ಪಿರಿಯಾಪಟ್ಟಣ : ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಪೂರ್ಣಗೊಂಡಿರುವ ಅಮೃತ ಸರೋವರ ಕೆರೆ, ಗ್ರಾಮ ಪಂಚಾಯಿತಿ ಆವರಣ ಹಾಗೂ ಶಾಲಾ ಆವರಣದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಸಲುವಾಗಿ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ನಿರ್ಮಿಸಲಾಗಿರುವ ಶಿಲಾ ಫಲಕದ ಸ್ಥಳಗಳಲ್ಲಿ ವಿಶೇಷವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು.
ತಾಲ್ಲೂಕಿನಲ್ಲಿ ಪ್ರಮುಖವಾಗಿ ಪೂರ್ಣಗೊಂಡಿರುವ ಬೆಟ್ಟದತುಂಗ ಗ್ರಾ.ಪಂ ವ್ಯಾಪ್ತಿಯ ಕುಡುಕೂರು ಗ್ರಾಮದ ಹೊಸಕೆರೆ, ಪೂನಾಡಹಳ್ಳಿ ಗ್ರಾ.ಪಂನ ಅಕ್ಕೆಕಟ್ಟೆ, ಹರದೂರು ಗ್ರಾ.ಪಂ ವ್ಯಾಪ್ತಿಯ ಆನಿವಾಳು ಗ್ರಾಮದ ಬಿದಿರುಕಟ್ಟೆ ಅಮೃತ ಸರೋವರದ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು.
ಧ್ವಜಾರೋಹಣದ ಬಳಿಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹುತಾತ್ಮ ಯೋಧರನ್ನು ಸ್ಮರಿಸುವ ಸಲುವಾಗಿ ನಿರ್ಮಿಸಿರುವ ಶಿಲಾಫಲಕವನ್ನು ಅನಾವರಣಗೊಳಿಸಿ, ಆಯುಕ್ತಾಲಯದ ನಿರ್ದೇಶನದಂತೆ ವಸುಧಾ ವಂದನ ಕಾರ್ಯಕ್ರಮದಡಿ ವಿವಿಧ ಬಗೆಯ ಸಸಿಗಳನ್ನು ಈಗಾಗಲೇ ಗುರುತಿಸಲಾಗಿದ್ದ ಅಮೃತ ಸರೋವರ ಕೆರೆ ಆವರಣದಲ್ಲಿ ನೆಡಲಾಯಿತು.
ಅದಲ್ಲದೇ, ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲೂ ‘ಮೇರಾ ಮಟ್ಟಿ ಮೇರ ದೇಶ'(ನನ್ನ ನೆಲ-ನನ್ನ ದೇಶ) ಎಂಬ ಅಭಿಯಾನದಡಿ ಮಣ್ಣನ್ನು ಹಿಡಿದು ಪಂಚ ಪ್ರಾಣ ಪ್ರತಿಜ್ಞೆ ನೆರವೇರಿಸಲಾಯಿತು.
ಈ ವೇಳೆ ಆಯಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.