ತುಮಕೂರು : ಗೃಹಸಚಿವ ಜಿ ಪರಮೇಶ್ವರ್‌ಗೆ ಸಿಎಂ ಸ್ಥಾನ ಕೊಡಬೇಕೆಂದು ಆಗ್ರಹಿಸಿ ದಲಿತಪರ ಸಂಘಟನೆ ಇಂದು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ತುಮಕೂರು ನಗರದ ಟೌನ್‌ಹಾಲ್ ವೃತ್ತದಲ್ಲಿ ಪರಮೇಶ್ವರ್ ಅಭಿಮಾನಿಗಳು ಜಮಾವಣೆಗೊಂಡು, ಮುಂದಿನ ಸಿಎಂ ಪರಮೇಶ್ವರ್‌ಗೆ ಜೈ ಎಂದು ಘೋಷಣೆ ಕೂಗಿದ್ದಾರೆ. ಆಗಲೇಬೇಕು, ಆಗಲೇಬೇಕು ದಲಿತ ಸಿಎಂ ಆಗಲೇಬೇಕು ಎಂದು ಉದ್ಘೋಷ ಕೂಗಿದ್ದಾರೆ. ಅಲ್ಲದೇ ಸಂವಿಧಾನ ಬರೆದವರಿಗೆ ಸಂವಿಧಾನ ಹಿಡಿಯುವ ಹಕ್ಕಿಲ್ಲವೇ ಎಂಬ ಪೋಸ್ಟರ್ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಟೌನ್ ಹಾಲ್ ವೃತ್ತದಲ್ಲಿ ಮಾನವ ಸರಪಳಿ ಮಾಡಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ. ಹೈಕಮಾಂಡ್ ಈ ಬಾರಿಯಾದರೂ ದಲಿತ ಸಿಎಂ ಮಾಡಲಿ, ಅದರಲ್ಲೂ ಜಿ ಪರಮೇಶ್ವರ್‌ಗೆ ಮೊದಲ ಆದ್ಯತೆ ಕೊಡಲಿ. 5 ವರ್ಷನೂ ಇವರೇ ಅಧಿಕಾರ ಅನುಭವಿಸಬೇಕಾ? ಈಗ ದಲಿತರಿಗೆ ಬಿಟ್ಟು ಕೊಡಲಿ ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್‌ಗೆ ಪ್ರತಿಭಟನಾಕಾರರು ರಕ್ತದಲ್ಲಿ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಕರ್ಣ, ದಲಿತದೊರೆ, ನಾಡಿಗೆ ನಾಯಕ ಡಾ. ಜಿ.ಪರಮೇಶ್ವರ್ ಸಾಹೇಬ್ರು ಮುಖ್ಯಮಂತ್ರಿಯಾಗಲೇ ಬೇಕು ಎಂದು ಪತ್ರ ಬರೆಯಲಾಗಿದೆ. ಟೌನ್ ಹಾಲ್ ವೃತ್ತದಲ್ಲಿ ಪರಮೇಶ್ವರ್ ಅಭಿಮಾನಿ ನಗುತ ರಂಗನಾಥ್ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಪ್ರತಿಭಟನಾಕಾರರು ಮಲ್ಲಿಕಾರ್ಜುನ್ ಖರ್ಗೆಗೆ ರವಾನಿಸಲಿದ್ದಾರೆ.















