ಬೆಂಗಳೂರು: ಬಿಎಂಟಿಸಿ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಿರಿಸಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 438 ಪುರುಷರ ಮೇಲೆ ತನಿಖಾ ತಂಡ ದಂಡ ವಿಧಿಸಿದ್ದು, ಒಟ್ಟಾರೆ 43,800 ರೂ. ಅನ್ನು ವಸೂಲಿ ಮಾಡಿದೆ.
ಜತೆಗೆ ಬಿಎಂಟಿಸಿ ಸಂಸ್ಥೆಯ ನಿರ್ವಾಹಕರ ವಿರುದ್ಧ 1,062 ಪ್ರಕರಣಗಳನ್ನು ದಾಖಲಿಸಿದೆ.
ಸಂಸ್ಥೆಯ ಆದಾಯದ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ನವೆಂಬರ್ ನಲ್ಲಿ ನಗರಾದ್ಯಂತ ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸಿರುವ ಬಿಎಂಟಿಸಿ ತನಿಖಾ ತಂಡ ಒಟ್ಟು 16,421 ಟ್ರಿಪ್ ಗಳನ್ನು ತಪಾಸಣೆ ನಡೆಸಿ 3,329 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿದೆ. ಹಾಗೆಯೇ ಅವರಿಂದ ಒಟ್ಟು 6,68,610 ರೂ. ಅನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದೆ ಎಂದು ಬಿಎಂಟಿಸಿ ಸಾರ್ವಜನಿಕರ ಸಂಪರ್ಕ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
898 ಸಾಮಾನ್ಯ ಪ್ರಕರಣಗಳು, 115 ಕೆಂಪು ಚುಕ್ಕೆ ಪ್ರಕರಣಗಳು, 35 ಗಂಭೀರ ಕೆಂಪುಚುಕ್ಕೆ ಪ್ರಕರಣಗಳು ಹಾಗೂ 14 ವಿಶೇಷ ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳಿಂದ 7,12,410 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.














