ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮತ್ತೊಮ್ಮೆ ಕಾಗದ ರಹಿತ ಬಜೆಟ್ ಮಂಡಿಸುತ್ತಿದ್ದು, ಸಾಂಪ್ರದಾಯಿಕ ‘ಬಹಿ-ಖಾತಾ’ ಶೈಲಿಯ ಪೌಚ್ ನಲ್ಲಿ ಡಿಜಿಟಲ್ ಟ್ಯಾಬ್ಲೆಟ್ ಅನ್ನು ತೆಗೆದುಕೊಂಡು ಸಂಸತ್ ಗೆ ಆಗಮಿಸಿದ್ದಾರೆ. ಈ ಹಿಂದಿನ ವರ್ಷಗಳಂತೆಯೇ 2024-25 ರ ಸಂಪೂರ್ಣ ಬಜೆಟ್ ಅನ್ನು ಕಾಗದರಹಿತ ಸ್ವರೂಪದಲ್ಲಿ ಮಂಡಿಸಲು ಸಂಸತ್ತಿಗೆ ಆಗಮಿಸಿದ್ದಾರೆ.
ಮೆಜೆಂಟಾ ಬಾರ್ಡರ್‌ನ ಬಿಳಿ ರೇಷ್ಮೆ ಸೀರೆಯನ್ನು ಧರಿಸಿದ್ದ ನಿರ್ಮಲಾ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು ಹೋಗುವ ಮೊದಲು ಅವರು ತಮ್ಮ ಅಧಿಕಾರಿಗಳ ತಂಡದೊಂದಿಗೆ ತಮ್ಮ ಕಚೇರಿಯ ಹೊರಗೆ ಸಾಂಪ್ರದಾಯಿಕವಾಗಿ ಫೋಟೋಗೆ ಪೋಸ್ ನೀಡಿದರು.
ಬ್ರೀಫ್‌ಕೇಸ್‌ನ ಬದಲಿಗೆ ಚಿನ್ನದ ಬಣ್ಣದ ರಾಷ್ಟ್ರೀಯ ಲಾಂಛನವನ್ನು ಹೊಂದಿರುವ ಕೆಂಪು ಚೀಲದೊಳಗೆ ಇರಿಸಲಾಗಿರುವ ಟ್ಯಾಬ್ಲೆಟ್‌ನೊಂದಿಗೆ, ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಸಂಸತ್ತಿಗೆ ಆಗಮಿಸಿದ್ದಾರೆ.
ಭಾರತದ ಮೊದಲ ಪೂರ್ಣ ಸಮಯದ ಹಣಕಾಸು ಸಚಿವೆಯಾಗಿರುವ ನಿರ್ಮಲಾ, ಜುಲೈ 2019 ರಲ್ಲಿ ಕೇಂದ್ರ ಬಜೆಟ್ ಪತ್ರಗಳನ್ನು ಸಾಗಿಸಲು ಸಾಂಪ್ರದಾಯಿಕ ‘ಬಹಿ-ಖಾತಾ’ ಗಾಗಿ ಬಜೆಟ್ ಬ್ರೀಫ್ ಕೇಸ್ ವಸಾಹತುಶಾಹಿ ಪರಂಪರೆಯನ್ನು ಕೈ ಬಿಟ್ಟಿದ್ದರು. ಅದನ್ನೇ ಮುಂದುವರಿಸಿದ್ದಾರೆ.