ಉಡುಪಿ : ನರೇಂದ್ರ ಮೋದಿ ಅಭಿವೃದ್ಧಿ, ನಿತೇಶ್ ಕುಮಾರ್ ಆಡಳಿತವನ್ನು ಜನ ಮೆಚ್ಚಿ ಬಿಹಾರದಲ್ಲಿ ಮತ್ತೆ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ಕುರಿತು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನಿಮೋ’ ಆಡಳಿತವನ್ನು ಬಿಹಾರದ ಜನ ಒಪ್ಪಿದ್ದಾರೆ. ಇವಿಎಂ ಸರಿಯಿಲ್ಲ, ಮತಪಟ್ಟಿ ಸರಿ ಇಲ್ಲ ಎನ್ನುತ್ತಿದ್ದ ಕಾಂಗ್ರೆಸ್ ಈಗ ಮತದಾರರೇ ಸರಿ ಇಲ್ಲ ಎನ್ನುವ ಮನಸ್ಥಿತಿಗೂ ಬರಬಹುದು ಎಂದು ಲೇವಡಿ ಮಾಡಿದ್ದಾರೆ.
ಮಹಾಘಟಬಂಧನ್ ಗೆದ್ದು ದೇಶದಲ್ಲಿ ಏನೋ ಮಾಡಲು ಹುನ್ನಾರ ನಡೆಸಿದ್ದರು. ಎಡಪಂಥೀಯರ ಕೆಟ್ಟ ತಂತ್ರಗಳು ಕಾರ್ಯರೂಪಕ್ಕೆ ಬರಲಿಲ್ಲ. ಬಿಹಾರ ಫಲಿತಾಂಶ ಕರ್ನಾಟಕದ ನವಂಬರ್ ಕ್ರಾಂತಿಯ ಮೇಲೆ ಯಾವ ಪರಿಣಾಮ ಬೀಳುತ್ತದೆ ಎಂಬ ಕುತೂಹಲವಿದೆ ಎಂದರು.
ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದ ಪರಿಸ್ಥಿತಿಯನ್ನು ಕಾಂಗ್ರೆಸ್ ನಿರ್ಮಾಣ ಮಾಡಿದೆ. ನವೆಂಬರ್ ಕ್ರಾಂತಿ ಅಂತ ಹೇಳಿದ್ದು ಕಾಂಗ್ರೆಸ್. ಕಾಂಗ್ರೆಸ್‌ನೊಳಗೆ ಬೇಗುದಿ ಶುರುವಾಗಿದೆ. ಕಾಂಗ್ರೆಸ್ ಇಬ್ಭಾಗ ಆಗುತ್ತಾ? ಒಂದು ಗುಂಪು ಒಡೆದು ಎಲ್ಲಿಗೆ ಹೋಗುತ್ತದೆ ನೋಡಬೇಕು. ಹೈಕಮಾಂಡ್ ಯಾರ ಪರವಾಗಿ ನಿಲ್ಲುತ್ತದೆ? ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುತ್ತಾರಾ? ಡಿಕೆಶಿ ಅಧಿಕಾರಕ್ಕೆ ಬರುತ್ತಾರ ಈ ಎಲ್ಲ ಚರ್ಚೆಗಳು ಕಾಂಗ್ರೆಸ್‌ನೊಳಗೆ ನಡೆಯುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ಸನ್ನು ಇಡೀ ದೇಶದ ಜನ ತಿರಸ್ಕಾರ ಮಾಡಿದ್ದಾರೆ. ಎರಡು ಅಂಕೆಯ ಸಂಖ್ಯೆಯನ್ನು ತಲುಪಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ. ಮುಸಲ್ಮಾನರ ತುಷ್ಟೀಕರಣ ಮಾಡಿದವರು ಮಣ್ಣುಮುಕ್ಕಿದ್ದಾರೆ. ಯುದ್ಧ, ಆಪರೇಷನ್ ಸಿಂಧೂರದ ಅವಹೇಳನದ ಮಾನಸಿಕತೆ ಸೋತಿದೆ. ಆರ್‌ಎಸ್‌ಎಸ್ ಅನ್ನು ದ್ವೇಷ ಮಾಡಿದ್ದು ಇಡೀ ದೇಶದ ಜನ ಗಮನಿಸಿದ್ದಾರೆ. ದೇಶಭಕ್ತಿ ಮತ್ತು ಸೇವಾ ಚಟುವಟಿಕೆಯನ್ನು ಪ್ರಶ್ನಿಸಿ ಸೋಲಾಗಿದೆ ಎಂದು ಟೀಕಿಸಿದರು.















