ಮನೆ ಮನೆ ಮದ್ದು ಪಪ್ಪಾಯ (ಪರಂಗಿ ಹಣ್ಣು)

ಪಪ್ಪಾಯ (ಪರಂಗಿ ಹಣ್ಣು)

0

          ವಿದೇಶೀಯರಿಂದ ಭಾರತಕ್ಕೆ ಬಂದಿದ್ದಕ್ಕೆ ಪಪ್ಪಾಯಕ್ಕೆ ಪರಂಗಿ ಹಣ್ಣು ಎಂಬ ಹೆಸರು ಬಂದಿತು ದಕ್ಷಿಣ ಅಮೆರಿಕಾ ಮೂಲದ ಪಪ್ಪಾಯನ್ನು ಮೊದಲು ಕಂಡುಹಿಡಿದದ್ದು ಕೊಲಂಬಸ್ .

ಆತ ಅಮೆರಿಕಾಕ್ಕೆ ಲಗ್ಗೆಯಿಟ್ಟ ಸಮಯದಲ್ಲಿ ಅಲ್ಲಿನ ಆದಿವಾಸಿಗಳು ನೀಡಿದ ಭಾರಿ ಸಂಭ್ರಮದ ಸ್ವಾಗತದಲ್ಲಿ ವಿವಿಧ ಬಗೆಯ ಭಕ್ಷ್ಯಗಳೊಂದಿಗೆ ಈ ಹಣ್ಣು ಕೂಡ ಇತ್ತಂತೆ: ಸ್ಥಳೀಯ ನಿವಾಸಿಗಳು ಇದನ್ನು ಅವಾಬಿ’ ಎಂದು ಕರೆದರು. ಅಂದರೆ ದೇವತೆಗಳ ಹಣ್ಣು ಎಂದರ್ಥ ದಕ್ಷಿಣ ಮತ್ತು ಮಧ್ಯ ಅಮೆರಿಕಾದಲ್ಲಿ ಪಪ್ಪಾಯ ಹಣ್ಣಿನ ಮರವನ್ನು ‘ಆರೋಗ್ಯವೃದ್ಧಿ’ ಎಂದು ಕರೆಯುತ್ತಾರೆ. ಅಷ್ಟೇ ಅಲ್ಲ, ಹಣ್ಣನ್ನು ಆರೋಗ್ಯದ ಕಲ್ಲಂಗಡಿ ಎಂದೂ ಹೇಳುತ್ತಾರೆ ಅದಕ್ಕೆ ಕಾರಣವೆಂದರೆ ಇದಲ್ಲಿರುವ ಪೋಷಕಾಂಶಗಳು. ವಾಷಿಂಗ್‌ಟನ್‌ನಲ್ಲಿರುವ ವಿಜ್ಞಾನ ಕೇಂದ್ರ ಇತ್ತೀಚೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹಣ್ಣುಗಳ ಪಟ್ಟಿ ಪ್ರಕಟಿಸಿತ್ತು. ಅದರಲ್ಲಿ ಪಪ್ಪಾಯಗೆ ಅಗ್ರಪಟ್ಟ ನೀಡಲಾಗಿತ್ತು ಪಪ್ಪಾಯನ್ನು ಹಣ್ಣಾಗಿ ಮಾತ್ರವಲ್ಲ ಆರ್ಥಿಕವಾಗಿಯೂ ಲಾಭದಾಯಕ ಬೆಳೆಯಾಗಿ ಬೆಳೆಯಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ‘ಅಕ್ಕತಂಗೇದ ಹಣ್ಣು’ ಎಂದೂ ಕರೆಯುತ್ತಾರೆ. ಈ ಹಣ್ಣಿನ ಹೆಸರು ಪೋರ್ಚುಗೀಸರ ಬಣ್ಣವನ್ನು ಸೂಚಿಸುವ ಪದವೂ ಆಗಿದೆ. ಪಪ್ಪಾಯಗೆ ‘ಅಬಾಬಾಯ್’ ಎಂಬ ಹೆಸರಿತ್ತು. ನಂತರ ಪಪ್ಪಾಯ ಎಂಬ ಹೆಸರು ಪಡೆಯಿತು.

    ಪಪ್ಪಾಯ ಕಾಯಿ ಒಂದು ನಿರ್ದಿಷ್ಟ ಹಂತಕ್ಕೆ ಬೆಳೆದುನಿಂತಾಗ ಅದರಿಂದ ಹಸಿರು ಸಿಪ್ಪೆಯನ್ನು ಗೀರಿದಾಗ ಬಿಳಿಯ ಬಣ್ಣದ ರಸವೊಂದು ದ್ರವಿಸುತ್ತದೆ ಈ ಬಿಳಿ ರಸವನ್ನು ಸಂಗ್ರಹಿಸಿ, ಸಂಸ್ಕರಿಸಿದಾಗ ಪೆಪೇನ್ ಎಂಬ ಕಿಣ್ವ ದೊರೆಯುತ್ತದೆ. ಪರಿಶುದ್ಧವಾದ ಈ ಪೆಪೇನ್‌ ಗೆ ದೇಶ-ವಿದೇಶಗಳಲ್ಲಿ ಅಪಾರ ಬೇಡಿಕೆಯಿದೆ. ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಗಳ ತಯಾರಿಕೆಯಂತಹ ಮಹತ್ವದ ಉದ್ದೇಶಗಳಲ್ಲಿ ಪೆಪೇನ್ ಬಳಕೆಯಾಗುತ್ತದೆ. ಪೆಪೇನ್‌ಗೆ ಮಾಂಸವನ್ನು ಮೃದುಗೊಳಿಸುವ ಗುಣವೂ ಇದೆ. ಇದನ್ನು ಸೌಂದರ್ಯಸಾಧನಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತಿದೆ. ಅಲ್ಲದೇ ಪಪ್ಪಾಯನ್ನು ಚರ್ಮ, ಉಣ್ಣೆ, ರೇಷ್ಮೆ, ರೇಯಾನ್ ಕೈಗಾರಿಕೆಗಳಲ್ಲಿ ವಿಪುಲವಾಗಿ ಬಳಸಲಾಗುತ್ತದೆ. ಪಪ್ಪಾಯದಲ್ಲಿ ಫೈಬ್ರಿನ್ ಎಂಬ ಇನ್ನೊಂದು ಕಿಣ್ವವನ್ನು ಗುರುತಿಸಲಾಗಿದೆ ಈ ಕಿಣ್ವವು ರಕ್ತ ಹೆಪ್ಪುಗಟ್ಟುವಿಕೆಯ ಪ್ರಕ್ರಿಯೆಯಲ್ಲಿ ಅಗತ್ಯವಾದುದು

 ಸಸ್ಯವರ್ಣನೆ

      ಕ್ಯಾರಿಕಾ ಪಪಾಯ ಎಂಬ ವೈಜ್ಞಾನಿಕ ಹೆಸರುಳ್ಳ ಪಪಾಯವು ಕ್ಯಾರಿಕೇಸಿ ಕುಟುಂಬಕ್ಕೆ ಸೇರಿದೆ’ ಈ ಗಿಡವು 6-7 ಅಡಿ ಎತ್ತರವಿದ್ದು ಯಾವುದೇ ರೆಂಬೆಗಳನ್ನು ಹೊಂದಿರುವುದಿಲ್ಲ

        ಕಾಯಿಯು ಹಸಿರಾಗಿದ್ದು ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹೆಣ್ಣು ಮತ್ತು ಗಂಡು ಹೂಗಳು ಒಂದೇ ಗಿಡದಲ್ಲಿ ಅಥವಾ ಬೇರೆ ಬೇರೆ ಗಿಡಗಳಲ್ಲಿ ಕಂಡುಬರುತ್ತವೆ. ಹಣ್ಣಿನ ತಿರುಳು ಹಳದಿ ಅಥವಾ ಕೆಂಪು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿರುತ್ತದೆ.

 ಸಸ್ಯ ಹಂಚಿಕೆ

ಇದರ ಮೂಲ ದಕ್ಷಿಣ ಅಮೆರಿಕಾ ಈಗ ಪವಾಯ ಭಾರತದ ಕಾಯಂ ಬೆಳೆಯಾಗಿದ್ದು, ಹೊಸ ಹೊಸ ತಳಿಗಳಿಂದ ಕೂಡಿದ್ದು ಪ್ರತಿ ಮನೆಯಲ್ಲೂ ಒಂದೆರಡು ಗಿಡಗಳನ್ನು ಕಾಣಬಹುದಾಗಿದೆ.

 ತಳಿಗಳು  :

ಕೂರ್ಗ್ ಹನಿಡ್ಯೂ (ದ್ವಿಲಿಂಗಿ/ಹಣ್ಣು ಹೂಗಳು), ಪೂಸಾ ಡೆಲೀಷಿಯನ್ (ಹೆಣ್ಣು ಹೂ). ವಾಷಿಂಗ್‌ಟನ್, ಸೋಲೋ (ಹೆಣ್ಣು / ದ್ವಿಲಿಂಗಿ ಹೂಗಳು), ಪೂಸಾ ಜೈಯಂಟ್, ಸಿ.-1

 ಹವಾಗುಣ

      ಇದು ಶುಷ್ಕ ವಾತಾವರಣ ಮತ್ತು ಹೆಚ್ಚು ಉಷ್ಣತೆಯಲ್ಲಿ ಚೆನ್ನಾಗಿ ಬೆಳೆಯಬಲ್ಲದು.

 ಮಣ್ಣು

         ಇದನ್ನು ಹಲವಾರು ವಿಧದ ಮಣ್ಣುಗಳಲ್ಲಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವಂತಹ ಮಧ್ಯಮ ಕಪ್ಪು ಮಣ್ಣು ಮತ್ತು ಕೆಂಪು ಗೋಡು ಮಣ್ಣು ಈ ಬೆಳೆಗೆ ಸೂಕ್ತ ನೀರು ನಿಲ್ಲುವಂತಹ ಪ್ರದೇಶ ಅಥವಾ ಕಪ್ಪು ಭೂಮಿ ಈ ಬೆಳೆಗೆ ಯೋಗ್ಯವಲ್ಲ.

 ಸಸ್ಯಾಭಿವೃದ್ಧಿ

         ತಾಜಾ ಬೀಜಗಳನ್ನು 2-5 ಸೆಂ.ಮೀ. ಅಂತರದಲ್ಲಿ 2 ಸೆಂ.ಮೀ. ಆಳದಲ್ಲಿ 15 ಸೆಂ.ಮೀ. ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಬಹುದು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಬೀಜ ಬಿತ್ತನೆ ಮಾಡುವುದು ಒಳ್ಳೆಯದು. ಇದರಿಂದ ಜೂನ್-ಜುಲೈ ತಿಂಗಳುಗಳಲ್ಲಿ ನಾಟಿ ಮಾಡಲು ಸಸಿಗಳನ್ನು ಪಡೆಯಬಹುದು ಪಾಲಿಥೀನ್ ಚೀಲಗಳಲ್ಲೂ ಸಸಿಗಳನ್ನು ಬೆಳೆಸಬಹುದು. ರಂಧ್ರಗಳನ್ನು ಹೊಂದಿದ 9″x6″ ಗಾತ್ರದ ಮತ್ತು 15 ಗೇಜ್ ದಪ್ಪದ ಪಾಲಿಥೀನ್ ಚೀಲಗಳಲ್ಲಿ ಸಮಪ್ರಮಾಣದ ಕಳಿತ ಕೊಟ್ಟಿಗೆ ಗೊಬ್ಬರ. ಮೇಲ್ಮಣ್ಣು ಮತ್ತು ಮರಳಿನ ಮಿಶ್ರಣವನ್ನು ತುಂಬಬೇಕು ಹಾಗೂ ಪ್ರತಿಚೀಲಕ್ಕೆ 2 ಬೀಜದಂತೆ ಬಿತ್ತಬೇಕು. ಬೀಜ ಮೊಳಕೆಯೊಡೆದ ಮೇಲೆ ಪ್ರತಿಚೀಲದಲ್ಲಿ ಒಂದು ಸಸ್ಯವನ್ನು ಮಾತ್ರ ಉಳಿಸಿಕೊಳ್ಳಬೇಕು.

 ಬೇಸಾಯ ಕ್ರಮಗಳು

1.5 ಘನ ಅಡಿ ಗಾತ್ರದ ಗುಂಡಿಗಳನ್ನು ಮಾಡಿ ಮೇಲ್ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರದಿಂದ ತುಂಬಬೇಕು. ಆಮೇಲೆ ಸಸಿಗಳಿಗೆ ಕೋಲು ನೆಟ್ಟು ಆಧಾರ ಕೊಡಬೇಕು.

         ಹೆಣ್ಣು ಮತ್ತು ಗಂಡು ಹೂಗಳು ಬೇರೆ ಬೇರೆ ಸಸ್ಯಗಳಲ್ಲಿ ಬಿಡುವಂತಹ ತಳಿಗಳಾದಲ್ಲಿ ಎರಡು ಸಸಿಗಳನ್ನು ನಾಟಿ ಮಾಡಿ ಅವು ಹೂ ಬಿಡುವವರೆಗೆ ಸಲಹಬೇಕು. ನಂತರ ಬರೀ ಗಂಡು ಹೂಗಳನ್ನು ಬಿಡುವಂತಹ ಸಸ್ಯಗಳನ್ನು ತೆಗೆದುಹಾಕಬೇಕು.

 ನೀರಾವರಿ

       ಮಣ್ಣು ಮತ್ತು ಹವಾಗುಣಕ್ಕನುಸಾರವಾಗಿ 5-7 ದಿನಗಳ ಅಂತರದಲ್ಲಿ ನೀರನ್ನು ಒದಗಿಸಬೇಕು.

 ಕೀಟ ಮತ್ತು ರೋಗಗಳು

ಸಾಮಾನ್ಯವಾಗಿ ಕಂಡುಬರುವ ಕೀಟಗಳೆಂದರೆ ಜೇಡ, ನುಸಿ, ಹಿಟ್ಟು ತಿಗಣೆ ಹಾಗೆಯೇ ಚಿಬ್ಬುರೋಗ, ಕೊಳೆರೋಗ, ಬೂದಿರೋಗ ಕಂಡುಬರುತ್ತವೆ. ನಂಜುರೋಗ ಮತ್ತು ಮುರುಟುರೋಗಗಳು ಕಂಡುಬಂದಲ್ಲಿ ಗಿಡವನ್ನು ಕಿತ್ತು ನಾಶಪಡಿಸಬೇಕು.

 ಕೊಯ್ಲು ಮತ್ತು ಇಳುವರಿ

ನಾಟಿ ಮಾಡಿದ 9-10 ತಿಂಗಳಲ್ಲಿ ಹಣ್ಣುಗಳು ಕೊಯ್ಲಿಗೆ ಸಿದ್ದವಾಗುತ್ತವೆ. ಪ್ರತಿಗಿಡದಿಂದ ಒಂದು ವರ್ಷಕ್ಕೆ 25-30 ಹಣ್ಣುಗಳು ದೊರೆಯುತ್ತದೆ. ಪಪಾಯ ಗಿಡಗಳಿಂದ ಹಣ್ಣುಗಳನ್ನು ವರ್ಷಪೂರ್ತಿ ಪಡೆಯಬಹುದು. ಪಪಾಯದ ಇಳುವರಿಯು ಮೂರು ವರ್ಷಗಳವರೆಗೆ ಮಾತ್ರ ಲಾಭದಾಯಕ. ಆದ್ದರಿಂದ ಮೂರು ವರ್ಷಗಳ ನಂತರ ಮತ್ತೆ ನಾಟಿಮಾಡಬೇಕು.