ಮನೆ ಸ್ಥಳೀಯ ಏಪ್ರಿಲ್ 09 ರಂದು ಶ್ರೀಕಂಠೇಶ್ವರ ದೇವಾಲಯದ ಪಂಚ ಮಹಾ ರಥೋತ್ಸವ ಹಾಗೂ ಏಪ್ರಿಲ್ 11 ತೆಪ್ಪೋತ್ಸವ

ಏಪ್ರಿಲ್ 09 ರಂದು ಶ್ರೀಕಂಠೇಶ್ವರ ದೇವಾಲಯದ ಪಂಚ ಮಹಾ ರಥೋತ್ಸವ ಹಾಗೂ ಏಪ್ರಿಲ್ 11 ತೆಪ್ಪೋತ್ಸವ

0

ಪಂಚಾ ಮಹಾರಥೋತ್ಸವ ಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಿ:  ದರ್ಶನ್ ಧ್ರುವನಾರಾಯಣ್

ಮೈಸೂರು: ಏಪ್ರಿಲ್ 09 ರಂದು ಶ್ರೀಕಂಠೇಶ್ವರ ದೇವಾಲಯದ ಪಂಚಾ ಮಹಾರಥೋತ್ಸವ ಹಾಗೂ ಏಪ್ರಿಲ್ 11 ರಂದು ತೆಪ್ಪೋತ್ಸವ ನಡೆಯಲಿದ್ದು ಅಧಿಕಾರಿಗಳು ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ  ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಸೂಚನೆ ನೀಡಿದರು.

Join Our Whatsapp Group

ಇಂದು ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಲ್ಲಿ ಶ್ರೀಕಂಠೇಶ್ವರ ದೇವಾಲಯದ ಪಂಚ ಮಹಾ ರಥೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಏಪ್ರಿಲ್  09 ರಂದು ನಡೆಯುವ ಪಂಚಾ ಮಹಾರಥೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸುವುದರಿಂದ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಸಿ ಸಿ ಟಿ ವಿ ಕ್ಯಾಮರಾ ಗಳನ್ನು ಅಳವಡಿಸಬೇಕು. ತಾತ್ಕಾಲಿಕ ವಾಚ್ ಟವರ್ ಗಳ ನಿರ್ಮಾಣ ಮಾಡಬೇಕು. ಸುಗಮ ವಾಹನ ಸಂಚಾರಕ್ಕೆ ಬ್ಯಾರಿಕೆಡಿಂಗ್ ವ್ಯವಸ್ಥೆ ಹಾಗೂ ಮಾಹಿತಿ ಫಲಕಗಳು ಹಾಗೂ ಸ್ವಾಗತ ಕಮಾನು ಅಳವಡಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಥೋತ್ಸವ ದಿನಾಂಕದಂದು ರಥಗಳು ಚಲಿಸುವ ರಸ್ತೆಯಲ್ಲಿ ಅಡ್ಡಲಾಗಿ ಇರುವ ವಿದ್ಯುತ್ ತಂತಿ ಗಳನ್ನು  ತೆಗೆದು, ರಥೋತ್ಸವ ಮುಗಿದ ನಂತರ ಪುನರ್ ಜೋಡಣೆ ಮಾಡಬೇಕು. ರಥೋತ್ಸವ ಮತ್ತು ತೆಪ್ಪೋತ್ಸವ ನಡೆಯುವ ದಿನಗಳಂದು ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಥೋತ್ಸವದ ಪೂರ್ವಭಾವಿಯಾಗಿ 5 ರಥಗಳನ್ನು ತಾಂತ್ರಿಕವಾಗಿ ಪರಿಶೀಲಿಸಿ ದುರಸ್ಥಿ ಅಗತ್ಯವಿದ್ದಲ್ಲಿ ವರದಿ ನೀಡಬೇಕು ಹಾಗೂ ರಥ ಎಳೆಯಲು  ಯೋಗ್ಯವಾಗಿರುವ ಬಗ್ಗೆ ದೃಡೀಕರಣ ವನ್ನು ನೀಡಬೇಕು. ರಥ ಚಲಿಸುವ ರಸ್ತೆಗಳಲ್ಲಿ ಹಳ್ಳ ದಿಣ್ಣೆಗಳು ಇದ್ದಲ್ಲಿ ಸಮತಟ್ಟು ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಥೋತ್ಸವ ಪ್ರಯುಕ್ತ ಲಕ್ಷಾಂತರ ಭಕ್ತಾದಿಗಳು ಆಗಮಿಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸುಸಜ್ಜಿತ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ತೆಪ್ಪೋತ್ಸವ ದಿನದಂದು ಕಪಿಲಾ ನದಿ ತೀರದಲ್ಲಿ ಭಕ್ತಾದಿಗಳ ಸುರಕ್ಷತಾ ದೃಷ್ಟಿಯಿಂದ ಮುಳುಗು ತಜ್ಞರೊಂದಿಗೆ ಬೋಟ್ ಗಳ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು ಅವರು ಮಾತನಾಡಿ ಉತ್ತಮವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ವಾಹನಗಳ ನಿಲುಗಡೆಗೆ ಹಾಗೂ ಸುಗಮ ಸಂಚಾರಕ್ಕೆ ತೊಂದರೆ ಆಗದಂತೆ  ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ರಥೋತ್ಸವಕ್ಕೆ ಬರುವ ಜನಸಂಖ್ಯೆಯ ಬಗ್ಗೆ ಅರಿವು ಇರಬೇಕು. ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಮಾಡಬೇಕು. ಒಂದು ಇಲಾಖೆಯವರು ಇನ್ನೊಂದು ಇಲಾಖೆಯ ಮೇಲೆ ಹೇಳುವುದನ್ನು ಬಿಡಿ. ಎಲ್ಲರೂ ಒಟ್ಟುಗೂಡಿ ರಥೋತ್ಸವಕ್ಕೆ ಅದ್ದೂರಿ ಸಿದ್ಧತೆ ಮಾಡಿಕೊಳ್ಳಿ. ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಜಿಲ್ಲಾಡಳಿತ ವತಿಯಿಂದ ನೀಡಲಾಗುವುದು. ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಥೋತ್ಸವ ದಿನದಂದು ಸಂಘ ಸಂಸ್ಥೆಗಳು ಉಚಿತವಾಗಿ  ನೀಡುವ ಪ್ರಸಾದ ವಿತರಣೆಗೆ ಅನುಮತಿ ಪಡೆಯಬೇಕು. ಪ್ರಸಾದ ವಿತರಣೆಗೆ ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.   ಭಕ್ತಾದಿಗಳ ಸೌಕರ್ಯಕ್ಕಾಗಿ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಬೇಕು. ತಾತ್ಕಾಲಿಕ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ನಗರ ಸಭಾ ಅಧ್ಯಕ್ಷರಾದ ಸ್ವಾಮಿ, ತಹಶೀಲ್ದಾರ್ ಶಿವಕುಮಾರ್ ಕಾಸನೂರು, ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶ್ರೀರಾಂಪುರ, ಶಂಕರಪುರ, ಗೋಳೂರು, ದೇವರಸನಹಳ್ಳಿ, ಗೀಕಳ್ಳಿ , ನಂಜನಗೂಡು ಕಸಭಾ ಮತ್ತು ಮುಳ್ಳೂರು  ಗ್ರಾಮಗಳ ಮುಖ್ಯಸ್ಥರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.