ಸೂರ್ಯನಮಸ್ಕಾರದ ಮೂರನೇ ಸ್ಥಿತಿಗೆ ಪಾದಹಸ್ತಾಸನವೆಂಬ ಹೆಸರಿದೆ. ಈ ಸ್ಥಿತಿಯಲ್ಲಿ ಪಾದ ಮತ್ತು ಅಂಗೈಗಳು ಸಂಪೂರ್ಣವಾಗಿ ನೆಲದ ಮೇಲೆ ಇರುತ್ತದೆ.
ಮಾಡುವ ಕ್ರಮ:
1) ಎರಡೂ ಪಾದಗಳನ್ನು ಒಟ್ಟಿಗೆ ಜೋಡಿಸಿ, ಎದೆ ಎತ್ತಿ, ನಮಸ್ಕಾರ ಮುದ್ರೆಯಲ್ಲಿ ಭೂಮಿಗೆ ಲಂಬವಾಗಿ (ಸೂರ್ಯನಮಸ್ಕಾರ ಸ್ಥಿತಿ 1ರಂತೆ) ನಿಂತುಕೊಳ‍್ಳಬೇಕು.
2) ಕಾಲುಗಳ ಸ್ಥಿತಿಯನ್ನು ಬದಲಿಸದೆ ದೀರ್ಘವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ, ನಮಸ್ಕಾರ ಮುದ್ರೆಯಲ್ಲಿ (ಸೂರ್ಯ ನಮಸ್ಕಾರ ಸ್ಥಿತಿ 2ರಂತೆ) ನಿಲ್ಲಬೇಕು.
3) ಅನಂತರ ಉಸಿರನ್ನು ನಿಧಾನವಾಗಿ ಹೊರಕ್ಕೆ ಬಿಡುತ್ತಾ ಮುಂದಕ್ಕೆ ಬಾಗಬೇಕು. ಆದರೆ ಮುಂದಕ್ಕೆ ಬಾಗುವಾಗ ಸೊಂಟ ಮತ್ತು ಮೊಣಕಾಲುಗಳನ್ನು ಬಗ್ಗಿಸಬಾರದು. ಒಮ್ಮೆ ಚಿತ್ರದಲ್ಲಿರುವ ಸ್ಥಿತಿಯನ್ನು ತಲುಪಿದ ನಂತರ ಒಂದೆರಡು ಕ್ಷಣಗಳಾದರೂ ಅದೇ ಸ್ಥಿತಿಯಲ್ಲಿರಬೇಕು. ಪಾದಹಸ್ತಾಸನದ ಪೂರ್ಣ ಸ್ಥಿತಿಯಲ್ಲಿ ಮಂಡಿಚಿಪ್ಪುಗಳಿಗೆ ಎದೆಯನ್ನು ತಗಲಿಸಬೇಕು.
ಲಾಭಗಳು:
ಪಾದಹಸ್ತಾಸನದ ಅಭ್ಯಾಸದಿಂದ ಬೆನ್ನಿಗೆ ವಿಶೇಷವಾದ ವ್ಯಾಯಾಮ ದೊರಕುತ್ತದೆ. ಮಲಬದ್ಧತೆ ನಿವಾರಣೆಯಾಗುವುದು, ಬೊಜ್ಜು ಕರಗಿ ಹೊಟ್ಟೆ ತೆಳ್ಳಗಾಗುವುದು, ಸಾಕಷ್ಟು ಜೀರ್ಣರಸದ ಉತ್ಪತ್ತಿಯೂ ಆಗುವುದಲ್ಲದೆ ಹೊಟ್ಟೆ, ಸೊಂಟ ಮತ್ತು ತೊಡೆಗಳಲ್ಲಿನ ಅನೇಕ ತೊಂದರೆಗಳು ನಿವಾರಣೆಯಾಗುವುವು.