ಮೈಸೂರು(Mysuru): ಸ್ಮಾರಕಗಳು ಮತ್ತು ತಾಣಗಳ ಅಂತರರಾಷ್ಟ್ರೀಯ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರು ವಿಭಾಗದಿಂದ ಮೈಸೂರು ರೈಲು ವಸ್ತು ಸಂಗ್ರಹಾಲಯದ ಆವರಣದಲ್ಲಿ `ಭಾರತೀಯ ರೈಲ್ವೆಯ ಹಸಿರೀಕರಣ’ವಿಷಯ ಕುರಿತು ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಸ್ಪರ್ಧೆಯನ್ನು 5 ರಿಂದ 11 ವರ್ಷಗಳು ಮತ್ತು 12 ರಿಂದ 15 ವರ್ಷಗಳಾಗಿ ಎರಡು ವಯೋಮಾನದ ವಿದ್ಯಾರ್ಥಿಗಳಿಗೆ ನಡೆಸಲಾಗಿತ್ತು. ಭವಿಷ್ಯದ ಪೀಳಿಗೆಗೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುವ ತೈಲಾಧಾರಿತ ಇಂಧನಗಳನ್ನು ಕಡಿತಗೊಳಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳುವಂತಹ ಹಾಗು ಬೆರಗುಗೊಳಿಸುವ ಅದ್ಭುತ ಚಿತ್ರಗಳನ್ನು ಬಿಡಿಸುವ ಮೂಲಕ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಿದರು.
ಮೈಸೂರು ವಿಭಾಗದ ಮೂವರು ಹಿರಿಯ ಅಧಿಕಾರಿ ಸದಸ್ಯರನೊಳಗೊಂಡ ತೀರ್ಪುಗಾರರ ತಂಡ ಚಿತ್ರಕಲೆಗಳನ್ನು ಪರಮರ್ಶನ ಮಾಡಿತು.12-15 ವರ್ಷ ವಯೋಮಿತಿಯಲ್ಲಿ ತುಮಕೂರಿನ ಸೇಂಟ್ ಮೇರಿಸ್ ಕಾನ್ವೆಂಟ್‌ನ ದೀಪಾಂಜಲಿ ಪ್ರಿನ್ಸಾ, ಮೈಸೂರಿನ ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ ಸಾನ್ವಿ ಹರೀಶ್ ಮತ್ತು ಮೈಸೂರಿನ ಕ್ರೈಸ್ಟ್ ಪಬ್ಲಿಕ್ ಸ್ಕೂಲ್ ನ ನಿಖಿತಾ ಸಿ.ಪಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರೆ, 5-11 ವರ್ಷಗಳ ವಯೋಮಾನ ಗುಂಪಿನಲ್ಲಿ ಮೈಸೂರಿನ ಸೇಂಟ್ ಜೋಸೆಫ್ ಸೆಂಟ್ರಲ್ ಶಾಲೆಯ ವೇದಶ್ರೀ ವಾಲಿಂಬೆ, ಅದೇ ಶಾಲೆಯ ಧೃತಿ ವಿ.ಶಾ ಮತ್ತು ಮೈಸೂರಿನ ಪೋದರ್ ಇಂಟರ್‌ನ್ಯಾಶನಲ್ ಶಾಲೆಯ ಪ್ರೇಮ್ ಸಾಗರ್ ಗುಲಾಬ್ ರಾಠೋಡ್ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದರು.
ರೈಲು ವಸ್ತು ಸಂಗ್ರಹಾಲಯದಲ್ಲಿ ನಂತರ ನಡೆದ ಸರಳ ಸಮಾರಂಭದಲ್ಲಿ ನೈಋತ್ಯ ರೈಲ್ವೆ ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಬಿ.ಶ್ರೀನಿವಾಸುಲು ರವರು ಬಹುಮಾನ ವಿತರಿಸಿದರು.