ʼಪರಿಘʼವೆಂದರೆ ಲಾಳವಂಡಿಗೆ ; ಅಂದರೆ ಹೆಬ್ಬಾಗಿಲನ್ನು ಮುಚ್ಚಿ ಅದನ್ನು ಬಿಗಿಸಿಡಲು ಉಪಯೋಗಿಸುವ ಕಬ್ಬಿಣದ ಅಡ್ಡಸಲಾಕೆ ಅಥವಾ ಅಗಳಿ. ಈ ಆಸನದ ಭಂಗಿಯಲ್ಲಿ ದೇಹವು ಬಾಗಿಲುಗಳನ್ನ ಬೀಗಿಸುವ ಅಗಲಿಕೆಯನ್ನು ಹೋಲುತ್ತದೆಯಾದುದರಿಂದ ಈ ಆಸನಕ್ಕೆ ಈ ಹೆಸರು.
ಅಭ್ಯಾಸ ಕ್ರಮ :-
೧. ಮೊದಲು ಕಾಲುಗಳನ್ನು (ಹರಡುಗಳು) ಜೊತೆ ಸೇರುವಂತೆ ಮಂಡಿಗಳನ್ನು ನೆಲದ ಮೇಲೆ ಊರಿಡಬೇಕು.
೨. ಬಳಿಕ ಬಲಗಾಲನ್ನು ಬಲಪಕ್ಕಕ್ಕೆ ನೀಡಲವಾಗಿ ಚಾಚಿ, ಅದು ಮುಂಡ, ಎಡಮಂಡಿ ಇವು ಒಂದೇ ಸರಳರೇಖೆಯಲ್ಲಿರುವಂತೆ ಅಳವಡಿಸಬೇಕು. ಬಳಿಕ ಬಲ ಪಾದವನ್ನು ಬಲಗಡೆಗೆ ತಿರುಗಿಸಿ, ಬಲಗಾಲನ್ನು ಮಂಡಿಯಲ್ಲಿ ಬಿಗಿಗೊಳ್ಳುವಂತೆ ನೀಳವಾಗಿ ಚಾಚಬೇಕು.
೩. ಅನಂತರ ಉಸಿರನ್ನು ಒಳಕ್ಕೆಳೆಯುತ್ತಿರುವಂತೆಯೇ, ತೋಳುಗಳೆರಡನ್ನು ಎರಡು ಕಡೆಗೆ ಎತ್ತಿ ಚಾಚಬೇಕು. ಈ ಸ್ಥಿತಿಯಲ್ಲಿ ಎರಡು ಸಾರಿ ಉಸಿರಾಟ ನಡೆಸಬೇಕು.
೪. ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು ಚಾಚಿದ ಬಲಗಾಲ ಕಡೆಗೆ ದೇಹದ ಮುಂಡವನ್ನು ಮತ್ತು ಬಲದೊಳನ್ನು ಬಾಗಿಸಬೇಕು. ಬಳಿಕ ಬಲದಮುಂಗೈ ಬಲದಕಣಕಾಲಿನ ಮೇಲೆ ಬರುವಂತೆಯೂ ಬಲಗೈ ಮಣಿಕಟ್ಟು ಬಲಗಾಲ ಹರಡಿನ ಗಿಣ್ಣಿನಮೇಲೆ ಬರುವಂತೆಯೂ, ಬಲದಂಗೈ ಮೇಲ್ಮುಖವಾಗಿರುವಂತೆ ಊರಿಡಬೇಕು. ಅಲ್ಲದೆ ಬಲ ಕಿವಿಯನ್ನ ಬಲದ ಮೇಲ್ದೋಳಿನ ಮೇಲೆ ಒತ್ತಿಡಬೇಕು. ಆಗ ಎಡದೊಳನ್ನ ತಲೆಯ ಮೇಲೆ ಹಾಯಿಸಿ ಎಡದಂಗೈ ಬಲದಂಗೈಯನ್ನು ಮುಟ್ಟುವಂತಾಗಿಸಬೇಕು. ಈಗ ಎಡ ಕಿವಿಯು ಎಡದ ಮೇಲ್ದೋಳನ್ನು ಮುಟ್ಟಿಕೊಂಡಿರುತ್ತದೆ.
೫. ಈ ಭಂಗಿಯಲ್ಲಿ 30 ರಿಂದ 60 ಸೆಕೆಂಡ್ಗಲ ಕಾಲ ಸಾಧಾರಣವಾದ ಶ್ವಾಸೋಚ್ಛಾಸದಿಂದ ನೆಲೆಸಿರಭೇಕು.
೬. ಈಗ ಉಸಿರನ್ನು ಒಳಕ್ಕೆಳೆದು ಮುಂಡಭಾಗವನ್ನು ಮತ್ತು ತೋಳುಗಳನ್ನು ಇದರಲ್ಲಿನ ೩ನೇ ಸ್ಥಿತಿಗೆ ಮತ್ತೆ ತಂದಿರಿಸಬೇಕು. ಬಳಿಕ ಬಲಮಂಡಿಯನ್ನು ಬಗ್ಗಿಸಿ ಗಿಣ್ಣುಗಳು ಮತ್ತೆ ಸೇರುವಂತೆ ಮಂಡಿಗಳನ್ನ ನೆಲದಮೇಲೆ ಊರಬೇಕು.
೭. ಆಮೇಲೆ ಈ ಭಂಗಿಗಳ ಅಭ್ಯಾಸವನ್ನು ಇನ್ನೊಂದು ಕಡೆಗೂ ಸಹ ನಡೆಸುವಾಗ ಎಡಕ್ಕೆ ಬಲ, ಬಲಕ್ಕೆ ಎಡ ಹೀಗೆ ಪಲ್ಲಟಿಸಬೇಕು. ಈ ಭಂಗಿಯ ಅಭ್ಯಾಸದ ಕಾಲ ಎರಡು ಪಕ್ಕಗಳಿಗೂ ಒಂದೇ ಸಮಾನಾಗುವಂತೆ ಅದರಲ್ಲಿ ನಿಲ್ಲಿಸಬೇಕು.
ಪರಿಣಾಮಗಳು :-
ಈ ಆಸನದ ಅಭ್ಯಾಸದಿಂದ ವಸ್ತುಕುಹರ ಪ್ರದೇಶ ಅಥವಾ ಮೂತ್ರಪಿಂಡದ ಕುಳಿ(Pelvic region) ಇವು ಹಿಗ್ಗುತ್ತದೆ. ಹಿಬ್ಬೋಟ್ಟೆಯ ಒಂದು ಪಕ್ಕ ಹಿಗ್ಗಿದ್ದರೆ, ಮತ್ತೊಂದು ಪಾರ್ಶ್ವ ಸ್ವಲ್ಪ ಪಕ್ಕಕ್ಕೆ ಬಗ್ಗುತ್ತದೆ. ಇದರಿಂದ ಕಿಬ್ಬೊಟ್ಟೆ ಮಾಂಸಖಂಡಗಳು ಮತ್ತು ಅದರ ಒಳಗಿರುವ ಅಂಗಗಳು ಸರಿಯಾದ ಸ್ಥಿತಿಯಲ್ಲಿರಲು ಅವಕಾಶವಾಗುತ್ತದೆ. ಅಲ್ಲದೆ ಕಿಬ್ಬೋಟ್ಟೆಯ ಸುತ್ತಲೂ ಇರುವ ಚರ್ಮವು ಜೋಲದೆ ಆರೋಗ್ಯ ಸ್ಥಿತಿಯಲ್ಲಿರುವಂತೆ ಮಾಡಲು ಈ ಭಂಗಿಯೂ ಸಹಾಯಕವಾಗುವುದು. ಇದರ ಜೊತೆಗೆ ಈ ಭಂಗಿಯಲ್ಲಿ ಬೆನ್ನುಮೂಳೆ ಇತ್ತತ್ತ ಚಲಿಸುವುದರಿಂದ ಬೆನ್ನುಪೆಡಿಸಿನಿಂದ ನೋವನ್ನುನುಭವಿಸುವವರ ನೋವು ನಿಗುವುದು.