ರಾಮನಗರ: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ಪ್ಯಾರಾಮೆಡಿಕಲ್ ಕೋರ್ಸ್ ಅಧ್ಯಯನ ಮಾಡುತ್ತಿದ್ದ 20 ವರ್ಷದ ಯುವತಿ ಸಿಂಗರಾಜಿಪುರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಮೃತಳನ್ನು ಮದ್ದೂರು ತಾಲೂಕಿನ ಅಂಬರಹಳ್ಳಿ ಗ್ರಾಮದ ಮಹಾಲಕ್ಷ್ಮೀ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಸಿಂಗರಾಜಿಪುರ ಕೆರೆಯ ದಡದಲ್ಲಿ ವಿದ್ಯಾರ್ಥಿನಿಯ ಬ್ಯಾಗ್ ಮತ್ತು ಐಡಿ ಕಾರ್ಡ್ ಪತ್ತೆಯಾಗಿತ್ತು. ಈ ಹಿನ್ನೆಲೆ ಆತಂಕಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸಂಯುಕ್ತ ಹುಡುಕಾಟ ನಡೆಸಿದರು.
ಇಂದು ಬೆಳಿಗ್ಗೆ, ತೀವ್ರ ಶೋಧದ ಬಳಿಕ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆಯಾಗಿದೆ. ಇದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆಯಾದರೂ, ನಿಖರ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.














