ಮನೆ ಆರೋಗ್ಯ ಶೇ. 10 ರಷ್ಟು ವೈದ್ಯರ ನೇಮಕಾತಿಗೆ ಸರ್ಕಾರದ ಚಿಂತನೆ: ಡಾ.ಕೆ.ಸುಧಾಕರ್

ಶೇ. 10 ರಷ್ಟು ವೈದ್ಯರ ನೇಮಕಾತಿಗೆ ಸರ್ಕಾರದ ಚಿಂತನೆ: ಡಾ.ಕೆ.ಸುಧಾಕರ್

0

ಮೈಸೂರು(Mysuru): ವೈದ್ಯರ ಕೊರತೆ ನೀಗಿಸಲಾಗಿದ್ದು, ಶೇ 10ರಷ್ಟು ತಜ್ಞರ ನೇಮಕಾತಿಗೆ ಸರ್ಕಾರವು ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‍ಲ್ಯಾಬ್‌ ಟೆಕ್ನಿಷಿಯನ್ಸ್, ಫಾರ್ಮಸಿಸ್ಟ್‌ ಹಾಗೂ ‘ಡಿ’ ಗ್ರೂಪ್‌ ಹುದ್ದೆಗಳ ಭರ್ತಿಗೆ ಕ್ರಮವಹಿಸಲಾಗುವುದು. ವೈದ್ಯಕೀಯ ಕಾಲೇಜುಗಳಲ್ಲಿ ತುರ್ತು ಆರೈಕೆ, ಡಯಾಲಿಸಿಸ್‌ ತಾಂತ್ರಿಕ ಕೋರ್ಸ್‌ ಆರಂಭಿಸಲಾಗುವುದು ಎಂದರು.

ಸರ್ಕಾರಿ ವೈದ್ಯಕೀಯ ಕಾಲೇಜುಗಳ ವೈದ್ಯರು ಕರ್ತವ್ಯದ ಅವಧಿಯಲ್ಲಿ ಖಾಸಗಿ ಆಸ್ಪತ್ರೆ– ಕ್ಲಿನಿಕ್‌ಗಳಲ್ಲಿ ಕಾರ್ಯನಿರತರಾಗಿದ್ದರೆ, ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಬಯೊಮೆಟ್ರಿಕ್‌ ಹಾಜರಾತಿ ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.

ನಿಯಮಗಳನ್ನು ಉಲ್ಲಂಘಿಸುತ್ತಿರುವ ವೈದ್ಯರಿಗೆ ಜಿಯೊ ಟ್ಯಾಗ್ ಅಳವಡಿಸುವ ಹಾಗೂ ಕಚೇರಿ ಅವಧಿ ಮುಗಿದ ನಂತರ ಕಾಲೇಜಿನಲ್ಲಿಯೇ ಖಾಸಗಿಯಾಗಿ ಚಿಕಿತ್ಸೆ ನೀಡುವ ಅವಕಾಶವನ್ನು ವೈದ್ಯರಿಗೆ ನೀಡುವ ಚಿಂತನೆಯು ಸರ್ಕಾರದ ಮುಂದಿದೆ ಎಂದು ನೀಡಿದರು.

2030ರೊಳಗೆ ‘ಕ್ಷಯ ಮುಕ್ತ ಭಾರತ ನಿರ್ಮಾಣ ಗುರಿ ಪ್ರಧಾನಿ ಮೋದಿ ಅವರದ್ದಾಗಿದ್ದು, ರಾಜ್ಯದಲ್ಲಿ 2025ರೊಳಗೆ ಕ್ಷಯ ನಿರ್ಮೂಲನೆ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

438 ‘ನಮ್ಮ ಕ್ಲಿನಿಕ್‌’ ಆರಂಭ: ನ.8ರೊಳಗೆ ರಾಜ್ಯದ ಪಾಲಿಕೆ, ನಗರಸಭೆ ವ್ಯಾಪ್ತಿಯ ಕೊಳಗೇರಿಯಲ್ಲಿ 438 ‘ನಮ್ಮ ಕ್ಲಿನಿಕ್‌’ ಆರಂಭಿಸಲು ಕ್ರಮವಹಿಸಲಾಗಿದೆ. ಮುಂದಿನ ವಾರದಲ್ಲಿಯೇ ಚಾಲನೆ ನೀಡಲಾಗುತ್ತಿದೆ. 128 ‘ಮಹಿಳಾ ಸ್ವಾಸ್ಥ್ಯ ಕ್ಲಿನಿಕ್‌’ಗಳನ್ನು ಆರಂಭಿಲಾಗುತ್ತಿದೆ ಎಂದು ಸಚಿವ ಸುಧಾಕರ್‌ ತಿಳಿಸಿದರು.

4.80 ಕೋಟಿ ಆಯುಷ್ಮಾನ್‌ ಭಾರತ್‌ ಕಾರ್ಡ್‌ಗಳನ್ನು ಇದೇ ವರ್ಷದ ಡಿಸೆಂಬರ್ ಒಳಗೆ ವಿತರಿಸಲು ಗುರಿ ಹಾಕಿಕೊಳ್ಳಲಾಗಿದೆ. ಅನೀಮಿಯಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಶಾಲೆಗಳಲ್ಲಿ ಚಿಕಿತ್ಸಾ ಅಭಿಯಾನ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.