ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿ ಆಗಿರುವ ಪವಿತ್ರಾ ಗೌಡ ಸಹ ಜಾಮೀನಿಗೆ ಯತ್ನಿಸುತ್ತಲೇ ಇದ್ದಾರೆ. ಈ ಹಿಂದೆ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿ ವಜಾಗೊಂಡಿತ್ತು. ಮತ್ತೆ ಹೈಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಇಂದು (ನವೆಂಬರ್ 07) ಪವಿತ್ರಾ ಗೌಡ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆದಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 21ಕ್ಕೆ ಮುಂದೂಡಿಕೆ ಮಾಡಲಾಗಿದೆ. ಪವಿತ್ರಾರ ಜಾಮೀನು ಅರ್ಜಿಗೆ ಸಲ್ಲಿಸಿದಂತೆ ಹೆಚ್ಚಿನ ವಾದ-ವಿವಾದ ಇಂದು ನಡೆದ ಬಗ್ಗೆ ವರದಿಯಾಗಿಲ್ಲ.
ಪ್ರಕರಣದ ಎರಡನೇ ಆರೋಪಿ ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರಾಗಿರುವ ಕಾರಣ ಅದೇ ಕಾರಣವನ್ನು ಇಟ್ಟುಕೊಂಡು ಪವಿತ್ರಾ ಸಹ ಜಾಮೀನಿಗೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಂದು ಪವಿತ್ರಾಗೆ ನಿರಾಶೆಯಾಗಿದೆ. ಅವರ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಲಾಗಿದೆ. ಪವಿತ್ರಾ ಗೌಡ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11 ರಂದು ಪವಿತ್ರಾ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ. ರೇಣುಕಾ ಸ್ವಾಮಿ, ಪವಿತ್ರಾ ಗೌಡಗೆ ಕೆಟ್ಟದಾಗಿ ಸಂದೇಶ ಕಳಿಸಿದ್ದನೆಂಬ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಣ ಮಾಡಿ ಕರೆತಂದು ಇಲ್ಲಿ ಹಲ್ಲೆ ಮಾಡಿ ಕೊಲ್ಲಲಾಗಿದೆ ಎಂಬ ಆರೋಪವಿದೆ.