ಮಡಿಕೇರಿ(Madikeri): ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆವರೆಗೂ ಬೀಸಿದ ಗಾಳಿಗೆ ಜನರು ತತ್ತರಿಸಿದ್ದು, ಅನೇಕ ರಸ್ತೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಸಂಪರ್ಕ ಕಡಿತಗೊಂಡಿದೆ.
ವಿದ್ಯಾರ್ಥಿಗಳು ಗ್ರಾಮೀಣ ಭಾಗಗಳಿಂದ ಶಾಲೆ, ಕಾಲೇಜುಗಳಿಗಾಗಿ ಪಟ್ಟಣಕ್ಕೆ ಬರಲು ಪರದಾಡುತ್ತಿದ್ದಾರೆ. ಭಾಗಮಂಡಲ- ತಲಕಾವೇರಿ ರಸ್ತೆ, ಮಡಿಕೇರಿ- ಸೋಮವಾರಪೇಟೆ ರಸ್ತೆ, ಮಡಿಕೇರಿ ನಗರದ ಗಾಳಿಬೀಡು ಜಂಕ್ಷನ್ ಹಾಗೂ ಶನಿವಾರಸಂತೆ ಹೋಬಳಿಯ ಬಹುತೇಕ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಮರಗಳು ಉರುಳಿ ಬಿದ್ದಿದ್ದು, ವಾಹನ ಸಂಚಾರ ವ್ಯತ್ಯಯಗೊಂಡಿದೆ.
ವಿದ್ಯುತ್ ಕಂಬಗಳೂ ಧರೆಗುರುಳಿದ್ದು, ಮಡಿಕೇರಿ ನಗರ ಸೇರಿದಂತೆ ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಮಾದಾಪುರದ ಚೆನ್ನಬಸವೇಶ್ವರ ಶಾಲೆಯ ಮೇಲೆ ಮರವೊಂದು ಉರುಳಿ ಬಿದ್ದು, ಶಾಲಾ ಕಟ್ಟಡ ಹಾನಿಯಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಶಿರಂಗಾಲ ಗ್ರಾಮದ ಧರ್ಮರಾಯ ಎಂಬುವವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಧರ್ಮರಾಯ ಗಾಯಗೊಂಡಿದ್ದು, ಮನೆ ಜಖಂಗೊಂಡಿದೆ.
ಗಾಳಿ ಅತಿ ವೇಗವಾಗಿ ಬೀಸಲಿದೆ ಎಂಬ ಮುನ್ನೆಚ್ಚರಿಕೆಯನ್ನು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ನೀಡಿದೆ.