ನವದೆಹಲಿ: ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ ಪುನರಾರಂಭವಾಗಲಿದೆ. ಎಪಿಕ್ ಸಂಖ್ಯೆ, ಮತದಾನ ಪಟ್ಟಿ ಅಕ್ರಮ, ಮಣಿಪುರದಲ್ಲಿ ಮತ್ತೆ ಭುಗೆಲೆದ್ದಿರುವ ಹಿಂಸಾಚಾರ ಹಾಗೂ ಟ್ರಂಪ್ ಆಡಳಿತವನ್ನು ಭಾರತ ನಿಭಾಯಿಸುವ ಕುರಿತಂತೆ ಹಲವು ವಿಷಯಗಳನ್ನು ಚರ್ಚಿಸಿ ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ವಿಪಕ್ಷಗಳು ಸಿದ್ಧತೆ ನಡೆಸಿವೆ.
ಅನುದಾನದ ಬೇಡಿಕೆ, ಮಣಿಪುರ ಬಜೆಟ್ಗೆ ಅನುಮೋದನೆ, ಬಜೆಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು, ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಘೋಷಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನ ಅನುಮೋದನೆ ಕೋರಿ ನಿರ್ಣಯ ಮಂಡಿಸುವ ನಿರೀಕ್ಷೆ ಇದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಣಿಪುರದ ಬಜೆಟ್ ಮಂಡಿಸುವ ಸಾಧ್ಯತೆ ಇದೆ.
ಇನ್ನು ವಿಪಕ್ಷಗಳು ನಕಲಿ ಮತದಾರರ ಗುರುತಿನ ಚೀಟಿ (ಎಪಿಕ್) ಸಂಖ್ಯೆಗಳ ವಿಚಾರ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಸಜ್ಜಾಗಿವೆ. ತೃಣಮೂಲ ಕಾಂಗ್ರೆಸ್ ಈ ವಿಚಾರವನ್ನು ಪ್ರಸ್ತಾಪಿಸಲು ಸಜ್ಜಾಗಿದೆ. ತೃಣಮೂಲ ಕಾಂಗ್ರೆಸ್ ನಾಯಕರು ಸೋಮವಾರ ಚುನಾವಣಾ ಆಯೋಗದೊಂದಿಗೆ ಮಾತುಕತೆ ನಡೆಸಿ, ಬಜೆಟ್ ಅಧಿವೇಶನದ ಎರಡನೇ ಭಾಗದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ. ಇದಕ್ಕಾಗಿ ಟಿಎಂಸಿ, ಕಾಂಗ್ರೆಸ್, ಡಿಎಂಕೆ, ಶಿವಸೇನೆ-ಯುಬಿಟಿ ಸೇರಿದಂತೆ ಇತರೆ ವಿಪಕ್ಷಗಳನ್ನು ಒಟ್ಟುಗೂಡಿಸಿದೆ.
ಸರ್ಕಾರಕ್ಕೆ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸುವುದು ಮೊದಲ ಆದ್ಯತೆಯಾಗಿದೆ. ಈ ಬಗ್ಗೆ ಮಾತನಾಡಿರುವ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು, ವಕ್ಫ್ ತಿದ್ದುಪಡಿ ಮಸೂದೆಯನ್ನು ಆದಷ್ಟು ಬೇಗ ಅಂಗೀಕರಿಸಲು ಸರ್ಕಾರ ಉತ್ಸುಕವಾಗಿದೆ ಎಂದಿದ್ದಾರೆ.
ಮಣಿಪುರದಲ್ಲಿ ಮತ್ತೆ ಭುಗಿಲೆದ್ದಿರುವ ಹಿಂಸಾಚಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕದ ಬೆದರಿಕೆ, ಸಂಸದೀಯ ಕ್ಷೇತ್ರಗಳ ಗಡಿ ನಿರ್ಣಯ ವಿಚಾರಗಳ ಕುರಿತಾಗಿ ಅಧಿವೇಶನದಲ್ಲಿ ವಿಪಕ್ಷಗಳು ಧ್ವನಿ ಎತ್ತುವ ನಿರೀಕ್ಷೆ ಇದೆ.
ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 31ರಿಂದ ಫೆಬ್ರವರಿ 13ರವರೆಗೆ ನಡೆದಿತ್ತು. ಎರಡನೇ ಭಾಗ ಇಂದಿನಿಂದ, ಮಾರ್ಚ್ 10 ರಂದು ಪ್ರಾರಂಭವಾಗಿ ಏಪ್ರಿಲ್ 4ರವರೆಗೆ ನಡೆಯಲಿದೆ.














