ಮನೆ ಕ್ರೀಡೆ ಪ್ಯಾರಿಸ್ ಒಲಿಂಪಿಕ್ಸ್​: ಪಿವಿ ಸಿಂಧುಗೆ ಭರ್ಜರಿ ಜಯ

ಪ್ಯಾರಿಸ್ ಒಲಿಂಪಿಕ್ಸ್​: ಪಿವಿ ಸಿಂಧುಗೆ ಭರ್ಜರಿ ಜಯ

0

ಪ್ಯಾರಿಸ್ ಒಲಿಂಪಿಕ್ಸ್​ ನ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧು ಭರ್ಜರಿ ಜಯ ಸಾಧಿಸಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಈ ಪಂದ್ಯದಲ್ಲಿ ಎಸ್ಟೋನಿಯಾದ ಕ್ರಿಸ್ಟಿನ್ ಕೂಬ ಮಣಿಸಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಮುಂದಿನ ಹಂತಕ್ಕೇರಿದ್ದಾರೆ. ಆರಂಭದಿಂದಲೇ ಉತ್ತಮ ನಿಯಂತ್ರಣ ಪ್ರದರ್ಶಿಸಿದ್ದ ಸಿಂಧು, ಮೊದಲ ಸೆಟ್​ ನಲ್ಲೇ ಎದುರಾಳಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಮೊದಲ ಸೆಟ್ ಅನ್ನು 21-9 ಅಂಕಗಳ ಅಂತರದಿಂದ ಗೆದ್ದುಕೊಂಡರು.

Join Our Whatsapp Group

ಇನ್ನು ದ್ವಿತೀಯ ಸೆಟ್​ನ ಆರಂಭದಲ್ಲಿ ಕ್ರಿಸ್ಟಿನ್ ಕೂಬ ಕಡೆಯಿಂದ ಉತ್ತಮ ಪೈಪೋಟಿ ಕಂಡು ಬಂತು. ಆದರೆ ಅನುಭವಿ ಆಟಗಾರ್ತಿಯಾಗಿರುವ ಪಿವಿ ಸಿಂಧು ಚಾಣಾಕ್ಷ ಆಟದೊಂದಿಗೆ ಆರಂಭಿಕ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾದರು. ಪರಿಣಾಮ ಕೂಬ 6 ಅಂಕಗಳನ್ನು ಕಲೆಹಾಕುವಷ್ಟರಲ್ಲಿ ಭಾರತೀಯ ತಾರೆ 15 ಪಾಯಿಂಟ್ಸ್​ ಗಳಿಸಿದ್ದರು.

ಇದರ ನಡುವೆ ಲಯ ಕಳೆದುಕೊಂಡ ಕ್ರಿಸ್ಟಿನ್ ಕೂಬ ಸತತ ತಪ್ಪುಗಳನ್ನು ಎಸೆಗಿದರೆ, ಭಾರತೀಯ ತಾರೆ ಆಕ್ರಮಣಕಾರಿ ಆಟ ಮುಂದುವರೆಸಿದರು. ಪರಿಣಾಮ ದ್ವಿತೀಯ ಸೆಟ್​ ಅನ್ನು ಸಿಂಧು 21-10 ಅಂಕಗಳ ಅಂತರದಿಂದ ಗೆದ್ದುಕೊಂಡರು.  ಈ ಗೆಲುವಿನೊಂದಿಗೆ ಪಿವಿ ಸಿಂಧು ಪ್ರಿ ಕ್ವಾರ್ಟರ್​ ಫೈನಲ್ ​ಗೆ ಪ್ರವೇಶಿಸಿದ್ದಾರೆ.

ಸಿಂಧು ಮೇಲೆ ನಿರೀಕ್ಷೆ:

ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪಿವಿ ಸಿಂಧು ಕಡೆಯಿಂದ ಪದಕವನ್ನು ನಿರೀಕ್ಷಿಸಬಹುದು. ಏಕೆಂದರೆ ಕಳೆದ ಎರಡು ಒಲಿಂಪಿಕ್ಸ್​ಗಳಲ್ಲಿ ಅವರು ಭಾರತದ ಕೀರ್ತಿ ಪಾತಾಕೆಯನ್ನು ಹಾರಿಸಿದ್ದರು.  2016 ರಲ್ಲಿ ರಿಯೊ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು, ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದರು. ಹೀಗಾಗಿ ಈ ಬಾರಿ ಕೂಡ ಪಿವಿ ಸಿಂಧು ಕಡೆಯಿಂದ ಪದಕ ನಿರೀಕ್ಷಿಸಲಾಗುತ್ತಿದೆ.

ಪಿವಿ ಸಿಂಧು ಸಾಧನೆಗಳು:

2013 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ (ಗುವಾಂಗ್‌ಝೌ, ಚೀನಾ)- ಕಂಚು

2014 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ (ಡೆನ್ಮಾರ್ಕ್)- ಕಂಚು

2014 ಕಾಮನ್ವೆಲ್ತ್ ಗೇಮ್ಸ್​ (ಸ್ಕಾಟ್ಲೆಂಡ್)- ಕಂಚು

2014 ಏಷ್ಯನ್ ಚಾಂಪಿಯನ್‌ಶಿಪ್‌ (ಸೌತ್ ಕೊರಿಯಾ)- ಕಂಚು

2016 ರಿಯೊ ಒಲಿಂಪಿಕ್ಸ್ 2016 (ಬ್ರೆಝಿಲ್)- ಬೆಳ್ಳಿ

2017 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ (ಸ್ಕಾಟ್ಲೆಂಡ್)- ಬೆಳ್ಳಿ

2018 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ (ಚೀನಾ)- ಬೆಳ್ಳಿ

2018 ಕಾಮನ್‌ವೆಲ್ತ್ ಗೇಮ್ಸ್​ (ಆಸ್ಟ್ರೇಲಿಯಾ)- ಬೆಳ್ಳಿ

2018 ಏಷ್ಯನ್ ಗೇಮ್ಸ್ (ಇಂಡೋನೇಷ್ಯಾ)- ಬೆಳ್ಳಿ

2019 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ (ಸ್ವಿಟ್ಜರ್ಲೆಂಡ್)- ಚಿನ್ನ

2020 ಟೋಕಿಯೋ ಒಲಿಂಪಿಕ್ಸ್ 2020 (ಜಪಾನ್)- ಕಂಚು

2022 ಏಷ್ಯನ್ ಚಾಂಪಿಯನ್‌ಶಿಪ್ (ಫಿಲಿಪೈನ್ಸ್)- ಕಂಚು

2022 ಕಾಮನ್ವೆಲ್ತ್ ಗೇಮ್ಸ್​ (ಇಂಗ್ಲೆಂಡ್)- ಚಿನ್ನ