ಮನೆ ಆರೋಗ್ಯ ಮೈಸೂರಿನಲ್ಲಿ ಬೋಸ್ಟರ್ ಡೋಸ್ ಪಡೆಯಲು ಜನರ ನಿರಾಸಕ್ತಿ

ಮೈಸೂರಿನಲ್ಲಿ ಬೋಸ್ಟರ್ ಡೋಸ್ ಪಡೆಯಲು ಜನರ ನಿರಾಸಕ್ತಿ

0

ಮೈಸೂರು(Mysuru): ಕೋವಿಡ್ 19 ನಾಲ್ಕನೇ ಅಲೆ ಆತಂಕದ ನಡುವೆಯೇ ಮೈಸೂರಿನಲ್ಲಿ ಹಿರಿಯ ನಾಗರಿಕರು ಬೂಸ್ಟರ್ ಡೋಸ್ ಕುರಿತು ನಿರಾಸಕ್ತಿ ಹೊಂದಿದ್ದಾರೆ. ಶೇ.85ರಷ್ಟು ಜನ ಬೂಸ್ಟರ್ ಡೋಸ್ ಹಾಕಿಸಿಕೊಂಡಿಲ್ಲ.

ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಯಂತ್ ಈ ಕುರಿತು ಮಾತನಾಡಿ, ಪ್ರಸ್ತುತ ನಾಲ್ಕನೇ ಅಲೆಯ ಮುನ್ಸೂಚನೆ ಇದ್ದು, ಸಮರ್ಪಕವಾಗಿ ಕೊರೋನಾ ನಿರ್ವಹಣೆಗೆ ಬೂಸ್ಟರ್ ಡೋಸ್ ಒಂದೇ ಪರಿಹಾರವಾಗಿದೆ. ಜನರು ತಮ್ಮ ಆರೋಗ್ಯದ ಹಿತ ದೃಷ್ಟಿಯಿಂದ ಸ್ವಯಂಪ್ರೇತವಾಗಿ ಬೂಸ್ಟರ್ ಡೋಸ್ ಪಡೆಯಲು ಮುಂದಾಗಬೇಕು ಎಂದು ತಿಳಿಸಿದರು.

ರೋಗದ ಗಂಭೀರತೆ ಕಡಿಮೆಯಾಗಿರುವುದರಿಂದ ಜನರು ಜ್ವರ, ನೆಗಡಿ, ತಲೆ ನೋವು, ಶೀತದಂತೆ ಇದೂ ಒಂದು ಕಾಯಿಲೆ ಎಂದು ಭಾವಿಸುತ್ತಿದ್ದಾರೆ. ಅದು ಅಲ್ಲದೇ ಮೈಸೂರಿನ ಹಿರಿಯ ನಾಗರಿಕರು ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿರುವುದಾಗಿ ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯ 33 ಲಕ್ಷ ಜನರಲ್ಲಿ 20 ಲಕ್ಷ ಗ್ರಾಮಾಂತರ, 13 ಲಕ್ಷ ನಗರವಾಸಿಗಳಾಗಿದ್ದಾರೆ. ನಗರ ವ್ಯಾಪ್ತಿಯಲ್ಲಿ 60 ವರ್ಷ ಮೇಲ್ಪಟ್ಟ 3 ಲಕ್ಷದ 95 ಸಾವಿರ ಹಿರಿಯ ನಾಗರಿಕರಿಗೆ ವ್ಯಾಕ್ಸಿನ್ ನೀಡುವ ಗುರಿ ಹೊಂದಲಾಗಿದೆ. ಇವರಲ್ಲಿ ಶೇ. 18 (75 ಸಾವಿರದ 800 ಜನ) ರಷ್ಟು ಮಂದಿ ಮಾತ್ರ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಶೇ.12 ರಷ್ಟು ಮಂದಿ ಮಾತ್ರವೇ ಸರಕಾರದ ಈ ಅಭಿಯಾನಕ್ಕೆ ಸ್ಪಂದಿಸಿ ಡೋಸೇಜ್ ಪಡೆದಿದ್ದಾರೆ.

ಮೈಸೂರು ನಗರದ 21 ಪಿಎಚ್ ಸಿಗಳಲ್ಲಿ 3 ಲಕ್ಷ ವ್ಯಾಕ್ಸಿನ್ ದಾಸ್ತಾನು ಇದೆ. ಕೊರೊನಾ ತೀವ್ರತೆ ಕಡಿಮೆಯಾಗಿರುವುದರಿಂದ ವ್ಯಾಕ್ಸಿನ್ ಪಡೆದುಕೊಳ್ಳುವಲ್ಲಿ ಜನರ ನಿರಾಸಕ್ತಿ ಕಂಡು ಬರುತ್ತಿದೆ. ಯಾವುದಾದರೂ ಸಂಘಟನೆಗಳು ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸೇಜ್ ಕೊಡಿಸಲು ಮುಂದೆ ಬಂದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಾಹನದಲ್ಲಿ ಸಿಬ್ಬಂದಿ ಹಾಗೂ ವ್ಯಾಕ್ಸಿನ್ ಕಳುಹಿಸಿಕೊಡಲಾಗುವುದು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು,” ಎಂದು ಲಸಿಕೆ ನೋಡೆಲ್ ಅಧಿಕಾರಿ ಡಾ.ಜಯಂತ್ ಮನವಿ ಮಾಡಿದರು.