಿಮಾನ ಹಾಗೂ ಹೈದರಾಬಾದ್ನಲ್ಲಿ 90ಕ್ಕೂ ವಿಮಾನಗಳು ಸೇರಿದಂತೆ ದೇಶ್ಯಾದ್ಯಂತ 500ಕ್ಕೂ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ವಿಮಾನಗಳ ವಿಳಂಬ, ರದ್ದಿನಿಂದ ನಿಲ್ದಾಣಗಳಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು, ಎಕ್ಸ್ ಖಾತೆಯಲ್ಲಿ ಇಂಡಿಗೋಗೆ ಟ್ಯಾಗ್ ಮಾಡಿ ಅಸಮಾಧಾನ ಹೊರಹಾಕ್ತಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಇಂಡಿಗೋ ಕೌಂಟರ್ಗಳ ಮುಂದೆ ಟಿಕೆಟ್ ಕ್ಯಾನ್ಸಲ್ ಮಾಡಲು ಜನರು ಕ್ಯೂ ನಿಂತಿದ್ದಾರೆ. ಬೆಂಗಳೂರಿನಲ್ಲಿ ವಿಮಾನ ವಿಳಂಬವಾದ ಹಿನ್ನೆಲೆ ಪ್ರಯಾಣಿಕರು ನಿಲ್ದಾಣದಲ್ಲಿ ಭಜನೆ ಮಾಡಿ, ಹರೇ ಕೃಷ್ಣ ಹರೇ ರಾಮ ಅಂತ ಹಾಡಿ ನೃತ್ಯ ಮಾಡಿದ್ದಾರೆ.














