ಬೆಂಗಳೂರು : ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಬೆಳ್ಳಂಬೆಳಿಗ್ಗೆ ‘ಆಪರೇಷನ್ ಸಿಂಧೂರ್’ ಎಂಬ ಹೆಸರಿನಲ್ಲಿ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಯಶಸ್ವಿಯಾಗಿ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ 9ಕ್ಕೂ ಹೆಚ್ಚು ಉಗ್ರರ ತಾಣಗಳು ಧ್ವಂಸವಾಗಿದ್ದು, ಸುಮಾರು 80ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಯಶಸ್ವಿ ಕಾರ್ಯಾಚರಣೆಗೆ ದೇಶಾದ್ಯಂತ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಈ ಹೊತ್ತಲ್ಲೇ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಮಾಡಲಾದ ಒಂದು ಟ್ವೀಟ್ ಭಾರೀ ವಿವಾದಕ್ಕೆ ಕಾರಣವಾಯಿತು. ಭಾರತೀಯ ಸೇನೆಯ ದಾಳಿಯ ಸಂದರ್ಭದಲ್ಲಿ, ಕಾಂಗ್ರೆಸ್ ತನ್ನ ಅಧಿಕೃತ ಟ್ವೀಟ್‌ನಲ್ಲಿ – “ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ” ಎಂದು ಪೋಸ್ಟ್ ಮಾಡಿತ್ತು. ಈ ಶಾಂತಿ ಸಂದೇಶವು, ಭಯೋತ್ಪಾದಕರಿಗೆ ತಕ್ಕ ಪ್ರತೀಕಾರ ನೀಡಿದ ಸೇನೆಯ ಕ್ರಮದ ಸಂದರ್ಭದಲ್ಲಿ ಅನಾವಶ್ಯಕ ಮತ್ತು ಸಮಯೋಚಿತವಲ್ಲದ ಎಂಬ ಅನುಭವವನ್ನು ಜನರಲ್ಲಿ ಹುಟ್ಟಿಸಿತು.
ಟ್ವೀಟ್ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಹಲವರು ಇದನ್ನು ದೇಶಪ್ರೇಮದ ವಿರುದ್ಧವಾದ ನಡೆ ಎಂದು ಟೀಕಿಸಿದರು. ಈ ಬೆನ್ನಲ್ಲೇ, ಕಾಂಗ್ರೆಸ್ ತನ್ನ ಆ ಟ್ವೀಟ್ ಅನ್ನು ತಕ್ಷಣವೇ ಡಿಲೀಟ್ ಮಾಡಿತು. ಪರಿಣಾಮವಾಗಿ, ತನ್ನ ನಿಲುವಿಗೆ ಸ್ಪಷ್ಟತೆ ನೀಡುವ ದೃಷ್ಟಿಯಿಂದ ಮತ್ತೊಂದು ಟ್ವೀಟ್ ಮಾಡಲಾಗಿದ್ದು, ಭಾರತೀಯ ಸೇನೆಯ ಶೌರ್ಯವನ್ನು ಶ್ಲಾಘಿಸಿದೆ.
ಹೊಸ ಟ್ವೀಟ್‌ನಲ್ಲಿ, “ಭಾರತೀಯ ವಾಯುಪಡೆಯು ಪಾಕಿಸ್ತಾನದ ಮೇಲೆ ದಾಳಿ ಮಾಡಿ ಪಹಲ್ಗಾಮ್ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಿದೆ. ನಾವು ಸರ್ಕಾರದೊಂದಿಗೆ ಮತ್ತು ಭದ್ರತಾ ಪಡೆಗಳೊಂದಿಗೆ ನಿಲ್ಲುತ್ತೇವೆ” ಎಂದು ಹೇಳಲಾಗಿದೆ. ಇದರ ಜೊತೆಗೆ, ಭಾರತೀಯ ಸೇನೆಯ ಶಕ್ತಿಯನ್ನು ವಿಶ್ವದ ಅತ್ಯುತ್ತಮ ಎಂದು ಗುರುತಿಸಿ ಗೌರವಿಸಲಾಯಿತು.
ಅದೇ ಸಂದರ್ಭದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿದರು. ಅವರು ಟ್ವೀಟ್ ಮೂಲಕ – “ಪಹಲ್ಗಾಮ್ ಉಗ್ರ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತಿಕಾರ ನೀಡಿದೆ. ನಾವು ಭಾರತ ಸರ್ಕಾರದ ಪರ ನಿಲ್ಲುತ್ತೇವೆ. ಸೇನೆಗೆ ಸಂಪೂರ್ಣ ಬೆಂಬಲವಿದೆ” ಎಂದು ಹೇಳಿದ್ದಾರೆ.














