ಹೊಸದಿಲ್ಲಿ: ಸಂಸತ್ ನ ಚಳಿಗಾಲದ ಅಧಿವೇಶನ ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ.
ನ.25ರಿಂದ ಶುರುವಾಗಿದ್ದ ಅಧಿವೇಶನದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಚರ್ಚೆ ನಡೆದಿಲ್ಲ. ಅದಾನಿ ಗ್ರೂಪ್ ವಿರುದ್ಧ ಲಂಚದ ಆರೋಪ, ಮಣಿಪುರ, ಸಂಭಲ್ ಹಿಂಸಾಚಾರ, ಜಾರ್ಜ್ ಸೊರೊಸ್ ಸೇರಿ ಹಲವು ವಿಚಾರಗಳಿಗೆ ಸಂಬಂಧಿಸಿ ಕೋಲಾಹಲ ಉಂಟಾದ ಕಾರಣ ಈ ಬಾರಿ ಸದನದಲ್ಲಿ ಕನಿಷ್ಠ ಉತ್ಪಾದಕತೆ ದಾಖಲಾಗಿದೆ.
26 ದಿನಗಳ ಅಧಿವೇಶನದಲ್ಲಿ “ಒಂದು ದೇಶ, ಒಂದು ಚುನಾವಣೆ’ ಮಸೂದೆ ಸೇರಿ 7 ಮಸೂದೆಗಳಿಗೆ ಒಪ್ಪಿಗೆ ಸಿಕ್ಕಿದೆ. ಲೋಕಸಭೆಯಲ್ಲಿ ಈ ಬಾರಿ ಶೇ.58.87ರಷ್ಟು ಉತ್ಪಾದಕತೆ ಕಂಡು ಬಂದಿದೆ, ರಾಜ್ಯಸಭೆಯಲ್ಲಿ ಶೇ.40 ಉತ್ಪಾದಕತೆ ಸಾಧಿಸಲಾಗಿದೆ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ 26 ದಿನಗಳ ಅವಧಿಯಲ್ಲಿ 43 ಗಂಟೆ 27 ನಿಮಿಷಗಳ ಕಾಲ ಕಲಾಪ ನಡೆಸಲಾಗಿದೆ ಎಂದು ಸಭಾಪತಿ ಜಗದೀಪ್ ಧನ್ ಕರ್ ತಿಳಿಸಿದ್ದಾರೆ. 72 ವರ್ಷಗಳಲ್ಲಿಯೇ ಮೊದಲ ಬಾರಿಗೆ ವಿಪಕ್ಷಗಳು ರಾಜ್ಯಸಭೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್ ನೀಡಿದ್ದವು. ಅಂತಿಮವಾಗಿ ಅದು ತಿರಸ್ಕೃತಗೊಂಡಿತು.