ಮನೆ ಕಾನೂನು ಪ. ಪಂಗಡದ ಕ್ರೈಸ್ತ ವ್ಯಕ್ತಿಯ ಸಮಾಧಿ ಕುರಿತು ಸುಪ್ರೀಂ ಕೋರ್ಟ್‌ ಭಿನ್ನ ತೀರ್ಪು: ವಿಸ್ತೃತ ಪೀಠಕ್ಕಿಲ್ಲ...

ಪ. ಪಂಗಡದ ಕ್ರೈಸ್ತ ವ್ಯಕ್ತಿಯ ಸಮಾಧಿ ಕುರಿತು ಸುಪ್ರೀಂ ಕೋರ್ಟ್‌ ಭಿನ್ನ ತೀರ್ಪು: ವಿಸ್ತೃತ ಪೀಠಕ್ಕಿಲ್ಲ ಪ್ರಕರಣ

0

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ವ್ಯಕ್ತಿಯ ದೇಹವನ್ನು ಹಳ್ಳಿಯೊಂದ ಸ್ಮಶಾನದಲ್ಲಿ ಸಮಾಧಿ ಮಾಡುವ ಹಕ್ಕಿನ ಕುರಿತಾಗಿ ಸುಪ್ರೀಂ ಕೋರ್ಟ್‌ ವಿಭಾಗೀಯ ಪೀಠ ಭಿನ್ನ ತೀರ್ಪಿತ್ತಾದರೂ ಅಂತಿಮವಾಗಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸದೆ ಇತ್ಯರ್ಥಪಡಿಸಿತು.

Join Our Whatsapp Group

ಮೃತ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರಿಂದ ಆತನ ಹಿಂದೂ ಪೂರ್ವಜರನ್ನು ಸಮಾಧಿ ಮಾಡಿದ ಸಾಮಾನ್ಯ ಸ್ಮಶಾನದಲ್ಲಿ ಸಮಾಧಿ ಮಾಡಬಹುದೇ ಎಂಬುದು ವಿವಾದದ ಮೂಲ.

ಸಂಭಾವ್ಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ತಪ್ಪಿಸಲು ಗ್ರಾಮದಿಂದ 20 ಕಿಲೋಮೀಟರ್ ದೂರದಲ್ಲಿ ಕ್ರೈಸ್ತರಿಗೆ ಇರುವ ಪ್ರತ್ಯೇಕ ಸ್ಮಶಾನದಲ್ಲಿ ಮೃತ ವ್ಯಕ್ತಿಯನ್ನು ಸಮಾಧಿ ಮಾಡಬೇಕು ಎಂದು ಛತ್ತೀಸ್‌ಗಢ ಸರ್ಕಾರ ಹೇಳಿತ್ತು.

ಮತ್ತೊಂದೆಡೆ, ಮೃತ ವ್ಯಕ್ತಿಯ ಮಗ ತನ್ನ ಪೂರ್ವಜರಂತೆಯೇ ಹಿಂದೂ ಸ್ಮಶಾನದಲ್ಲಿಯೇ ತನ್ನ ತಂದೆ ಸಮಾಧಿ ಹೊಂದುವ ಹಕ್ಕು ಆತನಿಗೆ ಇದೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಮಾತ್ರಕ್ಕೆ ಅಂತಹ ತಾರತಮ್ಯ ಎದುರಿಸಬಾರದು ಎಂದು ಹೇಳಿದರು.

ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಸೂಕ್ತ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ.

ಆದರೆ, ಮೃತ ವ್ಯಕ್ತಿಯ ಶವ ಹಲವು ದಿನಗಳಿಂದ ಶವಾಗಾರದಲ್ಲಿ ಇದ್ದುದರಿಂದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸದೆ ಬದಲಾಗಿ, ರಾಜ್ಯ ಸರ್ಕಾರ ಸೂಚಿಸಿದಂತೆ ಶವವನ್ನು 20 ಕಿಲೋಮೀಟರ್ ದೂರದಲ್ಲಿ ಸಮಾಧಿ ಮಾಡುವಂತೆ ನಿರ್ದೇಶನ ನೀಡಿತು.

ಅಸ್ತಿತ್ವದಲ್ಲಿರುವ ನಿಯಮಗಳು ಸಾಮಾನ್ಯವಾಗಿ ಅಂತಹ ಆಯ್ಕೆಗೆ ಅನುಮತಿ ನೀಡುವುದಿಲ್ಲ ಎಂಬ ಸರ್ಕಾರದ ಕಳವಳದ ಹೊರತಾಗಿಯೂ ನ್ಯಾ. ನಾಗರತ್ನ ಅವರು ಮೃತ ವ್ಯಕ್ತಿಯನ್ನು ಅವರ ಕುಟುಂಬದ ಖಾಸಗಿ ಕೃಷಿ ಭೂಮಿಯಲ್ಲಿ ಹೂಳಲು ಪ್ರಸ್ತಾಪಿಸಿದರು. ಅಂತಿಮ ಸಂಸ್ಕಾರದ ವೇಳೆ ಸರ್ಕಾರ ಭದ್ರತೆ ಒದಗಿಸಬೇಕೆಂದು ಸೂಚಿಸಿದರು. ಎರಡು ತಿಂಗಳೊಳಗೆ ಎಲ್ಲಾ ರಾಜ್ಯಗಳಾದ್ಯಂತ ಕ್ರಿಶ್ಚಿಯನ್ನರಿಗೆ ರಾಜ್ಯ ಸರ್ಕಾರ ಸ್ಮಶಾನ ಭೂಮಿ ನಿಗದಿಪಡಿಸಬೇಕು ಎಂದೂ ಅವರು ಹೇಳಿದರು.

ಗ್ರಾಮದ ಸ್ಮಶಾನದಲ್ಲಿ ಕ್ರೈಸ್ತ ವ್ಯಕ್ತಿಯನ್ನು ಹೂಳಲು ನಿರಾಕರಿಸಿರುವುದು ದುರದೃಷ್ಟಕರ. ಅದು ತಾರತಮ್ಯದಾಯಕ ಮತ್ತು ಸಂವಿಧಾನ ವಿರೋಧಿ ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟರು. ಗ್ರಾಮ ಪಂಚಾಯತ್‌ನ ಧೋರಣೆ ತಾರತಮ್ಯ ಉಂಟು ಮಾಡುವಂತಿದ್ದು ಇಂತಹ ವರ್ತನೆಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ. ಇದು ಜಾತ್ಯತೀತತೆಯ ತತ್ವಕ್ಕೆ ಬಗೆದ ದ್ರೋಹ ಎಂದರು.

ಆದರೆ ಈ ಅಂಶಗಳ ಬಗ್ಗೆ ನ್ಯಾ. ಶರ್ಮಾ ಅಸಮ್ಮತಿ ವ್ಯಕ್ತಪಡಿಸಿದರು. ಅಲ್ಲಗಳೆಯುವ ಮತ್ತು ಭ್ರಮಾತ್ಮಕ ಹಕ್ಕುಗಳು ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿ ಉಂಟುಮಾಡಬಹುದು. ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆ ಸಮಾಜದ ಆದ್ಯ ಹಿತಾಸಕ್ತಿಯಾಗಿದೆ ಎಂದು ಅವರು ಹೇಳಿದರು.

ಧಾರ್ಮಿಕ ಸ್ವಾತಂತ್ರ್ಯ ಎಂಬುದು ಮತ್ತೊಂದು ಧರ್ಮಕ್ಕೆ ಮೀಸಲಾದ ಜಾಗದಲ್ಲಿ ಸಮಾಧಿ ಮಾಡುವ ಹಕ್ಕನ್ನು ಪಡೆಯುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಅಂತೆಯೇ, ಮೃತ ವ್ಯಕ್ತಿಯ ಸಮಾಧಿಯನ್ನು ಆತನ ಗ್ರಾಮದ ಸ್ಮಶಾನದಲ್ಲಿ ನಡೆಸಲು ಅನುಮತಿ ನೀಡದ ಛತ್ತೀಸ್‌ಗಢ ಹೈಕೋರ್ಟ್‌ ನಿರ್ಧಾರವನ್ನು ಅವರು ಎತ್ತಿಹಿಡಿದರು. ಶವವನ್ನು 20 ಕಿಲೋಮೀಟರ್ ದೂರದ ಸ್ಮಶಾನಕ್ಕೆ ಸಾಗಿಸಲು ರಾಜ್ಯ ಸರ್ಕಾರ ರಕ್ಷಣೆ ನೀಡಬೇಕು ಎಂದು ಅವರು ಹೇಳಿದರು.

ಅರ್ಜಿ ಸಲ್ಲಿಸಿದ್ದ ಮೃತ ವ್ಯಕ್ತಿಯ ಮಗನ ಪರವಾಗಿ ಹಿರಿಯ ವಕೀಲ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ವಾದ ಮಂಡಿಸಿದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಛತ್ತೀಸ್‌ ಗಢ ಸರ್ಕಾರವನ್ನು ಪ್ರತಿನಿಧಿಸಿದರು.