ಮನೆ ಸುದ್ದಿ ಜಾಲ ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆ ದಿನಾಂಕ ವಿಸ್ತರಣೆ: ಜೂ.30ರವರೆಗೆ ಅವಕಾಶ

ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆ ದಿನಾಂಕ ವಿಸ್ತರಣೆ: ಜೂ.30ರವರೆಗೆ ಅವಕಾಶ

0

ಹೊಸದಿಲ್ಲಿ: ಪಾನ್ ಮತ್ತು ಆಧಾರ್ ಕಾರ್ಡ್ಗಳನ್ನು ಜೋಡಣೆಯ ದಿನಾಂಕವನ್ನು ಕೇಂದ್ರ ಸರ್ಕಾರ 2023ರ ಜೂನ್ 30ರವರೆಗೂ ವಿಸ್ತರಿಸಿದೆ.

ಈ ಮೊದಲು 1 ಸಾವಿರ ರೂ ದಂಡ ಸಹಿತವಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ 2023ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿತ್ತು. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧದ ಜನರ ಆಕ್ರೋಶ ತೀವ್ರಗೊಂಡಿತ್ತು. ಜತೆಗೆ ಜೋಡಣೆಗೆ ವೇದಿಕೆಯಾಗಿರುವ ಆದಾಯ ತೆರಿಗೆ ಪೋರ್ಟಲ್ ನಲ್ಲಿನ ಈ ವಿಭಾಗ ತೆರೆದುಕೊಳ್ಳುತ್ತಲೇ ಇರಲಿಲ್ಲ. ಈ ತಾಂತ್ರಿಕ ದೋಷದ ಬಗ್ಗೆ ಅನೇಕರು ದೂರು ನೀಡಿದ್ದರು.

ಈಗ ದಿನಾಂಕವನ್ನು ಜೂನ್ 30ರವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ. ಈ ಸಂಬಂಧ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದೆ.

ಮೂರು ತಿಂಗಳ ಬಳಿಕವೂ ಈ ಎರಡೂ ಮಹತ್ವದ ದಾಖಲೆಗಳನ್ನು ಲಿಂಕ್ ಮಾಡುವುದರಲ್ಲಿ ತೆರಿಗೆದಾರ ವಿಫಲನಾದಲ್ಲಿ, ಅವರ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಅಂತಹ ಪ್ರಕರಣಗಳಲ್ಲಿ ತೆರಿಗೆದಾರ ತಮ್ಮ ಪಾನ್ ಕಾರ್ಡ್ ಅನ್ನು ಒದಗಿಸಲು, ಅದನ್ನು ಉಲ್ಲೇಖಿಸಲು ಅಥವಾ ಬಳಸಲು ಸಾಧ್ಯವಾಗುವುದಿಲ್ಲ.