ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಮತ್ತೊಮ್ಮೆ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ಪ್ರಬಲ ತಿರುಗೇಟು ನೀಡಿದೆ. ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್’ಗೆ ಆತಿಥ್ಯ ನೀಡಿದ ಮತ್ತು ನೆರೆ ದೇಶದ ಸಂಸತ್ ಮೇಲೆ ದಾಳಿ ನಡೆಸಿದ ದೇಶಕ್ಕೆ ಉಪದೇಶ ನೀಡುವ ಯಾವುದೇ ಅರ್ಹತೆ ಇಲ್ಲ ಎಂದು ಭಾರತ ಖಡಕ್ ಪ್ರತಿಕ್ರಿಯೆ ನೀಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಬಳಿಕ ಭಾರತ ಬುಧವಾರ ತಿರುಗೇಟು ನೀಡಿದ್ದು, ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಮಾತನಾಡುವ ಯಾವುದೇ ಅರ್ಹತೆ ಇಲ್ಲ ಎಂದು ಟೀಕಿಸಿದೆ.
ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯು ನಮ್ಮ ಕಾಲದ ಪ್ರಮುಖ ಸವಾಲುಗಳಾದ ಸಾಂಕ್ರಾಮಿಕ ರೋಗಗಳು, ಹವಾಮಾನ ಬದಲಾವಣೆ, ಸಂಘರ್ಷಗಳು ಅಥವಾ ಭಯೋತ್ಪಾದನೆಯಂತಹ ಸಮಸ್ಯೆಗಳಿಗೆ ನಮ್ಮ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಅಮೆರಿಕದ ಅವಳಿ ಕಟ್ಟಡಗಳ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಒಸಮಾ ಬಿನ್ ಲಾಡೆನ್ ಅನ್ನು ಉಲ್ಲೇಖಿಸಿದ ಅವರು, ಲಾಡೆನ್ ಪಾಕಿಸ್ತಾನದ ಅಬೋಟಾಬಾದ್ ನಗರದಲ್ಲಿ ವಾಸಿಸುತ್ತಿದ್ದ. ಮೇ 2011ರಲ್ಲಿ ಅಮೆರಿಕ ಪಡೆಗಳು ಅವನ ಅಡಗುದಾಣದಲ್ಲೇ ಕೊಂದು ಹಾಕಿದವು. ಪಾಕಿಸ್ತಾನ ಮೂಲದ ಲಷ್ಕರ್-ಎ-ತಯಬಾ (ಎಲ್ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರರು ಹದಿನೆಂಟು ವರ್ಷಗಳ ಹಿಂದೆ ನವದೆಹಲಿಯ ಭಾರತೀಯ ಸಂಸತ್ತಿನ ಸಂಕೀರ್ಣದ ಮೇಲೆ ದಾಳಿ ಮಾಡಿ ಒಂಬತ್ತು ಜನರನ್ನು ಕೊಂದಿದ್ದರು ಎಂದು ಜೈಶಂಕರ್ ಹೇಳಿದ್ದಾರೆ.
ಬಹುಪಕ್ಷೀಯತೆ ಕುರಿತ ಸುಧಾರಣೆಗೆ ನಾವು ಹೊಸ ಮಾರ್ಗಗಳನ್ನು ಹುಡುಕುತ್ತಿರುವಾಗ, ಅದಕ್ಕೆ ಬೆದರಿಕೆಯಾಗಿರುವ ಅಂತರರಾಷ್ಟ್ರೀಯ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ದೇಶಗಳ ಸಮರ್ಥನೆಯನ್ನು ಒಪ್ಪಿಕೊಳ್ಳಬಾರದು. ಉಗ್ರ ಲಾಡೆನ್ಗೆ ಆತಿಥ್ಯ ನೀಡಿ, ನೆರೆಯ ದೇಶದ(ಭಾರತ) ಸಂಸತ್ತಿನ ಮೇಲೆ ದಾಳಿ ನಡೆಸಿದ್ದ ದೇಶಕ್ಕೆ ಭದ್ರತಾ ಮಂಡಳಿಯಲ್ಲಿ ಧರ್ಮೋಪದೇಶ ಮಾಡುವ ಯಾವುದೇ ಅರ್ಹತೆ ಇಲ್ಲ ಎಂದು ಅವರು ಹೇಳಿದ್ದಾರೆ.
ಆಗಸ್ಟ್ 5, 2019ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲು ಭಾರತವು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಭಾರತದ ನಿರ್ಧಾರವನ್ನು ಪಾಕಿಸ್ತಾನ ಬಲವಾಗಿ ವಿರೋಧಿಸಿತ್ತು.