ಮನೆ ಯೋಗ ಪರಿವೃತ ತ್ರಿಕೋನಾಸನ

ಪರಿವೃತ ತ್ರಿಕೋನಾಸನ

0

“ಪರಿವೃತ” ಎಂದರೆ ತಿರುಗಿಸುವುದು ; ʼತ್ರಿಕೋನʼ ಎಂದರೆ ಮೂರುಮೂಲೆಯ ಆಕಾರ. ಇದು ಮುಂಡವನ್ನು ತಿರುಗಿಸಿಟ್ಟು ತ್ರಿಕೋಣಾಕಾರಕ್ಕೆ ದೇಹವನ್ನು ತರುವ ಭಂಗಿ ಆದುದರಿಂದ “ಉತ್ಥಿತ ತ್ರಿಕೋನಾಸನ”ಕ್ಕೆ ವ್ಯತಿರಿಕ್ತವಾದ ಭಂಗಿ.

Join Our Whatsapp Group

ಅಭ್ಯಾಸ ಕ್ರಮ :-
೧. ಮೊದಲು ತಡಾಸನದಲ್ಲಿ ನಿಲ್ಲಬೇಕು. ಬಳಿಕ ಧೀರ್ಘವಾಗಿ ಉಸಿರನ್ನು ಒಳಕ್ಕೆಳದು ಸ್ವಲ್ಪ ಮೇಲೆ ಹಾರಿ, ಎರಡೂ ಕಾಲುಗಳ ನಡುವಣಂತರ 3-3 1/2 ಅಡಿಗಳೆಷ್ಟಿರುವಂತೆ ಪಕ್ಕಕ್ಕೆ ಆಗಮಿಸಿ ನೇರವಾಗಿ ನಿಲ್ಲಬೇಕು. ಎರಡು ತೋಳುಗಳನ್ನ ಹೆಗಲಿನ ಮಟ್ಟಕ್ಕೆ ಸರಿದೂಗಿಸುವಂತೆ ನೀಳವಾಗಿ ಚಾಚಿ ಅಂಗೈಗಳನ್ನು ಕೆಳಮೊಗಮಾಡಿ ಸಮತಳದ ನೆಲಕ್ಕೆ ಸಮಾನಾಂತರವಿರುವಂತೆ ನಿಲ್ಲಬೇಕು.
೨. ಆಮೇಲೆ ಬಲಪಾದವನ್ನು ಬಲಗಡೆಗೆ ಸಮಕೋನದಷ್ಟು ಅಂದರೆ 90° ಗಳಷ್ಟು ತಿರುಗಿಸಿಟ್ಟು ಎಡಪಾದವನ್ನು ಬಲಗಡೆಗೆ 60 ಡಿಗ್ರಿಗಳಷ್ಟು ಓರೆ ಮಾಡಿ ,ಎಡಮಂಡಿಯನ್ನ ಬಿಗಿಗೊಳಿಸಿ, ಆ ಕಾಲನ್ನು ಚಿತ್ರದಲ್ಲಿರುವಂತೆ ನೀಳವಾಗಿ ಚಾಚಿಡಬೇಕು.
೩. ಅನಂತನ ಉಸಿರನ್ನು ಹೊರಹೋಗಿಸಿ, ಮುಂಡವನ್ನು ಬಲಗಡೆಗೆ ತಿರುಗಿಸಿ, ಎಡಗೈಯನ್ನು ಬಲಗಾಲಿನ ಹೊಗಿಣ್ಣಿನ (ಹರಡಿನ) ಬಳಿ ನೆಲದಮೇಲೆ ಊರಿಡಬೇಕು.
೪. ತರುವಾಯ ಬಲತೋಳನ್ನ ನೀಡಲಾಗಿ ಮೇಲೆತ್ತಿ, ಎಡತೋಳಿನ ನೇರಕ್ಕೆ ಅದನ್ನು ಅಳವಡಿಸಿ, ಬಲಗೈ ಹೆಬ್ಬೆರಳಿನ ಕಡೆಗೆ ದಿಟ್ಟಿಸಬೇಕು.
೫. ಈಗ ಮಂಡಿಗಳೆರಡನ್ನೂ ಬಿಗಿಗೋಳಿಸುವುದಲ್ಲದೆ, ಬಲಗಾಲ ಬೆರಳುಗಳನ್ನ ನೆಲಕ್ಕಂಟಿಸಿಡಬೇಕು ಈ ಹಿಂದಿನಂತೆ ಎಡಪಾದದ ಹೊರಬದಿಯು ನೆಲದ ಮೇಲೆ ಚೆನ್ನಾಗಿ ಊರಿ ಇಟ್ಟಿರಬೇಕೆಂಬುದನ್ನ ನೆನಪಿನಲ್ಲಿಡಬೇಕು.
೬. ಆಮೇಲೆ ಹೆಗಲು ಮತ್ತು ಹೆಗಲೆಲುಬುಗಳನ್ನು ನೀಳವಾಗಿ ಹಿಕ್ಕಿಸಬೇಕು.
೭. ಈ ಭಂಗಿಯಲ್ಲಿ ಸುಮಾರು ಅರ್ಧನಿಮಿಷದ ಕಾಲ ಸಾಮಾನ್ಯ ಉಸಿರಾಟ ನಡೆಸುತ್ತಾ ನಿಲ್ಲಬೇಕು.
೮. ಇದಾದ ಮೇಲೆ ಉಸಿರನ್ನು ಒಳಕ್ಕೆಳದು, ಎಡಗೈಯನ್ನು ನೆಲದಿಂದ ಮೇಲೆ ತಂದು, ೧ನೇ ಸ್ಥಿತಿಗೆ ಹಿಂದಿರುಗಿ ನಿಲ್ಲಬೇಕು.
೯. ಈಗ ಉಸಿರನ್ನು ಹೊರಕ್ಕೆ ಬಿಟ್ಟು ಎಡಗಡೆಯು ಇದೆ. ಬಂಗಿಯನ್ನು ಮತ್ತೆ ಅಭ್ಯಾಸಿಸಬೇಕು. ಇಲ್ಲಿ ಎಡಪಾದವನ್ನು ಎಡಪಕ್ಕಕ್ಕೆ 90 ಡಿಗ್ರಿಯಷ್ಟು ತಿರುಗಿಸಿಟ್ಟು ಬಲಪದವನ್ನು 60 ಡಿಗ್ರಿಯಷ್ಟು ಎಡಗಡೆಗೆ ಓರೆಮಾಡಿ, ಬಲದಂಗೈಯನ್ನು ಎಡಪಾದದ ಹೊರಬದಿಗೆ ನೆಲದ ಮೇಲೆ ಊರಿಡಬೇಕು
೧೦. ಈ ಸ್ಥಿತಿಯಲ್ಲಿಯ ಭಂಗಿಯಲ್ಲಿ ನೆಲೆಸುವ ಕಾಲ ಎರಡೂ ಕಡೆ ಸಮವಾಗಿರಬೇಕು. ಈ ಕಾಲವನ್ನು ಪ್ರತಿ ಕಡೆಗೂ ಮೂರು-ನಾಲ್ಕು ಸಾರಿ ದೀರ್ಘೋಚ್ಛಸಕ್ಕೆ ಬೇಕಾಗುವಷ್ಟು ಕಾಲದಿಂದ ನಿರ್ಧರಿಸಬಹುದು.
೧೧. ಆ ಬಳಿಕ, ಉಸಿರನ್ನು ಮತ್ತೆ ಒಳಕ್ಕೆಳೆದು, ಮುಂಡವನ್ನ ಮೇಲಕ್ಕೆತ್ತಿ, ಹಿಂದಿನ ಸ್ಥಿತಿಗೆ ಅದನ್ನ ತಂದು, ಕಾಲ್ ಬೆರಳುಗಳನ್ನು ಮುಂಗಡೆಗಿರಿಸಿ ತೋಳುಗಳನ್ನು ೧ನೇ ಸ್ಥಿತಿಗೆ ತರಬೇಕು.
೧೨. ಕಡೆಯಲ್ಲಿ, ಉಸಿರನ್ನು ಹೊರದೂಡಿ, ಸ್ವಲ್ಪ ಹಿಂದಕ್ಕೆ ಜಿಗಿದು, ಮತ್ತೆ ತಡಾಸನದಲ್ಲಿನಿಲ್ಲಬೇಕು. ಇಲ್ಲಿಗೆ ಈ ಆಸನ ಕ್ರಮ ಮುಗಿಯುತ್ತದೆ.

ಪರಿಣಾಮಗಳು :-
ಈ ಆಸನವು ತೊಡೆಗಳನ್ನೂ, ಜಾನು ರಜ್ಜುಗಳನ್ನೂ (hamstrings) ಮತ್ತು ಮೀನಖಂಡಗಳನ್ನು ಬಲಗೊಳಿಸುತ್ತದೆ. ಅಲ್ಲದೆ ಬೆನ್ನು ಮೂಳೆ ಮತ್ತು ಬೆನ್ನೆಲುಬಿನ ಮಾಂಸಖಂಡಗಳು ತಮ್ಮ ಕಾರ್ಯಗಳನ್ನು ಸರಿಯಾಗಿ ನಡೆಸಿಕೊಂಡುಹೋಗುವಂತೆ ಮಾಡುತ್ತದೆ. ಇದಕ್ಕೆ ಕಾರಣ ಈ ಭಂಗಿಯು ಬೆನ್ನುಮೂಳೆಯ ಕೆಳಭಾಗದ ಸುತ್ತಲೂ ಹೆಚ್ಚು ನೆತ್ತರು ಹರಿಯುವಂತೆ ಮಾಡುತ್ತದೆ. ಇದರಿಂದ ಬೆನ್ನುನೋವು ನಿವಾರಣೆಯಾಗುವುದಲ್ಲದೆ, ಕಿಬ್ಬೊಟ್ಟೆಯೊಳಗಿನ ಅಂಗಗಳು ಹುರುಪುಗೊಳ್ಳುತ್ತದೆ ; ಟೊಂಕದ ಮಾಂಸ ಖಂಡಗಳು ಬಲಗೊಳ್ಳುತ್ತದೆ ಮತ್ತು ಎದೆಯ ಪೂರ ಹಿಗ್ಗುತ್ತದೆ.