ಶಿವಮೊಗ್ಗ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಶಿವಮೊಗ್ಗದ ವಿಜಯನಗರ ನಿವಾಸಿ ಮಂಜುನಾಥ್ ಅವರು ಹುತಾತ್ಮರಾದ ಘಟನೆ ರಾಜ್ಯದಾದ್ಯಂತ ಶೋಕದ ಮಡು ತರಿದೆ. ಈ ಭಯಾನಕ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಮಂಜುನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿದರು.
ಸಚಿವರು ಮಾತನಾಡುತ್ತಾ, “ಇದು ಒಂದು ಅತ್ಯಂತ ದುಃಖದ ಘಟನೆ. ನಮ್ಮ ಶಿವಮೊಗ್ಗದ ಮಂಜುನಾಥ್ ಅವರು ಉಗ್ರರ ಗುಂಡೇಟಿಗೆ ಬಲಿಯಾಗಿ ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂತಹ ಕೃತ್ಯಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನನ್ನ ಸಮಸ್ತ ಸಹಾನುಭೂತಿ ಇರುತ್ತದೆ,” ಎಂದು ಹೇಳಿದರು.
ಮೃತ ಮಂಜುನಾಥ್ ಅವರ ಪತ್ನಿ ಪಲ್ಲವಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಸಚಿವರು, ಅವರ ದುಃಖವನ್ನು ಹಂಚಿಕೊಂಡು, ಸರ್ಕಾರದಿಂದ ಸಂಪೂರ್ಣ ಸಹಾಯ ಮತ್ತು ಬೆಂಬಲ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. “ಪಲ್ಲವಿ ಅವರನ್ನು ಧೈರ್ಯವಿಟ್ಟು ನಿಲ್ಲಿಸಲು ಪ್ರಯತ್ನಿಸಿದ್ದೇನೆ. ಇಂತಹ ಸಮಯದಲ್ಲಿ ಸರ್ಕಾರ ಅವರೊಂದಿಗೆ ನಿಲ್ಲುತ್ತದೆ ಎಂಬ ನಂಬಿಕೆಯನ್ನು ನೀಡಿದ್ದೇನೆ,” ಎಂದು ತಿಳಿಸಿದ್ದಾರೆ.
ಸಚಿವರು ಹೇಳಿದರು, “ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಸೂಚನೆಯಂತೆ ಕಾಶ್ಮೀರಕ್ಕೆ ಪೊಲೀಸ್ ಮತ್ತು ಆಡಳಿತದ ಹಿರಿಯ ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿದೆ. ಅವರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಮೃತದೇಹವನ್ನು ಸರಕ್ಷಿತವಾಗಿ ಕುಟುಂಬದವರಿಗೆ ತಲುಪಿಸಲು ಹಾಗೂ ಅಂತ್ಯಕ್ರಿಯೆಗಾಗಿ ಅಗತ್ಯವಿರುವ ಎಲ್ಲ ನೆರವು ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.”
ಪಹಲ್ಗಾಮ್ ದಾಳಿಯ ಪರಿಣಾಮವಾಗಿ ರಾಜ್ಯದಾದ್ಯಂತ ಭಯ ಮತ್ತು ಕೋಪದ ಭಾವನೆ ವ್ಯಕ್ತವಾಗಿದ್ದು, ವಿವಿಧ ಕ್ಷೇತ್ರಗಳಿಂದ ಭಯೋತ್ಪಾದನೆ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ. “ಇಂತಹ ದಾಳಿಗಳು ಶಾಂತಿ ಮತ್ತು ಸೌಹಾರ್ದತೆಗೆ ಹಾನಿ ಉಂಟುಮಾಡುತ್ತವೆ. ಇವು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿವೆ. ಇವನ್ನು ನಿಲ್ಲಿಸಲು ದೇಶದ ಪ್ರತಿಯೊಬ್ಬ ನಾಗರಿಕನು ಸಹಭಾಗಿಯಾಗಬೇಕು,” ಎಂದು ಸಚಿವರು ತಮ್ಮ ಮನವಿಯನ್ನು ವ್ಯಕ್ತಪಡಿಸಿದರು.
ಶಿವಮೊಗ್ಗದ ಜನತೆ ಈ ದುಃಖದ ಸಂದರ್ಭದಲ್ಲಿ ಮಂಜುನಾಥ್ ಅವರ ಕುಟುಂಬಕ್ಕೆ ಬೆಂಬಲ ನೀಡುತ್ತಿದ್ದು, ನಗರದಾದ್ಯಂತ ಶೋಕಾಚರಣೆಯ ವಾತಾವರಣ ಕಂಡುಬರುತ್ತಿದೆ. ಮಂಜುನಾಥ್ ಅವರ ನೆನಪಿಗಾಗಿ ಸ್ಥಳೀಯವಾಗಿ ಶ್ರದ್ಧಾಂಜಲಿ ಸಭೆಗಳನ್ನು ಆಯೋಜಿಸುವ ಚಟುವಟಿಕೆಗಳು ನಡೆಯುತ್ತಿವೆ.














