ಬಳ್ಳಾರಿ: ಕರ್ನಾಟಕ ಸರ್ಕಾರವು ಆಡಳಿತದ ಎರಡು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜನಪರ ನೀತಿಯ ಸಾಕ್ಷಿಯಾಗಿ 1 ಲಕ್ಷ ಕುಟುಂಬಗಳಿಗೆ ಶಾಶ್ವತ ಡಿಜಿಟಲ್ ಹಕ್ಕುಪತ್ರಗಳನ್ನು ವಿತರಿಸಲು ತೀರ್ಮಾನಿಸಿದೆ. ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಹಕ್ಕುಪತ್ರಗಳನ್ನು ವಿತರಿಸಲಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಸೋಮವಾರ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಸಚಿವರು, “ಹಾಡಿ, ಹಟ್ಟಿ, ತಾಂಡಾ ಭಾಗಗಳಲ್ಲಿ ಇಂದಿಗೂ ಕಂದಾಯ ಗ್ರಾಮಗಳ ಮಾನ್ಯತೆ ಇಲ್ಲದ ಕಾರಣ, ಅಲ್ಲಿನ ನಿವಾಸಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ಈ ಪ್ರದೇಶಗಳಿಗೆ ಕಾನೂನಿನ ಆಧಾರದ ಮೇಲೆ ಮನೆ ಹಕ್ಕು ನೀಡುವುದು ತೀವ್ರ ಅವಶ್ಯಕ” ಎಂದು ಹೇಳಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ 74 ಹೊಸ ಕಂದಾಯ ಗ್ರಾಮಗಳ ಗುರುತು ಮಾಡಲಾಗಿದ್ದು, ಅವರಲ್ಲಿ 71 ಕ್ಕೆ ಪ್ರಾಥಮಿಕ ಅಧಿಸೂಚನೆ, 51 ಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ ಗ್ರಾಮಗಳಿಗೂ ಜೂನ್ 30 ರೊಳಗಾಗಿ ಅಂತಿಮ ಅಧಿಸೂಚನೆ ನೀಡಲು ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ದಿನಾಂಕದ ನಂತರ ಹೊಸ ಕಂದಾಯ ಘಟಕಗಳ ರಚನೆಗೆ ನಿಷೇಧ ಜಾರಿಯಾಗಲಿದ್ದು, ಈ ವೇಳೆ ವಿನಾಯಿತಿ ಪಡೆಯಲು ಎರಡು ವರ್ಷಗಳು ಬೇಕಾಗಬಹುದು ಎಂಬ ಕಾರಣದಿಂದ ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ.
ಸಚಿವರು, “ಗ್ರಾಮ ಪಂಚಾಯಿತಿಗಳಲ್ಲಿರುವ ದಾಖಲೆ ರಹಿತ ವಸತಿ ಪ್ರದೇಶಗಳಲ್ಲೂ ಶಾಶ್ವತ ಹಕ್ಕು ನೀಡಲು ಕ್ರಮ ಕೈಗೊಳ್ಳಬೇಕು. ಇಂತಹ ಪ್ರದೇಶಗಳಿಗೆ ಸೂಕ್ತ ದಾಖಲೆ ರೂಪಿಸಿ, ಗ್ರಾಮ ರಚನೆಯ ಪ್ರಕ್ರಿಯೆಯಲ್ಲಿ ಸೇರಿಸಬೇಕು. ಗ್ರಹಸ್ಥರು ದಶಕಗಳಿಂದ ವಾಸಿಸುತ್ತಿರುವ ಜಾಗಗಳಿಗೆ ನೆಲೆಮಾನ ಕಲ್ಪಿಸಬೇಕು” ಎಂದು ಸೂಚಿಸಿದರು.
1 ಕಿ.ಮೀ ವ್ಯಾಪ್ತಿಯೊಳಗೆ 10ಕ್ಕೂ ಹೆಚ್ಚು ಮನೆಗಳಿದ್ದರೆ ಉಪ ಗ್ರಾಮ ರಚನೆಗೆ ಅವಕಾಶವಿದೆ. ಇದು ಗ್ರಾಮೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭೂ ಸುರಕ್ಷಾ ಯೋಜನೆ ಕುರಿತು ಮಾತನಾಡಿದ ಸಚಿವರು, “ರಾಜ್ಯದ ಭೂ ಕಂದಾಯ ಇಲಾಖೆಯ ದಾಖಲೆಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಕೆಲಸ ಭೂ ಸುರಕ್ಷಾ ಯೋಜನೆಯ ಉದ್ದೇಶ. ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ 10,000 ಪುಟಗಳನ್ನು ಸ್ಕ್ಯಾನ್‌ಮಾಡಿ ಅಪ್‌ಲೋಡ್ ಮಾಡಬೇಕು” ಎಂದು ತಿಳಿಸಿದ್ದಾರೆ.
ಮೃತರ ಹೆಸರಿನಲ್ಲಿ ಮುಂದುವರೆದ 70 ಸಾವಿರ ಜಮೀನಿನ ದಾಖಲೆಗಳನ್ನೂ ಶೀಘ್ರದಲ್ಲೇ ನವೀಕರಿಸಲಾಗುವುದು. ವಾರಸುದಾರರಿಗೆ ತೊಂದರೆಯಾಗದಂತೆ ಈ ಮಾಹಿತಿಯನ್ನು ಆಧುನಿಕ ಪೌತಿ ಖಾತೆಗಳ ಮೂಲಕ ನಿರ್ವಹಿಸಲು ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಈ ಮಹತ್ವದ ಸಭೆಯಲ್ಲಿ ಸಂಸದ ಈ. ತುಕಾರಾಮ್, ಶಾಸಕಿ ಅನ್ನಪೂರ್ಣ, ಜಿಲ್ಲಾ ಪಂಚಾಯತ್ ಸಿಇಒ ಹ್ಯಾರೀಸ್ ಸುಮೈರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಪಿ. ಪ್ರಮೋದ್, ಐದು ತಾಲ್ಲೂಕುಗಳ ತಹಶೀಲ್ದಾರರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.














