ನೆಲಮಂಗಲ(Nelamangala): ಚಿಲ್ಲರೆ ಅಂಗಡಿಯ ವಿಚಾರಕ್ಕಾಗಿ ಇಬ್ಬರು ಮಾಲೀಕರು ಪರಸ್ಪರ ಹೊಡೆದಾಡಿಕೊಂಡಿದ್ದು, ಮಾಲೀಕನೊಬ್ಬ ಕಾಲು ಕಳೆದುಕೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಹಾಲೇನಹಳ್ಳಿಯಲ್ಲಿ ಘಟನೆ ನಡೆದಿದೆ.
ಹಾಲೇನಹಳ್ಳಿ ಗ್ರಾಮದ ನಿವಾಸಿ, ಹಲ್ಲೆಗೊಳಗಾದ ಮೃತ್ಯುಂಜಯ ಹಾಗೂ ಹಲ್ಲೆ ಮಾಡಿದ ಆರೋಪಿ ಜಯರಾಮು ಒಂದೇ ಗ್ರಾಮದವರು.
ಕೆಲವು ದಿನಗಳ ಹಿಂದೆ ಮೃತ್ಯುಂಜಯನ ತಮ್ಮ ಕೃಷ್ಣಮೂರ್ತಿ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ತಮ್ಮನ ಜೀವನಕ್ಕೆ ಆಧಾರವಾಗಲೆಂದು ಗ್ರಾಮದಲ್ಲಿ ಚಿಲ್ಲರೆ ಅಂಗಡಿ ಹಾಕಿಕೊಟ್ಟಿದ್ದರು. ಇದರಿಂದ ಗ್ರಾಮದಲ್ಲಿ ಈಗಾಗಲೇ ಚಿಲ್ಲರೆ ಅಂಗಡಿ ಹಾಕಿಕೊಂಡಿದ್ದ ಜಯರಾಮುವಿನ ವ್ಯಾಪಾರಕ್ಕೆ ತೊಂದರೆ ಉಂಟಾಗಿತ್ತು.
ಹೀಗಾಗಿ ಎರಡು ಅಂಗಡಿ ಮಾಲೀಕರು ಪೈಪೋಟಿಗಿಳಿದಿದ್ದಾರೆ. ಇಬ್ಬರ ನಡುವೆ ಜಗಳವೂ ನಡೆಯುತ್ತಿತ್ತು. ಈ ಸಂಘರ್ಷ ವಿಕೋಪಕ್ಕೆ ತಿರುಗಿ ಮೃತ್ಯುಂಜಯ ಕಾಲನ್ನು ಜಯರಾಮು ಕತ್ತರಿಸಿದ್ದಾನೆ.
ಘಟನೆ ಸಂಬಂಧ ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.