ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರಿಪೋ ದರ ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದೆ.
ಹಣದುಬ್ಬರ ಇನ್ನೂ ಅಧಿಕ ಮಟ್ಟದಲ್ಲಿ ಇರುವುದರಿಂದ ಬಡ್ಡಿ ಇಳಿಕೆ ಸದ್ಯಕ್ಕೆ ಬೇಡ ಎಂಬುದು ಮಾನಿಟರಿ ಪಾಲಿಸಿ ಕಮಿಟಿಯ ಹೆಚ್ಚಿನ ಸದಸ್ಯರ ಅಭಿಮತ. ಮೊನ್ನೆಯಿಂದ ನಡೆದ ಎಂಪಿಸಿ ಸಭೆಯಲ್ಲಿ ವಿವಿಧ ಸಂಗತಿಗಳ ಚರ್ಚೆ ನಡೆದಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಮಾತನಾಡುತ್ತಾ, ಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗುತ್ತಿರುವುದನ್ನು ತಿಳಿಸಿದರು. ಎಂಪಿಸಿ ಸಭೆಯಲ್ಲಿ ಆರು ಸದಸ್ಯರಲ್ಲಿ ನಾಲ್ವರು ಬಡ್ಡಿದರ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದರು ಎಂದು ಹೇಳಿದರು.
ಜಿಡಿಪಿ ಉತ್ತಮವಾಗಿ ಬೆಳವಣಿಗೆ ಹೊಂದುತ್ತಿರುವುದರಿಂದ ಈಗ ಹಣದುಬ್ಬರವನ್ನು ಶೇ. 4ಕ್ಕೆ ತರುವ ನಿಟ್ಟಿನಲ್ಲಿ ಗಮನ ಹರಿಸುವುದು ಮುಖ್ಯ. ಹೀಗಾಗಿ, ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದ್ದಾಗಿ ಶಕ್ತಿಕಾಂತ್ ದಾಸ್ ತಿಳಿಸಿದರು. ರಿವರ್ಸ್ ರಿಪೋ ದರವನ್ನೂ ಶೇ. 3.35ರಲ್ಲಿ ಮುಂದುವರಿಸಲಾಗಿದೆ. ಇಲ್ಲಿ ರಿಪೋ ದರ ಎಂದರೆ ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಫಂಡ್ಗೆ ನೀಡಬೇಕಾದ ಬಡ್ಡಿದರವಾಗಿದೆ. ರಿವರ್ಸ್ ರಿಪೋ ಎಂಬುದು ಬ್ಯಾಂಕುಗಳು ಆರ್ಬಿಐನಲ್ಲಿ ಇಡುವ ಠೇವಣಿಗೆ ಸಿಗುವ ಬಡ್ಡಿದರವಾಗಿದೆ.
ಎಂಎಸ್ಎಫ್ ಮತ್ತು ಎಸ್ಡಿಎಫ್ ದರಗಳೂ ಕೂಡ ಕ್ರಮವಾಗಿ ಶೇ. 6.75 ಮತ್ತು ಶೇ. 6.25ರಲ್ಲಿ ಮುಂದುವರಿಯುವುದಾಗಿ ಆರ್ಬಿಐ ಗವರ್ನರ್ ಮಾಹಿತಿ ನೀಡಿದರು. ಹಾಗೆಯೇ, ಹಣದುಬ್ಬರ ನಿಯಂತ್ರಣಕ್ಕೆ ಬಹಳ ಮುಖ್ಯವಾಗಿರುವ ವಿತ್ಡ್ರಾಯಲ್ ಆಫ್ ಅಕಾಮೊಡೇಶನ್ ಎಂಬ ನೀತಿಯನ್ನೂ ಮುಂದುವರಿಸಲು ಎಂಪಿಸಿ ಸಭೆ ನಿರ್ಧರಿಸಿದೆ.
2024-25ರಲ್ಲಿ ಜಿಡಿಪಿ ಬೆಳವಣಿಗೆ ಶೇ. 7.2
ಈ ಬಾರಿಯ ಹಣಕಾಸು ವರ್ಷದಲ್ಲಿ (2024-25) ರಿಯಲ್ ಜಿಡಿಪಿ ದರ ಶೇ. 7.2ರಷ್ಟಿರಬಹುದು ಎಂದು ಆರ್ಬಿಐ ಗವರ್ನರ್ ಹೇಳಿದರು. ಈ ವರ್ಷದ ನಾಲ್ಕು ಕ್ವಾರ್ಟರ್ಗಳಲ್ಲಿ ಮೂರನೇ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 7.3ರಷ್ಟಿರಬಹುದು. ಉಳಿದ ಮೂರು ಕ್ವಾರ್ಟರ್ಗಳಲ್ಲಿ ಶೇ. 7.2ರಷ್ಟು ಬೆಳವಣಿಗೆ ಆಗಬಹುದು ಎಂದು ಎಂಪಿಸಿ ಸಭೆಯಲ್ಲಿ ಅಂದಾಜು ಮಾಡಲಾಗಿದ್ದನ್ನು ಅವರು ತಿಳಿಸಿದರು.