ಇಸ್ಲಾಮಾಬಾದ್ : ಭಾರತವು ಪಾಕಿಸ್ತಾನದೊಂದಿಗೆ ತನ್ನ ಔಷಧ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದರಿಂದ ಪಾಕಿಸ್ತಾನದಲ್ಲಿ ಜನಜೀವನ ಅಸ್ಥವ್ಯಸ್ಥವಾಗಿದೆ. ಹಾವು, ಚೇಳು ಕಡಿತ, ಕ್ಯಾನ್ಸರ್, ವಿಟಮಿನ್ ಕೊರತೆ, ಮಕ್ಕಳ ಪೋಷಣಾ ಸಮಸ್ಯೆ ಮೊದಲಾದ ಮೂಲಭೂತ ವೈದ್ಯಕೀಯ ಸಮಸ್ಯೆಗಳಿಗೂ ಪಾಕಿಸ್ತಾನದಲ್ಲಿ ತೀವ್ರ ಔಷಧ ಕೊರತೆ ಉಂಟಾಗಿದೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ನಂತರ ಭಾರತ ಪಾಕಿಸ್ತಾನದೊಂದಿಗೆ ತನ್ನ ವ್ಯಾಪಾರ ವಹಿವಾಟುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಇದರಲ್ಲಿ ಪ್ರಮುಖವಾಗಿ ಔಷಧ ವಹಿವಾಟು ಕೂಡ ಸೇರಿದ್ದು, ಇದರ ಪರಿಣಾಮ ಪಾಕಿಸ್ತಾನದಲ್ಲಿ ದೈನಂದಿನ ಜೀವ ರಕ್ಷಕ ಔಷಧಗಳ ಸರಬರಾಜು ಸ್ಥಗಿತಗೊಂಡಿದೆ.
ಪಾಕಿಸ್ತಾನದಲ್ಲಿ ಬಳಕೆಯಾಗುವ 99% ಔಷಧಗಳು ಭಾರತದಿಂದ ಬರುವ ಕಚ್ಚಾ ಮಾಲು ಅಥವಾ ತಯಾರಾದ ಜೆನೆರಿಕ್ ಔಷಧಗಳಾಗಿ ಇರುತ್ತಿತ್ತು. ಈಗ ಈ ಸರಬರಾಜು ಕಡಿತಗೊಂಡಿದ್ದು, ವೈದ್ಯರು ಕೆಲಸ ತೊರೆಯುವ ಮಟ್ಟಿಗೆ ಪರಿಸ್ಥಿತಿ ಗಂಭೀರವಾಗಿದೆ.
ಹಾವು ಅಥವಾ ಚೇಳು ಕಡಿತದಂತಹ ತುರ್ತು ಪರಿಸ್ಥಿತಿಗೆ ಬಳಸುವ ವೈದ್ಯಕೀಯ ಲಸಿಕೆಗಳು ದೊರೆಯದಂತಾಗಿದೆ. ವಿಟಮಿನ್ D, ಬಿ1, ಬಿ12, ಮಕ್ಕಳ ಪೋಷಣಾ ಮಾತ್ರೆಗಳು ಸೇರಿದಂತೆ ಅನೇಕ ಸಾಮಾನ್ಯ ಔಷಧಗಳು ದುರ್ಲಭವಾಗಿವೆ. ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯೂ ತಡೆಗಟ್ಟಲ್ಪಟ್ಟಿದೆ.
ಪಾಕಿಸ್ತಾನದ ಹಲವಾರು ಆಸ್ಪತ್ರೆಗಳಲ್ಲಿ ವೈದ್ಯರು ಔಷಧ ಇಲ್ಲದ ಕಾರಣ ನಿರ್ಗಮನದ ಮನೋಭಾವಕ್ಕೆ ಒಳಗಾಗುತ್ತಿದ್ದಾರೆ. ಪಾಕಿಸ್ತಾನ ಈಗ ಟರ್ಕಿ, ಯುರೋಪ್, ಅಮೆರಿಕ ಮತ್ತು ಚೀನಾದಿಂದ ಔಷಧ ಪಡೆಯಲು ಪ್ರಯತ್ನಿಸುತ್ತಿದ್ದರೂ, ಭಾರತದಷ್ಟು ಕಡಿಮೆ ಬೆಲೆಯಲ್ಲಿ ಈ ದೇಶಗಳಿಂದ ಔಷಧ ಪಡೆಯುವುದು ಸಾಧ್ಯವಾಗುತ್ತಿಲ್ಲ. ಈ ನಡುವೆ ಪಾಕಿಸ್ತಾನದ ನಾಯಕರೂ ಭಾರತೀಯ ಔಷಧ ವಹಿವಾಟು ಸ್ಥಗಿತದಿಂದ ವಿನಾಯಿತಿ ಕೋರಿ ಕೋರಿಕೆ ಸಲ್ಲಿಸಿದ್ದಾರೆ.














