ಪಾಂಡವಪುರ: ಜಮೀನಿನ ಬಳಿ ತೆರಳುತ್ತಿದ್ದ ಒಂಟಿ ಮಹಿಳೆಯ ಬಳಿ ಬೈಕ್ ನಲ್ಲಿ ಬಂದು ಇಬ್ಬರು ಕಳ್ಳರು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಕಡಬ ಗ್ರಾಮದಲ್ಲಿ ನಡೆದಿದೆ.
ಕಡಬ ಗ್ರಾಮದ ಸ್ವಾಮೀಗೌಡ ಪತ್ನಿ ಸುಧಾ ಎಂಬುವರೇ ಮಾಂಗಲ್ಯ ಸರ ಕಳೆದುಕೊಂಡ ಗೃಹಿಣಿ.
ಕಡಬ ಗ್ರಾಮದ ನಿವಾಸಿ ಸುಧಾ ಅವರು ಗ್ರಾಮದ ಹೊರವಲಯದಲ್ಲಿರುವ ತಮ್ಮ ತೋಟಕ್ಕೆಂದು ಸಂಜೆಯ ವೇಳೆಯಲ್ಲಿ ಒಬ್ಬರೇ ತೆರಳುತ್ತಿದ್ದ ಸಂದರ್ಭದಲ್ಲಿ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಸುಧಾ ಅವರ ಮಾಂಗಲ್ಯ ಸರ ಕೀಳಲು ಕೈಹಾಕಿದ್ದಾರೆ. ಈ ವೇಳೆ ಸುಧಾ ಅವರ ಬಿಗಿಯಾಗಿ ಮಾಂಗಲ್ಯ ಸರವನ್ನು ಹಿಡಿದುಕೊಂಡಿದ್ದಾರೆ. ಇದರಿಂದ ಮಾಂಗಲ್ಯ ಸರ ಸ್ವಲ್ಪಕಟ್ಟಾಗಿ ಸುಧಾ ಅವರ ಬಳಿ ಸುಮಾರು ೧೩ ಗ್ರಾಂ ನಷ್ಟು ಉಳಿದುಕೊಂಡಿದೆ. ಉಳಿದ ೩೭ ಗ್ರಾಂನಷ್ಟು ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬಳಿಕ ಪತಿ ಸ್ವಾಮೀಗೌಡ ಅವರೊಂದಿಗೆ ಸುಧಾ ಅವರು ಪಾಂಡವಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ವಿಷಯ ತಿಳಿದ ಅಪರ ಎಸ್ಪಿ ತಿಮ್ಮಯ್ಯ,ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಾಗಿದೆ.
ಗ್ರಾಮೀಣ ಪ್ರದೇಶಕ್ಕೆ ಕಾಲಿಟ್ಟ ಸರಗಳ್ಳತನ:ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ನಡೆಯುತ್ತಿದ್ದ ಸರಗಳ್ಳತ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಒಂಟಿ ಮಹಿಳೆಯರು ಜಮೀನುಗಳ ಬಳಿ ತೆರಳುತ್ತಿರುತ್ತಾರೆ. ಈ ವೇಳೆ ಬೈಕ್‌ನಲ್ಲಿ ಬರುವ ಅಪರಿಚಿತರು ಈ ರೀತಿ ಸರಗಳ್ಳತನ ಮಾಡುವುದರಿಂದ ಮಹಿಳೆರು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ.ಹಾಗಾಗಿ ಪೊಲೀಸರು ಎಚ್ಚೆತ್ತು ಇಂತಹ ಪ್ರಕರಣಗಳ ಬಗ್ಗೆ ಕ್ರಮವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಾರ್ವಜನಿಕರು ಎಚ್ಚರವಹಿಸಿ: ಇತ್ತೀಚಿನ ದಿನಗಳಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಎಚ್ಚರವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಬಸ್, ರೈಲ್ವೇ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಲ್ಲಿ ಸರಗಳ್ಳತನ ಹೆಚ್ಚುತ್ತಿರುವುದರಿಂದ ಒಂಟಿಯಾಗಿ ಓಡಾಡುವ ಮಹಿಳೆಯರು ತಮ್ಮ ಚಿನ್ನಾಭರಣಗಳ ಬಗ್ಗೆ ಜಾಗೃತಿ ವಹಿಸಬೇಕೆಂದು ಸಬ್ ಇನ್ಸ್ಪೆಕ್ಟರ್ ಉಮೇಶ್ ಮನವಿ ಮಾಡಿದ್ದಾರೆ.