ʼಪರಿವೃತʼವೆಂದರೆ ಹಿಂದಕ್ಕೆ ಹೊರಳಿಸುವುದೆಂದರ್ಥ. ಪಾರ್ಶ್ವ=ಪಕ್ಕ, ಕೋನ=ಮೂಲೆ. ಪಕ್ಕಕ್ಕೆ ಮೂಲೆಯಾಗುವಂತೆ ದೇಹವನ್ನು ಹೊರಳಿಸುವ ಭಂಗಿಯಾದುದರಿಂದ ಇದಕ್ಕೆ ಈ ಹೆಸರು.
ಅಭ್ಯಾಸ ಕ್ರಮ :-
೧. ಮೊದಲು ತಡಾಸನದ ಭಂಗಿಯಲ್ಲಿ ನಿಲ್ಲಬೇಕು.
೨. ಬಳಿಕ ನೀಳವಾಗಿ ಉಸಿರನ್ನು ಒಳಕ್ಕೆಳೆದು, ಸ್ವಲ್ಪ ಜಿಗಿದು, ಅಂತರ 4-4 ½ ಅಡಿಗಳಷ್ಟಾಗುವಂತೆ ಕಾಲುಗಳನ್ನು ಪಕ್ಕಕ್ಕೆ ಆಗಲಿಸಿ ನಿಲ್ಲಬೇಕು. ಬಳಿಕ ತೋಳುಗಳನೆತ್ತಿ, ಎರಡು ಕಡೆಗೂ ಭುಜಗಳ ಮಟ್ಟಕ್ಕೆ ಅವನ್ನು ಚಾಚಿ, ಅಂಗೈ ಕೆಳಮೊಗಮಾಡಿ ನಿಲ್ಲಿಸಬೇಕು.
೩. ಆಮೇಲೆ ಬಲಪಾದವನ್ನು ಬಲಪಕ್ಕಕ್ಕೆ 90 ಡಿಗ್ರಿಗಳಷ್ಟು ಬಲಪಕ್ಕಕ್ಕೆ ಓರೆ ಮಾಡಿಟ್ಟು ಎಡಗಾಲನ್ನು ನೀಡಲವಾಗಿ ಚಾಚಿ, ಆ ಮಂಡಿಯನ್ನು ಬಿಗಿಗೊಳಿಸಬೇಕು. ಬಳಿಕ ಬಲಗಾಲನ್ನು ಮಂಡಿಯಲ್ಲಿ ಭಾಗಿಸಿ ತೊಡೆ ಮತ್ತು ಮೀನ ಕಂಡಗಳ ಮಧ್ಯೆ ಒಂದು ಸಮಕೋನವಾಗುವಂತೆಯೂ ಬಲತೊಡೆಯು ನೆಲಕ್ಕೆ ಸಮಂತರವಾಗುವಂತೆಯೂ ಅಳವಡಿಸಬೇಕು.
೪. ಈಗ ಉಸಿರನ್ನು ಹೊರಕ್ಕೆ ಬಿಟ್ಟು ಎಡ ತೋಳನ್ನು ಬಲಮಂಡಿಯ ಮೇಲೆ ತಂದು ಎಡ ಕಂಕುಳನ್ನು ಬಲಮಂಡಿಯ ಹೊರಬದಿಗೆ ಒರಗಿಸಿಟ್ಟು, ಎಡದಂಗೈಯನ್ನು ಬಲಪಾದದ ಹೊರಭಾಗಕ್ಕೆ ನೆಲದ ಮೇಲೆ ಊರಿಡಬೇಕು.
೫. ಆ ಬಳಿಕ ಬೆನ್ನುಮೂಳೆಯನ್ನು ಬಲಪಕ್ಕಕ್ಕೆ ಚೆನ್ನಾಗಿ ತಿರುಗಿಸಿ, ಮುಂಡಭಾಗವನ್ನು ಹೊರಳಿಸಿ ಚಿತ್ರದಲ್ಲಿರುವಂತೆ ಬಲತೋಳನ್ನು ಎಡಗಿವಿಯ ಮೇಲೆ ತಂದು, ಅದನ್ನು ನೀಳವಾಗಿ ಮೇಲಕ್ಕೆ ಚಾಚಿ ಅದರ ಕಡೆಗೆ ದೃಷ್ಟಿಯನ್ನು ನೇಡಬೇಕು. ಈ ಆಸನಭ್ಯಾಸದ ಉದ್ದಕ್ಕೂ ಎಡಮಂಡಿಯನ್ನು ಬಿಗಿಗೊಳಿಸಿಯೇ ಇಟ್ಟಿರಬೇಕು.
೬. ಈ ಬಂಗಿಯಲ್ಲಿ ಉಸಿರಾಟವನ್ನು ಸಮವಾಗಿ ನಡೆಸುತ್ತಾ ಸುಮಾರು ಅರ್ಧದಿಂದ ಒಂದು ನಿಮಿಷದ ಕಾಲ ನೆಲೆಸಬೇಕು. ಬಳಿಕ ಉಸಿರನ್ನು ಒಳಕ್ಕೆಳೆದು ಎಡದಂಗೈಯನ್ನು ನೆಲದಿಂದ ಮೇಲೆತ್ತಬೇಕು. ಬಳಿಕ ಮುಂಡವನ್ನು ಮೇಲೆತ್ತಿ, ಬಲಗಾಲನ್ನು ನೀಳಮಾಡಿ, ತೋಳುಗಳನ್ನು ಮೇಲಕ್ಕೆತ್ತಿ, ೨ನೇ ಸ್ಥಿತಿಗೆ ಬಂದು ನಿಲ್ಲಬೇಕು.
೭. ಇದಾದ ಮೇಲೆ ಎಡಪಕ್ಕದಲ್ಲಿಯೂ ೩ ರಿಂದ ೫ರ ಅನುಬಂಧದವರೆಗೆ ವಿವರಿಸಿದಂತೆ ಅದೇ ಭಂಗಿಗಳನ್ನ ತಿರುಗುಮುರುಗು (ವ್ಯತ್ಯಾಸ)ಮಾಡಿ, ಉಸಿರು ಹೊರ ಬಿಡುವುದರಿಂದಾರಂಭಿಸಿ ಕೊನೆಯವರೆಗೂ ಅಭ್ಯಾಸ ಮಾಡಬೇಕು.
೮. ಈ ಭಂಗಿಗಳ ಅಭ್ಯಾಸದಲ್ಲಿ ಚಲನವಲನಗಳನ್ನ ಮೊದಲು ಒಂದು ಕಡೆಗೆ, ಮತ್ತೆ ಇನ್ನೊಂದು ಕಡೆಗೆ ನಡೆಸುವಾಗಲೆಲ್ಲ ಭಂಗಿಯ ನಿಲುವಿನ ಕಾಲಂತರವು ಎರಡು ಕಡೆಗೂ ಒಂದೇ ಸಮನಾಗಿರಬೇಕು. ಈ ಸಾಮಾನ್ಯ ನಿಯಮವನ್ನು ಕಡ್ಡಾಯವಾಗಿ ಅನುಸರಿಸಬೇಕು.
ಪರಿಣಾಮಗಳು :-
ಈ ಆಸನವು ʼಪರಿವೃತ್ತ ತ್ರಿಕೋನಾಸನʼಕ್ಕಿಂತಲೂ ಹೆಚ್ಚು ಪರಿಣಾಮಕಾರಿ. ಇದರಲ್ಲಿ ಜಾನುರಜ್ಜು(hamstrings) ಗಳ ಎಳೆತ “ಪರಿವೃತ್ತಕೋನಾಸನ”ದಲ್ಲಿರುವಷ್ಟು ಇಲ್ಲವಾದರೂ, ಕಿಬ್ಬೊಟ್ಟೆಯೊಳಗಣ ಅಂಗಗಳ ಇದರಿಂದ ಹೆಚ್ಚು ಸಂಕುಚಿತವಾಗಿ, ಜೀರ್ಣಶಕ್ತಿ ಹೆಚ್ಚುತ್ತದೆ. ಅಲ್ಲದೆ ಕಿಬ್ಬೊಟ್ಟೆ ಅಂಗಗಳ ಮತ್ತು ಬೆನ್ನು ದಂಡಿಯ ಸುತ್ತಲೂ ರಕ್ತಪರಿಚಲನೆ ಚೆನ್ನಾಗಿ ನಡೆದು, ಈ ಮೂಲಕ ಅವಕ್ಕೆ ತಾರುಣ್ಯವನ್ನು ಕಲ್ಪಿಸುತ್ತದೆ. ದೊಡ್ಡ ಕರುಳಿನ ಕೆಳಭಾಗ ಎಂದರೆ ಮಲಕೋಶದಲ್ಲಿ ಶೇಖರವಾದ ನಿಷ್ಪ್ರಯೋಜಕ ವಸ್ತುಗಳನ್ನು ಸರಾಗವಾಗಿ ಹೊರದೂಡಲು ಈ ಆಸನವು ತುಂಬಾ ಸಹಕಾರಿಯಾಗಿದೆ.