ಬೆಳಗಾವಿ: ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಗುರುವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಂದ ಮಾಹಿತಿ ಪಡೆದರು.
ಲಾಠಿ ಚಾರ್ಜ್ ಕುರಿತು ಸಂಪೂರ್ಣ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ, ನೀವು ಮಾಡಿದ್ದು ಸರಿ ಇದೆ ಎಂದರು.
ಲಾಠಿಚಾರ್ಜ್ ಮತ್ತು ಪ್ರತಿಭಟನೆ ಕುರಿತು ಡಿಸಿ ಮೊಹಮ್ಮದ್ ರೋಷನ್ ಸಿದ್ದರಾಮಯ್ಯನವರಿಗೆ ಮಾಹಿತಿ ನೀಡಿದರು. ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಗಲಾಟೆಯ ಸಂಪೂರ್ಣ ವಿಡಿಯೋ ವೀಕ್ಷಣೆ ಮಾಡಿದರು. ಪ್ರತಿಭಟನೆ ವೇಳೆ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ಆದೇಶ ಪ್ರತಿ ಸಮೇತ ಸಿದ್ದರಾಮಯ್ಯಗೆ ವಿವರಣೆ ನೀಡಲಾಯಿತು.
ಹೈಕೋರ್ಟ್ ಹೋರಾಟಕ್ಕೆ ಅನುಮತಿ ನೀಡಿತ್ತು. ಆದರೆ, ಆ ಜಾಗ ಬಿಟ್ಟು ಬೇರೆ ಕಡೆ ಹೋಗದಂತೆ, ಶಾಂತಿಯುತ ಪ್ರತಿಭಟನೆ ಮಾಡುವಂತೆ ಆದೇಶ ಇತ್ತು. ಹೈಕೋರ್ಟ್ ಆದೇಶ ಪಾಲನೆ ಮಾಡಲು ಲಾಠಿ ಚಾರ್ಜ್ ಮಾಡಿದ್ದೇವೆ ಎಂದು ಸಿಎಂ ಅವರ ಮುಂದೆ ಅಧಿಕಾರಿಗಳು ಹೇಳಿದರು.
ಈ ವೇಳೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೈಕೋರ್ಟ್ ಆದೇಶ ಪಾಲನೆ ಮಾಡಿದ್ದು ಒಳ್ಳೆಯದು ಎಂದರು. ನಂತರ ಅಧಿಕಾರಿಗಳು ನೀಡಿದ ವಿಡಿಯೋ ಹಾಗೂ ಹೈಕೋರ್ಟ್ ಆದೇಶದ ಪ್ರತಿ ತೆಗೆದುಕೊಂಡು ಹೋದರು.
ಲಾಠಿಚಾರ್ಜ್ ಸಮರ್ಥಿಸಿದ ಗೃಹ ಸಚಿವ ಪರಮೇಶ್ವರ್
ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಅನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುಮ್ಮನೆ ನಾವು ಲಾಠಿಚಾರ್ಜ್ ಮಾಡಿಲ್ಲ. ಇದಕ್ಕೆ ಸಂಬಂಧಿಸಿ ನಮ್ಮ ಬಳಿಯೂ ವಿಡಿಯೋ ಹಾಗೂ ಫೋಟೋಗಳಿವೆ. ಪಂಚಮಸಾಲಿ ಹೋರಾಟಗಾರರು ಕಾನೂನು ಕೈಗೆತ್ತಿಕೊಂಡಿದ್ದರು. ಸ್ವತಃ ಸಿಎಂ ಹೋರಾಟ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ನಾವು ಸಚಿವರನ್ನು ಪ್ರತಿಭಟನೆ ಸ್ಥಳಕ್ಕೆ ಕಳುಹಿಸಿದಾಗಲೂ ಒಪ್ಪಲಿಲ್ಲ ಎಂದು ಹೇಳಿದರು.
‘ಜಯಮೃತ್ಯುಂಜಯ ಶ್ರೀ ಸೇರಿ ಹಲವರು ಕಾನೂನು ಕೈಗೆತ್ತಿಕೊಂಡರು’
ಪಂಚಮಸಾಲಿ ಹೋರಾಟಗಾರರು ಮೊದಲು ಚಪ್ಪಲಿ. ಕಲ್ಲು ಎಸೆದರು. ಜಯಮೃತ್ಯುಂಜಯ ಶ್ರೀ ಸೇರಿ ಹಲವರು ಕಾನೂನು ಕೈಗೆತ್ತಿಕೊಂಡರು. ಮುತ್ತಿಗೆ ಹಾಕುತ್ತೇವೆ ಎಂದಾಗ ತಡೆಯುವುದು ಅನಿವಾರ್ಯ ಆಗಿತ್ತು. ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೀಗೆ ಅವಕಾಶ ನೀಡಿದರೆ, ನಾಳೆ ಎಲ್ಲರೂ ಮುತ್ತಿಗೆ ಹಾಕಲು ಬರುತ್ತಾರೆ. ಕೋರ್ಟ್ ತಡೆಯಾಜ್ಞೆ ಇದ್ದಾಗಲೂ ನಿಯಮ ಉಲ್ಲಂಘನೆಯಾಗಿದೆ. ಜಯಮೃತ್ಯುಂಜಯ ಸ್ವಾಮೀಜಿ ಸೇರಿ ಎಲ್ಲರೂ ಉಲ್ಲಂಘಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋದಾಖಲೆಗಳಿವೆ ಎಂದು ಸಚಿವ ಪರಮೇಶ್ವರ ತಿಳಿಸಿದರು.