ಮನೆ ಮಕ್ಕಳ ಶಿಕ್ಷಣ ಹೆತ್ತವರು ದಿಕ್ಸೂಚಿಯಂತಿರಬೇಕು

ಹೆತ್ತವರು ದಿಕ್ಸೂಚಿಯಂತಿರಬೇಕು

0

        ಏನನ್ನಾದರೂ ಕಲಿಯಬೇಕೆಂದರೆ ಕೆಲವು ಕಷ್ಟಗಳು ತಪ್ಪಿದ್ದಲ್ಲ ಅದು ಕಷ್ಟಕರವಾದುದೆಂದು ಸುಮ್ಮನಾದರೆ ಏನನ್ನೂ ಕಲಿಯಲಾಗದು ಅದು ಶಿಕ್ಷಣವಾಗಿರಬಹುದು, ವ್ಯಾಪಾರ, ಬೇಸಾಯ, ಕೊನೆಗೆ ಕಳ್ಳತನವಾದರೂ ಪ್ರಾರಂಭದಲ್ಲಿ ಕಷ್ಟಗಳು ಸಹಜ. ಇಂತಹ ಸಂದರ್ಭದಲ್ಲಿ ಒಂದು ಬೌದ ಜಾನಪದ ಕತೆಯನ್ನು ತಿಳಿದುಕೊಳ್ಳಬೇಕು. ಒಬ್ಬ ದೊಡ್ಡ ಕಳ್ಳ ನಗರದಲ್ಲಿ ಲೆಕ್ಕವಿಲ್ಲದಷ್ಟು ಕಳ್ಳತನಗಳನ್ನು ಮಾಡಿದ ಸೈನಿಕರಿಗೆ ಆತ ದೊಡ್ಡ ತಲೆನೋವಾಗಿ ಪರಿಣಮಿಸಿದ ಆತನಿಗೆ ವಯಸ್ಸಾಗುತ್ತಿದ್ದ ಹಾಗೆ ತನ್ನ ಮಗನಿಗೆ ತನ್ನ ವಿದ್ಯೆಯನ್ನು ಕಲಿಸಬೇಕೆಂದುಕೊಂಡ. ಮಗನು ಅದಕ್ಕೆ ಬಹಳ ಆನಂದದಿಂದ ಒಪ್ಪಿಕೊಂಡ.

Join Our Whatsapp Group

     ಒಂದು ರಾತ್ರಿ ಇಬ್ಬರೂ ನಗರದಲ್ಲಿನ ಒಬ್ಬ ಶ್ರೀಮಂತನ ಮನೆಗೆ ಕನ್ನ ಹಾಕಲು ಒಳಗೆ ಪ್ರವೇಶಿಸಿದರು. ಅಲ್ಲಿಂದ ನೇರವಾಗಿ ಒಡವೆಗಳನ್ನು ಭದ್ರಪಡಿಸಿಟ್ಟಿದ್ದ ಕೋಣೆಯೊಳಕ್ಕೆ ಹೋದರು. ಮಗನಿಗೆ ಮೂಟೆ ಕಟ್ಟಲು ಹೇಳಿದ ಮಗನು ಆ ಕೆಲಸ ಮಾಡುತ್ತಿರಬೇಕಾದರೆ, ತಂದೆಯಾದವನು ಇದ್ದಕ್ಕಿದ್ದ ಹಾಗೆ ಆ ಕೋಣೆಯ ಬಾಗಿಲನ್ನು ಜೋರಾಗಿ ಶಬ್ದ ಬರುವ ಹಾಗೆ ಮುಚ್ಚಿಬಿಟ್ಟು, ಕೊರೆದಿದ್ದ ಕಿಂಡಿಯ ಮೂಲಕ ಹೊರಕ್ಕೆ ಓಡಿಹೋಗಿ “ಕಳ್ಳ ಕಳ್ಳ” ಎಂದು ಕಿರುಚಲಾರಂಭಿಸಿದ. ಇದನ್ನು ಕೇಳಿಸಿಕೊಂಡ ಮನೆಯವರು, ಪಕ್ಕದ ಮನೆಯವರು ಎದ್ದು ದೊಣ್ಣೆ, ಕೋಲುಗಳನ್ನು ಕೈಗೆತ್ತಿಕೊಂಡು ಓಡಿ ಬಂದರು.

       ಪಾಪ! ಆ ಕಳ್ಳನ ಮಗ ಬೆದರಿಹೋದ ತಂದೆ ತನಗೆ ಮೋಸ ಮಾಡಿದನೆಂದು ತಿಳಿದುಕೊಂಡು ಸರ್ವ ಪ್ರಯತ್ನಗಳನ್ನು ಮಾಡಿ, ಹೇಗೋ ತಪ್ಪಿಸಿಕೊಂಡು ಓಡಿದ ಮನೆಗೆ ಬಂದ ನಂತರ ಜೋರಾಗಿ ಅಳುತ್ತಾ, ‘”ಅಪ್ಪಾ, ನನಗ್ಯಾಕೆ ಈ ರೀತಿ ಮೋಸ ಮಾಡ್ಡೆ? ಅದೃಷ್ಟ ಚೆನ್ನಾಗಿತ್ತುತಪ್ಪಿಸಿಕೊಂಡೆ. ಇಲ್ಲದಿದ್ದರೆ ಅವರೆಲ್ಲಾ ನನ್ನನ್ನು ಕೊಂದೇಬಿಡುತ್ತಿದ್ದರು” ಎಂದ ಸಿಟ್ಟಿನಿಂದ. ಅದಕ್ಕೆ ತಂದೆ ನಗುತ್ತಾ ”ಮಗನೇ ಇದು ನಿನಗೆ ಮೊದಲನೇ ಪಾಠ” ಎಂದನು.

 ಹಣದಿಂದ ಎಲ್ಲವನ್ನೂ ಖರೀದಿಸಲಾಗದು

        ದೊಡ್ಡದೊಡ್ಡ ಹತ್ತಾರು ಬಂಗಲೆಗಳಿದ್ದರೂ “ಶಾಂತಿ ನಿವಾಸ’ವನ್ನು ಖರೀದಿಸ ಲಾಗುವುದಿಲ್ಲ. ಸಕಲ ಸೌಲಭ್ಯಗಳಿರುವ ಹತ್ತು ಬೆಡ್ ರೂಮ್ ಗಳಿದ್ದರೂ ನಿದ್ದೆಯನ್ನು ಖರೀದಿಸಿ ಮೈಮೇಲೆ ಹೊದ್ದುಕೊಳ್ಳಲಾರೆವು ಒಂದು ಕಾಲದಲ್ಲಿ ಶಿಕ್ಷಣವೆಂಬುದು ಕೂಡಾ ಹಾಗೆಯೇ ಇರುತ್ತಿತ್ತು. ಅದೆಷ್ಟೇ ಹಣವಿದ್ದರೂ ತಕ್ಕಷ್ಟು ಅಂಕಗಳು ಬರದಿದ್ದರೆ ಇಂಜನಿಯರಿಂಗ್. ಮೆಡಿಸಿನ್ ಗಳಂತಹ ಉನ್ನತ ಶಿಕ್ಷಣಗಳಿಗೆ ಪ್ರವೇಶ ಸಿಗುತ್ತಿರಲಿಲ್ಲ. ಆದರೀಗ, ಪರಿಸ್ಥಿತಿ ಬದಲಾಗಿದೆ ತಕ್ಕಷ್ಟು ಅಂಕಗಳು ಬಂದರೂ, ಬರದಿದ್ದರೂ ಸಾಕಷ್ಟು ಹಣ ಪಾವತಿಸಿದರೆ ಸಾಕು ಬೇಕಾದ ಡಿಗ್ರಿಗಳನ್ನು ಓದಬಹುದು, ಎನ್ನಾರೈ ಸೀಟ್ ಗಳೆಂದು, ಮಿಲಿಟರಿ, ಸ್ಪೋರ್ಟ್ಸ್ ಈ ರೀತಿ ಹಲವು ಬಗೆಯ ಕೋಟಾಗಳಿವೆ. ಹಣ ಇರುವವರು ಅವುಗಳನ್ನು ಖರೀದಿಸಬಲ್ಲರು ಆದರೆ, ಮಾಮೂಲಿ/ಮಧ್ಯಮ ವರ್ಗದ ಜನರ ಪಾಡೇನು?

ಇತ್ತೀಚಿನ ದಿನಗಳಲ್ಲಿ ವೃತ್ತಿ/ತಾಂತ್ರಿಕ ಕಾಲೇಜುಗಳಲ್ಲಿ ಒಂದು ಕೆಟ್ಟ ಸಂಸ್ಕೃತಿ ಪ್ರಾರಂಭವಾಗಿದೆ. ಹಣದಿಂದ ಸೀಟುಗಳನ್ನು ಖರೀದಿಸಿದವರು ಹಾಗೂ ಕಷ್ಟಪಟ್ಟು ಅಂಕಗಳನ್ನು ಪಡೆದುಕೊಂಡವರ ನಡುವೆ ಮಾನಸಿಕ ಸ್ಪರ್ಧೆಗಳು ಪ್ರಾರಂಭವಾಗಿವೆ. ಅದು ಜಾತಿ ಹೆಸರಿನಲ್ಲಿ, ಧರ್ಮದ ಹೆಸರಲ್ಲಿ, ಆಸ್ತಿ, ಅಂತಸ್ತುಗಳ ಮುಸುಕಿನ ಗುದ್ದಾಟ ನಡೆಯುತ್ತಿವೆ. ಇತ್ತೀಚೆಗೆ ಒಂದು ಕಾಲೇಜಿನಲ್ಲಿ ಒಬ್ಬ ಶ್ರೀಮಂತ ವಿದ್ಯಾರ್ಥಿ ರಿವಾಲ್ವರ್‌ನೊಂದಿಗೆ ತರಗತಿಗೆ ಹಾಜರಾಗಿದ್ದಾನೆ ಎಂದರೆ ರೌಡಿಜಂ ಯಾವ ಮಟ್ಟದಲ್ಲಿದೆಯೆಂಬುದನ್ನು ಯೋಚಿಸಬೇಕು.

       ನಮ್ಮಲ್ಲಿ ಅದೆಷ್ಟೇ ಹಣವಿದ್ದರೂ, ನಮ್ಮ ಮಕ್ಕಳ ವಿಷಯದಲ್ಲಿ ಮೌಲ್ಯಗಳನ್ನು ಕಲಿಸಬೇಕು. ಅಕ್ರಮ ಸಂಪಾದನೆ, ಅಡ್ಡದಾರಿ ಸಂಪಾದನೆ ಹಾಗೂ ಲಂಚಗಳನ್ನು ಸ್ವೀಕರಿಸುವುದು ನೀಚ ಹಾಗೂ ತುಚ್ಛವಾದ ಕೆಲಸಗಳೆಂದು ಅವರಿಗೆ ಮನವರಿಕೆ ಮಾಡಿಕೊಡಬೇಕು ಆದರೆ ಇಂದಿನ ಮೌಲ್ಯಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ದಿನಪತ್ರಿಕೆ ಓದುತ್ತಿದ್ದರೆ ಅರ್ಥವಾಗುತ್ತದೆ.

 ಬದಲಾಗುತ್ತಿರುವ ಮೌಲ್ಯಗಳು :

       ಈಗಿನ ಕಾಲದಲ್ಲಿ ಕಾಲದ ಜೊತೆಜೊತೆಗೆ ಮೌಲ್ಯಗಳೂ ಬದಲಾಗುತ್ತಿವೆ. ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತಿವೆ. ಇವುಗಳ ಬಗ್ಗೆ ಆಲೋಚಿಸಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ವೃತ್ತಿ, ವ್ಯಾಪಾರಗಳಲ್ಲಿ ಲಾಭಗಳನ್ನು ಸಂಪಾದಿಸಬೇಕೆಂಬ ಆಲೋಚನೆ ಎಲ್ಲರಿಗೂ ಇರುತ್ತದೆ. ಆದರೆ ಅಕ್ರಮವಾಗಿ ಸಂಪಾದಿಸಿದರೆ ಉಳಿಯುವುದಿಲ್ಲವೆಂಬ ಸತ್ಯವನ್ನು ಗುರುತಿಸಬೇಕು. ಅದೆಷ್ಟೇ ಸಂಪಾದಿಸಿದರೂ, ಅದನ್ನು ಕೊನೆಯಲ್ಲಿ ತಮ್ಮೊಟ್ಟಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗದೆಂಬುದನ್ನು ಗುರುತಿಸಬೇಕು. ಮಕ್ಕಳಿಗೆ ಕೊಡುವುದಕ್ಕಾದರೂ ಒಂದು ಮಿತಿಯನ್ನು ಹಾಕಿಕೊಳ್ಳಬೇಕು. ಹಾಗಲ್ಲದೆ ಮಕ್ಕಳ ಕೈತುಂಬಾ ಹಣವಿದ್ದರೆ ಒಳ್ಳೆಯದು ಅವರಿಗೆ ಧೈರ್ಯಬರುತ್ತದೆ ದ್ವಂದ್ವಗಳು ತಲೆದೊರುವುದಿಲ್ಲ ಎಂದುಕೊಂಡರೆ ಭವಿಷ್ಯತ್ತಿನಲ್ಲಿ ತಾಯಿ-ತಂದೆಯರೇ ಅಪಾರ ಸಂಕಷ್ಟಕ್ಕೊಳಗಾಗಬೇಕಾಗುತ್ತದೆ

 ಹಣ ಹೆಚ್ಚಾದರೆ….?

       ಒಬ್ಬ ಶ್ರೀಮಂತ ವ್ಯಕ್ತಿ, ತನ್ನ ಮಗನಿಗೆ ಹಳ್ಳಿ/ಗಾ ಮಗಳ ವಾತಾವರಣ, ಬಡವರ ಜೀವನ ವಿಧಾನವನ್ನು ತೋರಿಸಿಕೊಡಬೇಕೆಂದು, ತನ್ನ ಗ್ರಾಮಕ್ಕೆ ಕರೆದುಕೊಂಡು ಹೋದರು ಆ ರಾತ್ರಿ ಒಬ್ಬ ರೈತನ ಮನೆಯಲ್ಲಿ ತಂಗುವುದಾಗಿ ಕೇಳಿದರು ಆತ ಸಂತೋಷವಾಗಿ ಅಂಗೀಕರಿಸಿದ ರಾತ್ರಿ ಊಟವಾದ ನಂತರ ಹೊರಗಿನ ಜಗುಲಿ ಮೇಲೆ ಮಲಗಿಕೊಂಡರು ಬೆಳಗ್ಗೆ ಬೇಗ ಎದ್ದು ಕಾಲಕೃತ್ಯಗಳನ್ನು ಮುಗಿಸಿಕೊಂಡು, ಇಡೀ ಗ್ರಾಮವನ್ನು ಸುತ್ತಾಡಿ ಬಂದರು ಮನೆಗೆ ಬಂದ ನಂತರ ತಂದೆ ಮಗಾ ಹಳ್ಳಿ ಹೇಗಿದೆ? ತೊಂದರೆಯಾಯಿತೆ?’ ಎಂದು ಕೇಳಿದ.

“ಹಾಗೇನಿಲ್ಲಾ ಡ್ಯಾಡಿ, ಹಳ್ಳಿ ವಾತಾವರಣ ತುಂಬಾ ಚೆನ್ನಾಗಿದೆ ಮುಖ್ಯವಾಗಿ ಬಡವರ ಜೀವನ ನಮಗಿಂತ ಚೆನ್ನಾಗಿದೆ” ಎಂದ ಮಗ.

”ಅದೇನೋ ಹಾಗೇಳ್ತಿದ್ದೀಯಾ? ನಮಗಿರುವ ವಸತಿ, ಸೌಲಭ್ಯ, ಸೌಕರ್ಯಗಳು ಅವರಿಗಿಲ್ಲವಲ್ಲ? ಅದ್ಹೇಗೆ ನಿನ್ಗೆ ಇಷ್ಟವಾಯ್ತು?” ಎಂದು ಕೇಳಿದ ತಂದೆ ವಿಸ್ಮಯದಿಂದ

“ಡ್ಯಾಡಿ’ ನಮ್ಮ ಮನೆಯಲ್ಲಿ ಒಂದೇ ಒಂದು ನಾಯಿಯಿದೆ. ಅವರ ಮನೆಯಲ್ಲಿ ನಾಲ್ಕು ನಾಯಿಗಳಿವೆ ಒಂದು ಮೇಕೆ ಕೂಡಾ ಇದೇ ತಾನೇ?”

” ಹೌದು”

“”ನಮಗೆ ಹಾಲು ಬೇಕೆಂದರೆ ಡೈರಿ. ಬೇಕರಿಗೆ ಹೋಗಿ ತರಬೇಕು. ಅವರ ಮನೆಯಲ್ಲಿ ಹಸುಗಳಿವೆ ತಾನೇ?”

‘ನಿಜವೇ

“’ನಮ್ಮ ಮನೆಯಲ್ಲಿ ನಾವು ಕಟ್ಟಿಸಿಕೊಂಡ ಸ್ವಿಮ್ಮಿಗ್ ಪೂಲ್ ಇದೆ. ಅದರಲ್ಲಿ ಆಗಾಗ್ಗೆ ನೀರನ್ನು ಬದಲಾಯಿಸುತ್ತಿರಬೇಕು ಆದರೆ ಅವರ ಮನೆಯ ಪಕ್ಕದಲ್ಲಿರುವ ನೀರಿನ ಕಾಲುವೆ ಅದೆಷ್ಟು ಉದ್ದವಾಗಿದೆಯೋ ನೋಡಿದಿರಾ? ಅವರು ನಮ್ಮಂತೆ ನೀರನ್ನು ಬದಲಾಯಿಸಬೇಕಾದ ಅಗತ್ಯ ವಿಲ್ಲವಲ್ಲ?’

”ನೀನು ಹೇಳಿದ್ದು ಒಂದು ರೀತೀಲಿ ಕರೆಕ್ಟ್ ”

”ನಮ್ಮ ಮನೆಯ ಮುಂದೆ ಗಾರ್ಡನ್ ನಲ್ಲಿ ಅನೇಕ ಬಗೆಯ ಬಣ್ಣಬಣ್ಣದ ದೀಪಗಳಿಂದ ದೀಪಾಲಂಕಾರ ಮಾಡಿಕೊಂಡಿದ್ದೇವೆ ಆದರೆ ಅವರ ಮನೆ ಮುಂದೆ ನಿಜವಾದ ನಕ್ಷತ್ರಗಳು ಅದೆಷ್ಟು ಚೆನ್ನಾಗಿ ಹೊಳೆಯುತ್ತಿವೆ!”

“ನಮ್ಮ ಮನೆಯಿಂದ ಆಚೆ ಬಂದು ನೋಡಿದರೆ ಅವು ಕಾಣಿಸುತ್ತವೆ ಹೌದಾ!”

      “ಎಲ್ಲಕ್ಕಿಂತ ಮುಖ್ಯವಾದದ್ದೆಂದರೆ, ಡ್ಯಾಡಿ! ಅವರ ಮನೆಯ ಮುಂದೆ ಹಜಾರದ ಮೇಲೆ ಮಲಗಿಕೊಂಡಾಗ ಅದೆಷ್ಟು ಸೊಂಪಾದ ನಿದ್ದೆ ಬಂದಿತೆಂದರೆ, ಬೆಳಗಾಗುವ ತನಕ ಎಚ್ಚರಿಕೆಯಾಗಲೇ ಇಲ್ಲ ನಮ್ಮ ಮನೆಗಳಲ್ಲಿ ಕರೆಂಟ್ ಹೋದ್ರೆ ಎ.ಸಿ.ಗಳು ಆಫ್ ಆಗಿಬಿಡುತ್ತವೆ. ನೀನು ಏನೇ ಹೇಳು ಡ್ಯಾಡಿ… ನಾವು ಬಡವರಿಗಿಂತ ತುಂಬಾ ದುರಾದೃಷ್ಟವಂತರು” ಎಂದು ಹೇಳಿ ಮುಗಿಸಿದ ತಂದೆ ಮಗನ ಮುಂದೆ ಬೇರೇನೂ ಹೇಳಲಿಕ್ಕಾಗದೆ ನಿಟ್ಟುಸಿರೇ ಉತ್ತರವಾಗಿತ್ತು

ಅತಿಯಾಗಿ ಸಿಹಿ ಸೇವಿಸಿದರೆ ಮುಖಕ್ಕೆ ಹೊಡೆದಂತಾಗುತ್ತದಲ್ಲದೆ ಆರೋಗ್ಯ ಕೂಡಾ ಕೆಡಬಹುದು ಆದ್ದರಿಂದ ನಮ್ಮ ಮಕ್ಕಳಿಗೆ ಹಣದ ಮೌಲ್ಯವನ್ನು ತಿಳಿಯಪಡಿಸಲು ಜಿಡ್ಡು ಕೃಷ್ಣಮೂರ್ತಿಯವರ ತತ್ತ್ವದಂತೆ ಸಿಂಪಲ್ ಲೀವಿಂಗ್ -ಹೈ ಥಿಂಕಿಂಗ್ನ್ನು ಅಳವಡಿಸಿಕೊಳ್ಳಬೇಕು. ನಿರಾಡಂಬರ ಜೀವನ, ಅದ್ಭುತ ಆಲೋಚನೆಗಳೊಂದಿಗಿರುವವರು ಮುಂದಿನ ತಲೆಮಾರಿನ ವರಿಗೆ ಉತ್ತಮ ಸಂದೇಶವನ್ನು ನೀಡಬಲ್ಲರು.

 ಪ್ರಾದೇಶಿಕತೆ, ಧರ್ಮ, ಜಾತಿಗಳ ಕಪಿಮುಷ್ಟಿಯಲ್ಲಿ ವಿದ್ಯಾಲಯಗಳು…

       ಮೌಲ್ಯಗಳನ್ನು ಬೋಧಿಸುವ ವಿದ್ಯಾಲಯಗಳಲ್ಲಿ ಇತ್ತೀಚಿಗೆ ಧರ್ಮ, ಜಾತಿ, ಪ್ರಾದೇಶಿಕ ಅಭಿಮಾನಗಳು ಗಣನೀಯವಾಗಿ ಪ್ರಸಾರವಾಗುತ್ತಿವೆ ಈ ಕೆಟ್ಟ ಸಂಸ್ಕೃತಿಯ ವಿಷವರ್ತುಲದಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಗಳಲ್ಲಿ ಒಂದಿಬ್ಬರಿಗೆ ಒಳ್ಳೆಯದಾಗಬಹುದಾದರೂ ಅನೇಕರು ಸಂಕಷ್ಟಗಳಿಗೆ ಗುರಿಯಾಗುತ್ತಿದ್ದಾರೆ. ಇದೆಲ್ಲೋ ರಾಜಸ್ಥಾನ, ಬಿಹಾರಗಳಲ್ಲಿ ನಡದರೆ “ಓಹೋ… ಹಾಗೇನು ಎಂದುಕೊಳ್ಳಬಹುದು ಆದರೆ ಈ ವಿಷಯದಲ್ಲಿ ಮೇಧಾವಿ ವರ್ಗ ಎಚ್ಚೆತ್ತುಕೊಳ್ಳಬೇಕಾದ ಅಗತ್ಯತೆ ಇದೆ, ತಾಯಿ, ತಂದೆಯರು ಈ ವಿಷಯಗಳಲ್ಲಿ ತ್ವರಿತವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಇಲ್ಲದಿದ್ದರೆ ಇಂದಿನ ಯುವಜನತೆ ತುಳಿಯಬಹುದಾದ ಜಾಡನ್ನು ಬಹುಶಃ ಊಹಿಸಿಕೊಳ್ಳಲೂ ಅಸಾಧ್ಯ.