ಮನೆ ರಾಷ್ಟ್ರೀಯ ಪಾಕ್ ಶೆಲ್ ದಾಳಿಗೆ ಬಲಿ: ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

ಪಾಕ್ ಶೆಲ್ ದಾಳಿಗೆ ಬಲಿ: ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

0

ಜಮ್ಮು: ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ ೧೦ ಲಕ್ಷ ರೂ.ಗಳ ಪರಿಹಾರವನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶನಿವಾರ ಘೋಷಿಸಿದ್ದಾರೆ.

ಕಳೆದ ತಿಂಗಳು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮೇ ೭ರಂದು ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ ನಂತರ ಕಳೆದ ನಾಲ್ಕು ದಿನಗಳಲ್ಲಿ ಪೂಂಚ್, ರಾಜೌರಿ, ಜಮ್ಮು ಮತ್ತು ಬಾರಾಮುಲ್ಲಾ ವಲಯಗಳಲ್ಲಿ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತರು ಮತ್ತು ೧೯ ಗ್ರಾಮಸ್ಥರು ಸಾವಿಗೀಡಾಗಿದ್ದಾರೆ.
ಬುಧವಾರ ಪೂಂಚ್‌ನಲ್ಲಿ ೧೨ ನಾಗರಿಕರು ಸಾವಿಗೀಡಾಗಿದ್ದರೆ, ಶುಕ್ರವಾರ ಉರಿ ಮತ್ತು ಪೂಂಚ್‌ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಶನಿವಾರ ಬೆಳಿಗ್ಗೆ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಹಿರಿಯ ಸರ್ಕಾರಿ ಅಧಿಕಾರಿ ಸೇರಿದಂತೆ ಐವರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

‘ಇತ್ತೀಚೆಗೆ ಪಾಕಿಸ್ತಾನದಿಂದ ನಡೆದ ಶೆಲ್ ದಾಳಿಯಿಂದ ಅಮಾಯಕರ ಜೀವಹಾನಿಯಿಂದ ತೀವ್ರ ನೋವಾಗಿದೆ. ನಮ್ಮ ಜನರ ಕಷ್ಟವನ್ನು ಕಡಿಮೆ ಮಾಡಲು ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ದುಃಖದ ಸಮಯದಲ್ಲಿ ನಾವು ಪ್ರತಿಯೊಂದು ಬಾಧಿತ ಕುಟುಂಬದೊಂದಿಗೂ ನಿಲ್ಲುತ್ತೇವೆ’ ಎಂದು ಮುಖ್ಯಮಂತ್ರಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಕಚೇರಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ಯಾವುದೇ ಪರಿಹಾರವು ತುಂಬಲು ಅಥವಾ ಕುಟುಂಬಕ್ಕೆ ಉಂಟಾದ ಆಘಾತವನ್ನು ಗುಣಪಡಿಸಲು ಸಾಧ್ಯವಿಲ್ಲವಾದರೂ, ಬೆಂಬಲ ಮತ್ತು ಒಗ್ಗಟ್ಟಿನ ಸಂಕೇತವಾಗಿ, ಮೃತರ ಎಲ್ಲ ಕುಟುಂಬಗಳಿಗೆ ತಲಾ ೧೦ ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು’ ಎಂದು ಹೇಳಲಾಗಿದೆ.