ಮನೆ ರಾಜಕೀಯ ನಾಗಮಂಗಲದಲ್ಲಿ ಶಾಂತಿ ನೆಲೆಸುತ್ತದೆ;ಮತ್ತೆ ಯಾರನ್ನೂ ಬಂಧಿಸಬೇಡಿ: ಪೊಲೀಸರಿಗೆ ಕೇಂದ್ರ ಸಚಿವ HD ಕುಮಾರಸ್ವಾಮಿ ನಿರ್ದೇಶನ

ನಾಗಮಂಗಲದಲ್ಲಿ ಶಾಂತಿ ನೆಲೆಸುತ್ತದೆ;ಮತ್ತೆ ಯಾರನ್ನೂ ಬಂಧಿಸಬೇಡಿ: ಪೊಲೀಸರಿಗೆ ಕೇಂದ್ರ ಸಚಿವ HD ಕುಮಾರಸ್ವಾಮಿ ನಿರ್ದೇಶನ

0

ನಾಗಮಂಗಲ: ಗಲಭೆಪೀಡಿತ ನಾಗಮಂಗಲದಲ್ಲಿ ಶಾಂತಿ ನೆಲೆಸುತ್ತದೆ. ಸಹಜ ವಾತಾವರಣ ಮರು ಸ್ಥಾಪನೆ ಆಗುತ್ತಿದೆ. ಹೀಗಾಗಿ ಯಾರನ್ನೂ ಬಂಧಿಸುವ ಕೆಲಸ ಮಾಡಬಾರದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

Join Our Whatsapp Group


ಗುರುವಾರ ಸಂಜೆ ನಾಗಮಂಗಲದ ಬದಿರಿಕೊಪ್ಪಲುಗೆ ಭೇಟಿ ನೀಡಿದ ಸಚಿವರು; ಗಣೇಶ ಮೂರ್ತಿ ಗಲಾಟೆ ಹಿನ್ನೆಯಲ್ಲಿ ತಮ್ಮ ಮಕ್ಕಳ ಬಗ್ಗೆ ಆತಂಕಗೊಂಡಿರುವ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಅವರೊಂದಿಗೆ ಸ್ಥಳದಿಂದಲೇ ದೂರವಾಣಿಯಲ್ಲಿ ಮಾತನಾಡಿದ ಸಚಿವರು; ಪಟ್ಟಣದಲ್ಲಿ ಮೊದಲಿನ ವಾತಾವರಣವೇ ನೆಲೆಸಿದೆ. ಶಾಂತಿ ಸ್ಥಾಪನೆ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಯಾರನ್ನಾದರೂ ಬಂಧಿಸುವ ಕೆಲಸ ಆದರೆ ಮತ್ತೆ ಅಶಾಂತಿ ಉಂಟಾಗುವ ಅಪಾಯವಿದೆ. ಆದ್ದರಿಂದ ಸೂಕ್ಷ್ಮವಾಗಿ ವರ್ತಿಸಿ ಹಾಗೂ ಯಾರನ್ನೂ ಬಂಧಿಸಬೇಡಿ ಎಂದು ಸಚಿವರು ಸೂಚಿಸಿದರು.
ಅಲ್ಲದೆ; ಯಾವುದೇ ತಪ್ಪು ಮಾಡದೇ ಜೈಲು ಪಾಲಾಗಿರುವ ಅಮಾಯಕರನ್ನು ಬಿಡುಗಡೆ ಮಾಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಅಧೈರ್ಯಪಡಬೇಡಿ. ನಿಮ್ಮ ಜೊತೆ ನಾವಿದ್ದೇವೆ ಎಂದು ಕುಮಾರಸ್ವಾಮಿ ಅವರು ಭರವಸೆ ನೀಡಿದರು.
ಎಲ್ಲರೂ ಶಾಂತಿಯಿಂದ ವರ್ತಿಸಬೇಕು. ವೈಷಮ್ಯ ಯಾರಿಗೂ ಒಳ್ಳೆಯದಲ್ಲ. ಜೈಲಿನ ಮುಂದೆ ಈ ಗ್ರಾಮದ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿವುದನ್ನು ಮಾಧ್ಯಮಗಳಲ್ಲಿ ಗಮನಿಸಿದೆ. ಅದಕ್ಕೆ ಮತ್ತೆ ಇಲ್ಲಿಗೆ ಬಂದಿದ್ದೇನೆ. ಅಲ್ಲದೆ; ನಿಂದಾ ತಂದೆ ತಾಯಿಗೆ ಆರ್ಥಿಕ ಸಹಾಯ ಮಾಡಲು ಬಂದಿದ್ದೇನೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವರು ಸುಮಾರು ಹದಿನೇಳಕ್ಕೂ ಹೆಚ್ಚು ಗ್ರಾಮಸ್ಥರಿಗೆ ಹಣಕಾಸು ನೆರವು ನೀಡಿದರು.
ಗುಪ್ತದಳ ವೈಫಲ್ಯ: ಎಫ್ಐಆರ್ ನೋಡಿದರೆ ನಗು ಬರುತ್ತದೆ
ಪ್ರತಿಪಕ್ಷ ನಾಯಕರಾದ ಆರ್.ಅಶೋಕ್ ಮತ್ತು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಆ ಎಫ್ಐಆರ್ ನೋಡಿದರೆ ಗೊತ್ತಾಗುತ್ತದೆ ಗುಪ್ತದಳದ ವೈಫಲ್ಯ ಆಗಿದೆ ಎಂದು. ಗಲಭೆ ಮಾಡಲು ಪೋಸ್ಟ್ ಮಾಡಿದ್ದಾರೆ ಅಂತಾರೆ,
ಇವರ ಎಫ್‌ಐಆರ್ ನೋಡಿದರೆ ನಗು ಬರುತ್ತದೆ. ಗೃಹ ಸಚಿವರು ಎಚ್ಚರಿಕೆ ವಹಿಸಿದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ. ನನಗೆ ರಾಜಕೀಯಕ್ಕಿಂತ ಜನರ ನೆಮ್ಮದಿ‌ ಮುಖ್ಯ. ಮುಗ್ಧ ಜನರನ್ನು ಪೊಲೀಸರು ಬಂಧಿಸುವುದು ಬೇಡ. ಊರು ಬಿಟ್ಟವರಿಗೆ ತೊಂದರೆ ಕೊಡಬೇಡಿ. ಈ ಘಟನೆಯನ್ನು ರಾಜಕೀಯವಾಗಿ ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು. ನಾನು ಅನುಕಂಪ ಗಿಟ್ಟಿಸಿಕೊಳ್ಳೋಕೆ ಬಂದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು ಸಚಿವರು.
ನೊಂದವರಿಗೆ ಆರ್ಥಿಕ ಸಹಾಯ ಮಾಡಬೇಕೆಂದು ಬಂದಿದ್ದೇನೆ. ಇದರ ಬಗ್ಗೆ ಕೆಲವರು ಕೇವಲವಾಗಿ ಮಾತಾಡುತ್ತಿದ್ದಾರೆ. ನಾನು 20, 30 ವರ್ಷಗಳಿಂದ ಕಷ್ಟದಲ್ಲಿ ಇರುವವರಿಗೆ ನೆರವಾಗುತ್ತಾ ಬಂದಿದ್ದೇನೆ. ನೀವು ಬೇಕಿದ್ದರೆ ಸಹಾಯ ಮಾಡಿ. ದ್ವೇಷ ರಾಜಕೀಯ ಮಾಡೋದು ಬೇಡಾ. ಜೈಲಿಗೆ ಹೋಗಿರುವವರನ್ನು ಕಾನೂನಿನ ವ್ಯಾಪ್ತಿಯಲ್ಲಿ ಜಾಮೀನು ಕೊಡಿಸೋಕು ಮುಂದಾಗುತ್ತೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಚಲುವರಾಯಸ್ವಾಮಿಗೆ ತಿರುಗೇಟು
ಸಂಸದರ ಕೆಲಸ ಏನು? ಎಂದು ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಸಂಸದರು ಆರಾಮವಾಗಿ ದೆಹಲಿಯಲ್ಲಿ‌ ಇರಬೇಕಾ? ನಾನು ಈ ಕ್ಷೇತ್ರದ ಸಂಸದ. ಜನರು ಕಷ್ಟದಲ್ಲಿ ಇದ್ದಾಗ ನಾನು ಬರಲೇಬೇಕು. ನಾನು ಮಂಡ್ಯದ ಸಂಸದ. ಸಚಿವನೂ ಹೌದು. ಮಂಡ್ಯದಲ್ಲಿ ಮಾತ್ರ ಪ್ರವಾಸ ಮಾಡಿಲ್ಲ, ಇಡೀ ದೇಶವನ್ನೇ ಸುತ್ತುತ್ತಿದ್ದೇನೆ ಎಂದು ತಿರುಗೇಟು ಕೊಟ್ಟರು.
ನಾನು ರಾಜಕೀಯ ಮಾಡಲು ಬಂದಿಲ್ಲ. ನಾನು ಯಾವ ಕುಮ್ಮಕ್ಕು ಕೊಡಲು ಬಂದಿಲ್ಲ. ಗಲಾಟೆಗೆ ಕುಮ್ಮಕ್ಕು ಕೊಟ್ಟಿದ್ದು ಯಾರು? ಜೆಡಿಎಸ್ ನವರು ಬೆಂಕಿ‌ ಹಚ್ಚಿ ಎಂದು ಹೇಳಿದರಾ? ಪೊಲೀಸರನ್ನು ಯಾರು ಕಳಿಸಿದ್ದು? ಪೊಲೀಸರು ಇದ್ದಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ನಾನು ಎರಡು ಸಮುದಾಯದ ಜನರಿಗೆ ಆರ್ಥಿಕ ಪರಿಹಾರ ನೀಡಿದ್ದೇನೆ. ನಾನು ಬೆಂಕಿ ಹಚ್ಚಲು‌ ಬಂದಿಲ್ಲ, ರಾಜಕೀಯ ಮಾಡಲು ಬಂದಿಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಮಾಜಿ ಸಚಿವ ಸಾ.ರಾ.ಮಹೇಶ್, ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ, ಶಾಸಕ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಮಂಜೆಗೌಡ ಮೊದಲಾದವರು ಸಚಿವರ ಜತೆಯಲ್ಲಿ ಇದ್ದರು.