ಮನೆ ಮನೆ ಮದ್ದು ಪಪ್ಪಾಯ

ಪಪ್ಪಾಯ

0

ಅಡುಗೆ :

ಪಪ್ಪಾಯ ಕಾಯಿಯಿಂದ ಪಲ್ಯ ತಯಾರಿಸಬಹುದು. ಕಾಯಿಯನ್ನು ಸಾಂಬಾರು, ತೆಂಗಿನ ಕಾಯಿಯೊಂದಿಗೆ ಮಜ್ಜಿಗೆ ಹುಳಿಯಲ್ಲಿಯೂ ಬಳಸಲಾಗುತ್ತದೆ.

Join Our Whatsapp Group

 ಪಪ್ಪಾಯ ಕಾಯಿಯ ಬರ್ಫಿ : ಪಪ್ಪಾಯ ಕಾಯಿಯನ್ನು ಸಿಪ್ಪೆ ತೆಗೆದು ತುರಿದುಕೊಳ್ಳಬೇಕು.

ನಂತರ ತುರಿದಿದ್ದನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಸಕ್ಕರೆ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಒಲೆಯ ಮೇಲಿಡಬೇಕು. ಎಳೆಯ ಪಾಕ ಬರುವವರೆಗೂ ಕುದಿಸಬೇಕು. ನಂತರ ಅದಕ್ಕೆ ಹುರಿದುಕೊಂಡ ಕಾಯಿಯ ತಿರುಳನ್ನು ಹಾಕಿ ಸೌಟಿನಿಂದ ತಿರುವಬೇಕು. ಗಟ್ಟಿಯಾಗುವವರೆಗೂ ಕೈಯಾಡಿಸುತ್ತ ಇರಬೇಕು. ಅದಕ್ಕೆ ಗೋಡಂಬಿ, ಏಲಕ್ಕಿ ಪುಡಿ ಹಾಕಿದಲ್ಲಿ ಒಳ್ಳೆಯ ಪರಿಮಳ ಬರುವುದಲ್ಲದೇ ರುಚಿಯೂ ಹೆಚ್ಚುತ್ತದೆ. ಬರ್ಫಿ ಪಾತ್ರೆಯ ತಳಬಿಟ್ಟು ಬರುವುದಕ್ಕಾರಂಭಿಸಿದಾಗ ಒಂದು ತಟ್ಟಿಗೆ ತುಪ್ಪ ಸವರಿ ಸುರಿಯಬೇಕು. ನಂತರ ನಮಗೆ ಬೇಕಾದ ಆಕಾರದಲ್ಲಿ ಕತ್ತರಿಸಬೇಕು.

 ಪ್ರಮಾಣ: ಪಪ್ಪಾಯ ಕಾಯಿ ತುರಿದ ತಿರುಳು 2 ಭಾಗ; ಸಕ್ಕರೆ ಅರ್ಧ ಭಾಗ; ತುಪ್ಪ 5ಚಮಚ.

 ಪಲ್ಯ : 2 ಚಿಕ್ಕ ಪಪ್ಪಾಯ ಕಾಯಿ, ಅರ್ಧ ತೆಂಗಿನಕಾಯಿ, ಈರುಳ್ಳಿ 4. ಹಸಿ ಮೆಣಸಿನಕಾಯಿ 4. ಉಪ್ಪು, ಸಾಸುವೆ, ಎಣ್ಣೆ ಮತ್ತು ಕರಿಬೇವು.

ಕಾಯಿಗಳ ಸಿಪ್ಪೆ ತೆಗೆದು ಸ್ವಚ್ಛವಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಲೆಯ ಮೇಲೆ ಪಾತ್ರೆಯನ್ನಿಟ್ಟು ಎಣ್ಣೆ ಹಾಕಿ ಸಾಸುವೆಯ ಒಗ್ಗರಣೆ ಹಾಕಿ ಹೆಚ್ಚಿದ ಈರುಳ್ಳಿ, ಕರಿಬೇವು, ಹಸಿ ಮೆಣಸಿನಕಾಯಿ ಹಾಕಿ ಬಾಡಿಸಬೇಕು. ನಂತರ ಪಪ್ಪಾಯ ಹೋಳುಗಳನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ, ನೀರು ಚಿಮುಕಿಸಿ ಮುಚ್ಚಿಡಬೇಕು. ಆಗಾಗ ಮಗುಚುತ್ತ ಇರಬೇಕು ಹೋಳು ಬೆಂದ ನಂತರ ತೆಂಗಿನಕಾಯಿ ತುರಿ ಹಾಕಬೇಕು.

 ಉಪ್ಪಿನಕಾಯಿ : ಪಪ್ಪಾಯ ½ ಕೆ.ಜಿ., ಸಕ್ಕರೆ 30ಗ್ರಾಂ, ಉಪ್ಪು । ಟೀ ಚಮಚೆ, ಒಣದ್ರಾಕ್ಷಿ 20 ಗ್ರಾಂ. ಹುಣಸೆಹಣ್ಣಿನ ರಸ | ಟೀ ಚಮಚೆ, ಶುಂಠಿ ರಸ, ಚಮಚೆ, ಒಣಮೆಣಸಿನ ಕಾಯಿಪುಡಿ 2 ಟೀ ಚಮಚೆ, ಅರಿಶಿನಪುಡಿ 1 ಚಮಚೆ, ಎಣ್ಣೆ 2 ಚಮಚ.

ಪಪ್ಪಾಯ ಸಿಪ್ಪೆತೆಗೆದು ಸಣ್ಣಕ್ಕೆ ಕತ್ತರಿಸಿಕೊಂಡು ಹಬೆಯಲ್ಲಿ ಬೇಯಿಸಿಕೊಳ್ಳಬೇಕು ಇದಕ್ಕೆ  ಒಣದ್ರಾಕ್ಷಿಯನ್ನು ಎಣ್ಣೆಯಲ್ಲಿ ಹುರಿದು ಸೇರಿಸಬೇಕು, ಶುಂಠಿ ರಸ ಹೊರತು ಉಳಿದೆಲ್ಲವನ್ನು ಸೇರಿದ ಬೆಲೆಯ ಮೇಲಿಟ್ಟು ಗಟ್ಟಿಯಾಗುವವರೆಗೂ ಕಲಕುತ್ತಿರಬೇಕು. ಗಟ್ಟಿಯಾದ ಮೇಲೆ ಇಳಿಸಿ ಶುಂಠಿ ರಸ ಹಾಕಿ ಬೆರೆಸಿ ನಂತರ ಉಪಯೋಗಿಸಬಹುದು.

 ಪಪ್ಪಾಯ ಹಣ್ಣಿನ ಜ್ಯೂಸ್ : ಪಪ್ಪಾಯ ಸಿಪ್ಪೆ ತೆಗೆದು ಹೋಳುಗಳಾಗಿ ಹೆಚ್ಚಿಕೊಂಡು ಮಿಕ್ಸಿಯಲ್ಲಿ ಹಾಕಿ ಸಕ್ಕರೆ ಬೆರೆಸಿ ರುಬ್ಬಿ ಜ್ಯೂಸ್ ತಯಾರಿಸಿಕೊಳ್ಳಬಹುದು.

       ಪಪ್ರಾಯದ ರಸಕ್ಕೆ ಕಿತ್ತಳೆ ಹಣ್ಣಿನ ರಸ, ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ ಪಾನೀಯ ತಯಾರಿಸಿದಲ್ಲಿ ರುಚಿಕರವಾಗಿರುತ್ತದಲ್ಲದೆ, ಆರೋಗ್ಯಕರವೂ ಹೌದು.

 ಗಾರಿಗೆ ಅಥವಾ ಅತಿರಸ : ಪಪ್ಪಾಯ ಹಣ್ಣು 1, ಮೈದಾಹಿಟ್ಟು ಅರ್ಧ ಬಟ್ಟಲು, ಅಕ್ಕಿಹಿಟ್ಟು ಎರಡೂವರೆ ಬಟ್ಟಲು, ಏಲಕ್ಕಿ 4. ಸ್ವಲ್ಪ ಬೆಲ್ಲ ಮತ್ತು ಎಣ್ಣೆ

      ಪಪ್ಪಾಯ ಹಣ್ಣಿನ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಕೊಂಡು ಅಷ್ಟೇ ಪ್ರಮಾಣದ ಬೆಲ್ಲದ ಪುಡಿಯೊಂದಿಗೆ ಅಕ್ಕಿಹಿಟ್ಟು, ಮೈದಾಹಿಟ್ಟು, ಏಲಕ್ಕಿಪುಡಿ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ಎಣ್ಣೆ ಕಾಯಿಸಿ, ನಾದಿದ ಹಿಟ್ಟನ್ನು ಬೇಕಾದ ಆಕಾರಕ್ಕೆ ತಟ್ಟಿ ಕೆಂಪಗೆ ಕರಿಯಬೇಕು.

 ಸೀಕರಣೆ : ಪಕ್ವವಾದ ಹಣ್ಣು 1. ತೆಂಗಿನಕಾಯಿ 1, ಸಕ್ಕರೆ 3 ಬಟ್ಟಲು, ಏಲಕ್ಕಿ 1,ಎಳ್ಳು 1 ಚಮಚೆ

        ಪಪ್ಪಾಯ ಹಣ್ಣನ್ನು ತೊಳೆದು ಸಿಪ್ಪೆ ತೆಗೆದು ತುಂಬ ಸಣ್ಣಗೆ ಹೆಚ್ಚಿ ಸಕ್ಕರೆ ಬೆರೆಸಿ ಮುಚ್ಚಿಡಬೇಕು. ತೆಂಗಿನಕಾಯಿಯನ್ನು ನುಣ್ಣಗೆ ರುಬ್ಬಿ ಹಾಲನ್ನು ಹೋಳುಗಳಿಗೆ ಸೇರಿಸಿ ಮೃದುವಾಗಿ ಕಲೆಸಬೇಕು. ಇದಕ್ಕೆ ಏಲಕ್ಕಿ ಪುಡಿ ಮತ್ತು ಹುರಿದ ಎಳ್ಳು ಸೇರಿಸಬೇಕು.

‘ ಚಟ್ಟಿ : 1 ಪಪ್ಪಾಯ ಹಣ್ಣು, ಬೆಲ್ಲ ಸ್ವಲ್ಪ, ತೆಂಗಿನಕಾಯಿ ತುರಿ ಅರ್ಧ ಹೋಳು, ಹಸಿಮೆಣಸಿನಕಾಯಿ 6, ಉಪ್ಪು, ನೀರು.

        ಹಣ್ಣಿನಸಿಪ್ಪೆ ತೆಗೆದು ಸಣ್ಣ ಹೋಳುಗಳನ್ನು ಮಾಡಿಕೊಂಡು ಉಪ್ಪು, ಬೆಲ್ಲ ಮತ್ತು ನೀರಿನೊಂದಿಗೆ ಬೇಯಿಸಿಕೊಳ್ಳಬೇಕು. ಬೆಂದಹೋಳುಗಳನ್ನು ತೆಂಗಿನತುರಿ ಮತ್ತು ಮೆಣಸಿನಕಾಯಿಗಳೊಂದಿಗೆ ನುಣ್ಣಗೆ ರುಬ್ಬಿ ಒಗ್ಗರಣೆ ಕೊಟ್ಟು ಚಟ್ಟಿ ತಯಾರಿಸಬೇಕು.

ಕ್ಯಾಂಡಿ : ಬಲಿತ ಪಪ್ಪಾಯ ಕಾಯಿಗಳ ಸಿಪ್ಪೆ ತೆಗೆದು 4 ಸೆಂ.ಮೀ. ಗಾತ್ರದ ಮತ್ತು 0 5-1.0 ಸೆಂ.ಮೀ. ದಪ್ಪನೆಯ ಹೋಳುಗಳಾಗಿ ಕತ್ತರಿಸಿ ಬೀಜವನ್ನು ತೆಗೆದು ಶೇ. 2ರ ಉಪ್ಪಿನ ದ್ರಾವಣದಲ್ಲಿ 24 ಗಂಟೆಕಾಲ ನೆನೆಸಬೇಕು. ನಂತರ ಚೆನ್ನಾಗಿ ತೊಳೆದು ಮೃದುವಾಗುವವರೆಗೆ ಕುದಿಯುವ ನೀರಿನಲ್ಲಿರಿಸಬೇಕು.

 ಜೆಲ್ಲಿ: ಹಣ್ಣಿನ ತಿರುಳಿನಿಂದ ತಯಾರಿಸಿದ ದ್ರವ 1 ಲೀಟರ್, ಸಕ್ಕರೆ ¾ ಕೆ.ಜಿ., ಸಿಟ್ರಿಕ್ ಆಮ್ಲ 3 ಗ್ರಾಂ.

ಜೆಲ್ಲಿಯನ್ನು ತಯಾರಿಸಲು ಹೆಚ್ಚು ಹಣ್ಣಾಗದ ಕಾಯಿಗಳನ್ನು ತೊಳೆದು, ಸಿಪ್ಪೆ ತೆಗೆದು ಸಣ್ಣಹೋಳುಗಳಾಗಿ ಕತ್ತರಿಸಿ, ಹೋಳುಗಳ 1.5ರಷ್ಟು ತೂಕದ ನೀರಿನಲ್ಲಿ 25-30 ನಿಮಿಷ ಕುದಿಸಬೇಕು. ಕುದಿಸುವಾಗ ಪ್ರತಿ ಕೆ.ಜಿ.ಗೆ 2 ಗ್ರಾಂನಂತೆ ಸಿಟ್ರಿಕ್ ಆಮ್ಲ ಸೇರಿಸಬೇಕು. ಆನಂತರ ದ್ರವವನ್ನು ಶೋಧಿಸಬೇಕು.

 ಟೂಟಿ ಫ್ರೂಟಿ : ಹಣ್ಣಾಗಿರದ ಆದರೆ ಬಲಿತ ಪಪ್ಪಾಯ ಕಾಯಿ ಆರಿಸಿಕೊಂಡು ಸ್ವಚ್ಛವಾಗಿ ತೊಳೆದು ಸಿಪ್ಪೆ ತೆಗೆಯಬೇಕು. ನಂತರ ಎರಡಾಗಿ ತುಂಡು ಮಾಡಿ ನಡುವಿನ ಬೀಜ, ತಿರುಳನ್ನು ಬೇರ್ಪಡಿಸಬೇಕು. ನಂತರ ಚಿಕ್ಕ ಚಿಕ್ಕ ಚೌಕಾಕಾರದ ತುಂಡುಗಳನ್ನಾಗಿ ಮಾಡಿರಿ (ಸುಮಾರು । ಸೆಂ.ಮೀ. ಉದ್ದ, ಆಗಲ, ದಪ್ಪ), ನಂತರ ಶುದ್ಧವಾದ, ತೆಳುವಾದ ಬಟ್ಟೆಯಲ್ಲಿ ಇವುಗಳನ್ನು ಕಟ್ಟಿ ಹಬೆಯಲ್ಲಿ ಬೇಯಿಸಬೇಕು ಚೆನ್ನಾಗಿ ಬೆಂದ ನಂತರ ಇವುಗಳನ್ನು ಸಕ್ಕರೆ ಪಾಕದಲ್ಲಿ ಹಾಕಿರಬೇಕು ಒಂದು ರಾತ್ರಿ ಕಳೆದ ನಂತರ ಸಕ್ಕರೆ ಪಾಕದನ್ನು ತೆಗೆದು ಅರಳು ಬಿಡಬೇಕು

ಪಪ್ಪಾಯ ಚೂರುಗಳು ಸಕ್ಕರೆಯ ಅಂಶವನ್ನು ಗರಿಷ್ಠ ಪ್ರಮಾಣದಲ್ಲಿ ಹೀರಿಕೊಂಡಿರುತ್ತವೆ. ಸಕ್ಕರೆ ಪಾಕಕ್ಕೆ ಬೇಕೆನಿಸಿದ ಬಣ್ಣ (ಹಸಿರು, ಕೆಂಪು) ಸೇರಿಸಿದಲ್ಲಿ ಟೂಟಿ ಫೂಟಿ ಸಿದ್ದ ಐಸ್ ಕ್ರೀಂ ಪಾರ್ಲ‌ರಗಳಲ್ಲಿ ಸಾಮಾನ್ಯವಾಗಿ ಡೈಫೂಟ್ ಸಲಾಡ್ ಗಳಲ್ಲಿ ಉಪಯೋಗಿಸುವ   ಡ್ರೈಫೂ‌ಟ್ ಗಳ ಪೈಕಿ ಕೆಂಪು, ಹಸಿರು ಬಣ್ಣದ ಚಿಕ್ಕಚಿಕ್ಕ ತುಂಡುಗಳೇ ಈ ಟೂಟಿ ಫ್ರೂಟಿ

” ಜಾಮ್ : ಹಣ್ಣಿನ ತಿರುಳು 1 ಕೆ.ಜಿ., ಸಕ್ಕರೆ ಮುಕ್ಕಾಲು ಕೆ.ಜಿ., ಸಿಟ್ರಿಕ್ ಅಮ್ಲ 3 ಗ್ರಾಂ.

        ಮಾಗಿದ ಆದರೆ ಗಟ್ಟಿಯಾಗಿರುವ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಬೇಕು. ಬೀಜ ತೆಗೆದು ತಿರುಳನ್ನು ಬೇರ್ಪಡಿಸಬೇಕು. ತಿರುಳು, ಸಕ್ಕರೆ ಮತ್ತು ನೀರನ್ನು ಹಾಕಿ ಚೆನ್ನಾಗಿ ಕುರಿಸಬೇಕು. ಕುದಿಸುವಾಗ ತಳ ಆಂಟದಂತೆ ಕಲಕುತ್ತಿರಬೇಕು. ನಂತರ ಸಿಟ್ರಿಕ್ ಆಮ್ಲ ಸೇರಿಸಿ ಚೆನ್ನಾಗಿ ಕುದಿಸಬೇಕು. ಪಾಕದ ತಯಾರಿಕೆಯ ಕೊನೆಯಲ್ಲಿ ಹದವಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಸೌಟಿನಲ್ಲಿ ಪಾಕವನ್ನು ತೆಗೆದು ಮೇಲಿನಿಂದ ಇಳಿಬಿಟ್ಟಾಗ ಅದು ತೊಟ್ಟಿಕ್ಕದೇ ತೆಳುವಾದ ಹಾಳೆಯಂತೆ ಬರಬೇಕು. ನಂತರ ಅಗಲವಾದ ಬಾಯುಳ್ಳ ಬಾಟಲಿಯಲ್ಲಿ ತುಂಬಿಸಿಡಬೇಕು. ತಣ್ಣಗಾದ ನಂತರ ಮುಚ್ಚಳ ಹಾಕಿ ಸಾಮಾನ್ಯ ಉಷ್ಣತೆಯಲ್ಲಿ ಶೇಖರಿಸಿಡಬೇಕು.

 *

 ಮಿಶ್ರ ಹಣ್ಣಿನ ಜಾಮ್ : ಇದನ್ನು ತಯಾರಿಸಲು ಪಪ್ಪಾಯ, ಅನಾನಸ್, ಸೀಬೆ ಮತ್ತು ಮಾವಿನಹಣ್ಣು ಸಮಪ್ರಮಾಣ, ಸಕ್ಕರೆ ¾ ಕೆ.ಜಿ.. ಸಿಟ್ರಿಕ್ ಆಮ್ಲ 2.5 ಗ್ರಾಂ.. ನೀರು 100 మి.లీ

ತಯಾರಿಕೆ : ಮೇಲಿನಂತೆ ತಯಾರಿಸಬೇಕು.

 ಪಪ್ಪಾಯ-ಸಪೋಟ ಜಾಮ್ : ಪಪಾಯ ತಿರುಳು ಅರ್ಧ ಕೆ.ಜಿ., ಸಪೋಟ ಹಣ್ಣಿನ ತಿರುಳು ಅರ್ಧ ಕೆ.ಜಿ., ಸಕ್ಕರೆ ಮುಕ್ಕಾಲು ಕೆ.ಜಿ.

      ಹಣ್ಣುಗಳ ಸಿಪ್ಪೆ ತೆಗೆದು ಬೀಜಗಳನ್ನು ಬೇರ್ಪಡಿಸಿ ಮಿಕ್ಸಿಯಲ್ಲಿ ನುಣ್ಣಗೆ ಅರೆದು ಸಕ್ಕರೆ ಬೆರೆಸಿ 30 ನಿಮಿಷ ಬಿಡಬೇಕು. ಅನಂತರ ಒಲೆಯ ಮೇಲೆ ತಿರುಗಿಸುತ್ತಾ ಜಾಮ್ ಹದಕ್ಕೆ ಬರುವವರೆಗೆ ಬೇಯಿಸಬೇಕು. ನಂತರ ಶುದ್ಧವಾದ, ಕ್ರಿಮಿರಹಿತವಾದ ಅಗಲವಾದ ಬಾಯುಳ್ಳ ಬಾಟಲಿಗಳಲ್ಲಿ ತುಂಬಿಸಿಟ್ಟುಕೊಳ್ಳಬೇಕು.

 ರಸಾಯನ : ಚೆನ್ನಾಗಿ ಹಣ್ಣಾದ ಪಪ್ಪಾಯವನ್ನು ತೊಳೆದು ಸಿಪ್ಪೆ, ಬೀಜ ಬೇರ್ಪಡಿಸಿ ತಿರುಳನ್ನು ಒಂದು ಪಾತ್ರೆಗೆ ಹಾಕಿ ಚಮಚೆಯಿಂದ ನುಣ್ಣಗೆ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಸ್ವಲ್ಪ ಬೆಲ್ಲ ಅಥವಾ ಸಕ್ಕರೆ ಬೆರೆಸಿ ತಿಂದಲ್ಲಿ ರುಚಿಕರ. ಇದನ್ನು ಚಪಾತಿ, ರೊಟ್ಟಿಯೊಂದಿಗೂ ತಿನ್ನಬಹುದು.

 ಪಪ್ಪಾಯ ಹಣ್ಣಿನ ಸಲಾಡ್ : ಹಣ್ಣಾದ ಪಪ್ಪಾಯನ್ನು ತೊಳೆದು ಸಿಪ್ಪೆ, ಬೀಜ ತೆಗೆದು ಚಿಕ್ಕ ತುಂಡುಗಳನ್ನಾಗಿ ಹೆಚ್ಚಿಕೊಂಡು ಅದಕ್ಕೆ ಹಾಲು, ಜೇನು ಬೆರೆಸಿ ಫ್ರಿಡ್ಜ್‌ನಲ್ಲಿಟ್ಟು ಸ್ವಲ್ಪ ಸಮಯ ಬಿಟ್ಟು ತಿಂದಲ್ಲಿ ತಂಪಾದ, ರುಚಿಯಾದ ಫೂಟ್ ಸಲಾಡ್ ಸಿದ್ದ ಪಪ್ಪಾಯದೊಂದಿಗೆಬಾಳೆಹಣ್ಣು, ಕರಬೂಜ, ಸೇಬು ಹಣ್ಣುಗಳನ್ನು ಬೆರೆಸಿಕೊಳ್ಳಬಹುದು.

 ಪಪ್ಪಾಯ ಕಾಯಿಯ ಮಜ್ಜಿಗೆ ಹುಳಿ : ಪಪ್ಪಾಯ ಕಾಯಿ1/ 4 ಕೆ.ಜಿ., ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ 2, ಎರಡು ಕಪ್ ಮಜ್ಜಿಗೆ, ರುಚಿಗೆ ತಕ್ಕಷ್ಟು ಉಪ್ಪು.

     ಪಪ್ಪಾಯ ಕಾಯಿಯ ಸಿಪ್ಪೆ ತೆಗೆದು ಹೋಳುಗಳನ್ನಾಗಿ ಹೆಚ್ಚಿಟ್ಟುಕೊಳ್ಳಬೇಕು. ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಹೋಳುಗಳನ್ನು ಬೇಯಿಸಿಕೊಳ್ಳಬೇಕು. ನಂತರ ಮಜ್ಜಿಗೆ ಬೆರೆಸಬೇಕು. ಹಸಿ ಮೆಣಸಿನಕಾಯಿ, ತೆಂಗಿನಕಾಯಿ ಹಾಕಿ ರುಬ್ಬಿಕೊಂಡು ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ತುಪ್ಪದ ಒಗ್ಗರಣೆ ಹಾಕಿ. ರುಚಿಕರ ಮಜ್ಜಿಗೆ ಹುಳಿ ಸಿದ್ಧ.

 ಪಪ್ಪಾಯ ಕಾಯಿಯ ಖೀರು : ಪಪ್ಪಾಯ ಕಾಯಿ1 /2 ಕೆ.ಜಿ., ಹಾಲು ಒಂದು ಲೀಟರ್, ಸಕ್ಕರೆ 2 ಬಟ್ಟಲು, ಕೋವಾ 100ಗ್ರಾಂ, ಬಾದಾಮಿ 8, ತುಪ್ಪ ಅಗತ್ಯಕ್ಕೆ ತಕ್ಕಂತೆ, ಕೇಸರಿ ಒಂದು ಚಿಟಿಕೆ.

        ಪಪ್ಪಾಯ ಕಾಯಿಯ ಮೇಲಿನ ಸಿಪ್ಪೆ ತೆಗೆದು ಕಾಯನ್ನು ತುರಿದುಕೊಳ್ಳಬೇಕು. ಈ ತುರಿಯನ್ನು ಬೇಯಿಸಿ ನೀರು ಹಿಂಡಿ ತೆಗೆಯಬೇಕು. ಹಿಂಡಿದ ತುರಿಯನ್ನು ಕೋವಾ ಸಹಿತ ಹುರಿದಿಟ್ಟುಕೊಳ್ಳಬೇಕು. ಅದರೊಂದಿಗೆ ಹಾಲು ಮತ್ತು ಸಕ್ಕರೆ ಬೆರೆಸಿ ಸಣ್ಣಗಿನ ಉರಿಯ ಮೇಲೆ ಕಾಯಿಸಬೇಕು ಬಾದಾಮಿಯನ್ನು ಸಣ್ಣ ಚೂರುಗಳನ್ನಾಗಿ ಹೆಚ್ಚಿ ತುಪ್ಪದಲ್ಲಿ ಹುರಿದು ಪಾಯಸದಲ್ಲಿ ಬೆರೆಸಿ. ಕೇಸರಿಯನ್ನು ಹಾಲಿನಲ್ಲಿ ಬೆರೆಸಿ ಸೇರಿಸಿ. ಮತ್ತೊಮ್ಮೆ ಕುದಿ ಬಂದ ನಂತರ ಒಲೆಯಿಂದ ಕೆಳಕ್ಕಿಳಿಸಿ.