ಮನೆ ಸುದ್ದಿ ಜಾಲ ಶ್ರೀಲಂಕಾಕ್ಕೆ ಅವಧಿ ಮುಗಿದ ಆಹಾರ ಸಾಮಗ್ರಿಗಳನ್ನು ಕಳಿಸಿದ ಪಾಕಿಸ್ತಾನ

ಶ್ರೀಲಂಕಾಕ್ಕೆ ಅವಧಿ ಮುಗಿದ ಆಹಾರ ಸಾಮಗ್ರಿಗಳನ್ನು ಕಳಿಸಿದ ಪಾಕಿಸ್ತಾನ

0

ಇಸ್ಲಾಮಾಬಾದ್ : ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾಗೆ ಪಾಕಿಸ್ತಾನ ಒಂದು ವರ್ಷದ ಅವಧಿ ಮುಗಿದ ಆಹಾರ ಸಾಮಗ್ರಿಗಳನ್ನು ಕಳುಹಿಸುವ ಮೂಲಕ ವಿವಾದಕ್ಕೆ ಸಿಲುಕಿದೆ. ಆಹಾರ ಸಾಮಗ್ರಿಗಳನ್ನು ವಾಯು ಮತ್ತು ಸಮುದ್ರದ ಮೂಲಕ ರವಾನಿಸಲಾಯಿತು.

ಶ್ರೀಲಂಕಾಗೆ ನೆರವು ನೀಡಲಾಗಿದೆ ಎಂದು ಪಾಕಿಸ್ತಾನ ಫೋಟೊ ಜೊತೆ ಪೋಸ್ಟ್‌ ಹಂಚಿಕೊಂಡಿತ್ತು. ಪಾಕ್‌ ಕಳುಹಿಸಿರುವ ವೈದ್ಯಕೀಯ ಮತ್ತು ಆಹಾರ ಸಾಮಗ್ರಿಗಳಲ್ಲಿ ಬಳಸಲು ಉಪಯುಕ್ತವಲ್ಲದ ಅವಧಿ ಮೀರಿದ ವಸ್ತುಗಳು ಸೇರಿವೆ ಎಂಬುದು ಬಹಿರಂಗಗೊಂಡಿದೆ. ಪಾಕಿಸ್ತಾನ ಹೈಕಮಿಷನ್ ಶ್ರೀಲಂಕಾ ಹಂಚಿಕೊಂಡ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಗುರಿಯಾಗಿವೆ.

ನಿಜವಾಗಿಯೂ ನೆರವು ನೀಡಬೇಕೆಂಬ ಉದ್ದೇಶ ಇತ್ತೆ ಅಥವಾ ಹಳೆಯ ದಾಸ್ತಾನುಗಳನ್ನು ತೊಂದರೆಗೊಳಗಾದ ನೆರೆಹೊರೆಯವರ ಮೇಲೆ ಸುರಿಯಲಾಗುತ್ತಿದೆಯೇ ಎಂದು ನೆಟ್ಟಿಗರು ಖಾರವಾಗಿ ಪ್ರಶ್ನಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪಾಕಿಸ್ತಾನ ಹೈಕಮಿಷನ್‌ ಶ್ರೀಲಂಕಾ ಪೋಸ್ಟ್‌ ಡಿಲೀಟ್‌ ಮಾಡಿದೆ.

ಶ್ರೀಲಂಕಾ ದಶಕಗಳಲ್ಲೇ ಅತ್ಯಂತ ಭೀಕರವಾದ ನೈಸರ್ಗಿಕ ವಿಕೋಪದಿಂದ ತತ್ತರಿಸಿದೆ. ನೂರಾರು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಜನರ ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಸುರಕ್ಷಿತ ಆಹಾರ ಮತ್ತು ವೈದ್ಯಕೀಯ ಸರಬರಾಜುಗಳ ತುರ್ತು ಕೊರತೆಯಿದೆ.

ಅವಧಿ ಮುಗಿದ ಸಾಮಗ್ರಿಗಳ ಸಹಾಯವನ್ನು ಕಳುಹಿಸುವ ಮೂಲಕ ಪಾಕಿಸ್ತಾನ ಟೀಕೆಗೆ ಗುರಿಯಾಗಿದೆ. ವಿಪತ್ತು ನಿರ್ವಹಣಾ ಕೇಂದ್ರ ಮತ್ತು ವಿದೇಶಾಂಗ ಸಚಿವಾಲಯ ಎರಡನ್ನೂ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.