ಮನೆ ರಾಜ್ಯ `ಪಾಲಿ‘ ಭಾರತದ ಅತ್ಯಂತ ಪ್ರಾಚೀನ ಭಾಷೆ: ಪ್ರೊ.ಜಿ.ಹೇಮಂತ್ ಕುಮಾರ್

`ಪಾಲಿ‘ ಭಾರತದ ಅತ್ಯಂತ ಪ್ರಾಚೀನ ಭಾಷೆ: ಪ್ರೊ.ಜಿ.ಹೇಮಂತ್ ಕುಮಾರ್

0

ಮೈಸೂರು: ಪಾಲಿ ಭಾಷೆಯು ಭಾರತದ ಅತ್ಯಂತ ಪ್ರಾಚೀನ ಭಾಷೆ. ಬುದ್ಧನನ್ನು ಅರ್ಥಮಾಡಿಕೊಳ್ಳಲು ಧಮ್ಮವನ್ನು ಅರಿತುಕೊಳ್ಳಲು ಪಾಲಿ ಅತ್ಯಂತ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಪಾಲಿ ಇನ್ಸಿಟಿಟ್ಯೂಟ್ ಕಲಬುರಗಿ ಹಾಗೂ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ವತಿಯಿಂದ ಮಾನಸ ಗಂಗೋತ್ರಿಯ ಜೈನಶಾಸ್ತ್ರ ವಿಭಾಗದಲ್ಲಿ ನಡೆದ ಪಾಲಿ ಭಾಷೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ಸಾಮ್ರಾಟ ಅಶೋಕನ ಶಾಸನಗಳು ಪಾಲಿ ಭಾಷೆಯಲ್ಲಿ ರಚನೆಯಾಗಿವೆ. ಬುದ್ಧನ ಧಮ್ಮಪದ ಪಾಲಿಯಲ್ಲಿದೆ. ತ್ರಿಪಿಟಕಗಳೂ ಪಾಲಿಯಲ್ಲಿನ ಸಂಸ್ಕೃತ, ಪ್ರಾಕೃತ ಮತ್ತು ಪಾಲಿ ಭಾಷೆಗಳನ್ನು ನಮ್ಮ ಭಾರತದ ಪ್ರಾಚೀನ ಶಿಕ್ಷಣ ಕೇಂದ್ರಗಳಲ್ಲಿ ಅಧ್ಯಯನ ಮಾಡಲಾಗುತ್ತಿತ್ತು. ಬೌದ್ಧ ಧರ್ಮದ ಕೃತಿಗಳು ಪಾಲಿಭಾಷೆಯಲ್ಲಿವೆ. ಬುದ್ಧನನ್ನು ಅರ್ಥಮಾಡಿಕೊಳ್ಳಲು ಧಮ್ಮವನ್ನು ಅರಿತುಕೊಳ್ಳಲು ಪಾಲಿ ಅತ್ಯಂತ ಅಗತ್ಯ  ಎಂದು ಹೇಳಿದರು.

ಇಂದು ಜಗತ್ತು ಅಶಾಂತಿ, ಅಹಿಂಸೆಯಲ್ಲಿ ನರಳುತ್ತಿದೆ. ಗದ್ದಲ, ಕೋಲಾಹಲಗಳ ನಡುವೆ ಕಳೆದು ಹೋಗುತ್ತಿದ್ದೇವೆ. ಪ್ರಸ್ತುತ ಗೌಜು ಗದ್ದಲಗಳಿಂದ ಮುಕ್ತಿ ನೀಡುವ ಶಕ್ತಿ ಇರುವುದು ಧ್ಯಾನಕ್ಕೆ ಮಾತ್ರ. ಈ ಧ್ಯಾನ ಮೌನವನ್ನು ಸಾಧಿಸಬೇಕಾದರೆ ಬುದ್ಧನನ್ನು ತಿಳಿಯುವುದು ಮುಖ್ಯ ಬುದ್ಧನನ್ನು ಅರಿಯಲು ಮತ್ತೆ ಪಾಲಿ ಭಾಷೆಯನ್ನು ತಿಳಿಯುವುದು ಅಗತ್ಯ ಎಂದರು.

ಪಾಲಿ, ಪ್ರಾಕೃತ ಮತ್ತು ಸಂಸ್ಕೃತ ಇವು ಮೂರು ಸೋದರ ಭಾಷೆಗಳು. ತುಂಬ ಹಿಂದೆ ಈ ಮೂರೂ ಭಾಷೆಗಳನ್ನು ಅಧ್ಯಯನ ಮಾಡುವ ಕ್ರಮವಿತ್ತು. ಈ ಮೂರು ಭಾಷೆಗಳ ಸಾಹಿತ್ಯವು ಪುರಾತನ ಭಾರತದ ಸಂಸ್ಕೃತಿಯನ್ನು ಅರಿತುಕೊಳ್ಳಲು ಅಗತ್ಯವಾಗಿವೆ. ಇಂದು ಪಾಲಿ ಭಾಷೆ ಭಾರತದ ಕೆಲವೇ ಕೆಲವು ಕಡೆಗಳಲ್ಲಿ ಅಧ್ಯಯನಕ್ಕಿದೆ. ವಿವಿಧ ಬೌದ್ಧ ರಾಷ್ಟ್ರಗಳಲ್ಲಿ ಧರ್ಮ ಗ್ರಂಥಗಳ ಭಾಷೆಯಾಗಿರುವುದಲ್ಲದೆ ಪಾಲಿ ಭಾರತ ಸಂಸ್ಕೃತಿಯ ಅಧ್ಯಯನದ ಪ್ರಮುಖ ಭಾಷೆಗಳಲ್ಲೊಂದಾಗಿರುವುದರಿಂದ ಅದು ಪ್ರಚಾರದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಲಿಪಿಗಳನ್ನು ಬಳಸಲಾಗುತ್ತಿದೆ ಎಂದರು.

ಪಾಲಿ ಭಾಷೆ ಕೇವಲ ಗ್ರಾಮ್ಯ ಭಾಷೆಯಾಗಿರದೆ ಪರಿಷ್ಕಾರ ಹೊಂದಿದ ಜನರಲ್ಲಿ ರೂಢಿಯಲ್ಲಿದ್ದ ಭಾಷೆಯಾಗಿತ್ತೆಂಬುದಕ್ಕೆ ತ್ರಿಪಿಟಕ ಮುಂತಾದ ಧರ್ಮಗ್ರಂಥಗಳ ಪ್ರಮಾಣ ಒಂದೇ ಸಾಕು. ಪೂರ್ವಾಶ್ರಮದಲ್ಲಿ ಬ್ರಾಹ್ಮಣರಾಗಿದ್ದು, ಛಂದಸ್ಸಿನ ಕಡೆಗೆ ಒಲವಿದ್ದ ಇಬ್ಬರು ಭಿಕ್ಷುಗಳು ಬುದ್ಧವಚನವನ್ನು ಕೇವಲ ಕೆಲ ಜನರಿಗೆ ಅರ್ಥವಾಗುತ್ತಿದ್ದ ವೇದಗಳ ಛಂದಸ್ಸಿನಲ್ಲಿ ಅನುವಾದಿಸಲು ಬುದ್ಧಭಗವಾನರ ಅನುಮತಿಯನ್ನು ಕೇಳುವ ಸಂದರ್ಭವೊಂದು ವಿನಯಪಿಟಕದಲ್ಲಿ ಬರುತ್ತದೆ ಎಂದರು.

ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಡಾ.ಗುರುಪಾದ ಕೆ. ಹೆಗಡೆ, ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ, ಜೈನ ಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ.ವಿಜಯಕುಮಾರಿ ಎಸ್. ಕರಿಕಲ್ ಸೇರಿದಂತೆ ಇತರರು ಇದ್ದರು,

ನಂತರ ಪಾಲಿಭಾಷಾ ಸ್ವರೂಪ ವಿಚಾರ, ತ್ರಿಪಿಟಕಗಳ ಪರಿಚಯ, ಪಾಲಿ-ಸಂಸ್ಕೃತ-ಪ್ರಾಕೃತ, ಪಾಲಿ ನಿಘಂಟುಗಳು ಮುಂತಾದ ವಿಷಯದ ಬಗ್ಗೆ ನುರಿತ ತಜ್ಞರು ವಿಚಾರ ಮಂಡಿಸಿದರು.

ಹಿಂದಿನ ಲೇಖನತಮಿಳುನಾಡಿನ ಎಲ್ಲಾ ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಕೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ
ಮುಂದಿನ ಲೇಖನತಲಕಾಡಿನ ಕೀರ್ತಿನಾರಾಯಣ ದೇವಾಲಯ