ಪಾಂಡವಪುರ: ಸೆಲ್ಫಿ ತೆಗೆದುಕೊಳ್ಳುವ ವೇಳೆ ಮಕ್ಕಳೊಂದಿಗೆ ವಿಶ್ವೇಶ್ವರಯ್ಯ ನಾಲೆಗೆ ಕಾಲು ಜಾರಿ ಬಿದ್ದ ಪರಿಣಾಮ ತಾಯಿ ಬದುಕುಳಿದು ಮಕ್ಕಳು ನೀರು ಪಾಲಾಗಿದ್ದರು. ಮೃತ ಮಕ್ಕಳ ಶವ ಮಂಗಳವಾರ ಪತ್ತೆಯಾಗಿದ್ದು, ಪಟ್ಟಣದ ಹಾರೋಹಳ್ಳಿ ಸಮೀಪದ ಜಮಿನೊಂದರಲ್ಲಿ ಬುಧವಾರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಹಾರೋಹಳ್ಳಿ ನಿವಾಸಿ ಪಟ್ಟಣದ ವಿ.ಸಿ.ಕಾಲೊನಿಯಲ್ಲಿ ವಾಸವಿದ್ದ ಲಕ್ಷ್ಮೇಗೌಡರ ಪುತ್ರ ಧನಂಜಯ ಅವರ ಪತ್ನಿ ವಿದ್ಯಾ ಮಕ್ಕಳಾದ ಲಿತಿಶಾ, ಕಿಶನ್‌ರೊಂದಿಗೆ ವಿಸಿ ನಾಲೆ ಏರಿ ಪಕ್ಕದಲ್ಲಿ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಸೋಮವಾರ ಸಂಜೆ ಆಕಸ್ಮಿಕವಾಗಿ ಕಾಲುಜಾರಿ ನಾಲೆಗೆ ಬಿದ್ದಿದ್ದರು. ದಡ ಸೇರಲು ಹೋರಾಟ ನಡೆಸುತ್ತಿದ್ದ ತಾಯಿಯನ್ನು ಸ್ಥಳೀಯರು ರಕ್ಷಿಸಿದ್ದರು. ಆದರೆ ಎರಡು ಮಕ್ಕಳು ನೀರು ಪಾಲಾಗಿದ್ದರು.
ದೂರು ದಾಖಲು: ಘಟನೆ ಸಂಬAಧ ಮೃತ ಮಕ್ಕಳ ತಾತ ಲಕ್ಷ್ಮೇಗೌಡ ನೀಡಿದ ದೂರಿನ ಮೇರೆಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳ ಪಾಲಕರು ಪೊಲೀಸ್ ದೂರು ನೀಡದೆ ಅಂತ್ಯಕ್ರಿಯೆಗೆ ಮುಂದಾಗಿದ್ದರು. ಪೊಲೀಸರು ಮಧ್ಯಪ್ರವೇಶಿಸಿ ದೂರು ನೀಡುವಂತೆ ಸೂಚಿಸಿದ್ದರು. ಸ್ಥಳದಲ್ಲಿಯೇ ಇಬ್ಬರು ಮಕ್ಕಳ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಗಿದೆ.