“ವೈಯಕ್ತಿಕ ಹಣಕಾಸಿನ ಹಿತಾಸಕ್ತಿಯು ಸಾರ್ವಜನಿಕ ಹಿತಾಸಕ್ತಿಗೆ ತಲೆಬಾಗಬೇಕಾಗುತ್ತದೆ” ಎಂದು ಈಚೆಗೆ ಸ್ಪಷ್ಟವಾಗಿ ಹೇಳಿರುವ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರವು 11 ಜಿಲ್ಲೆಗಳ ಕೆಲವು ತಾಲ್ಲೂಕುಗಳಲ್ಲಿ ಸೀಮೆಎಣ್ಣೆ ವಿತರಣೆ ನಿರ್ಬಂಧಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಅಖಿಲ ಕರ್ನಾಟಕ ಸೀಮೆಎಣ್ಣೆ ಸಗಟು ಡೀಲರ್ಗಳ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ಸೀಮೆಎಣ್ಣೆ ಹಂಚಿಕೆಗೆ ನಿರ್ಬಂಧಿಸಿರುವುದನ್ನು ಪ್ರಸ್ತಾಪಿಸಿರುವುದರಿಂದ ತಮ್ಮ ಡೀಲರ್ಶಿಪ್ ತೂಗುಯ್ಯಾಲೆಯಲ್ಲಿದೆ ಎಂದು ಡೀಲರ್ಗಳು ತಾರತಮ್ಯದ ಕಾರಣ ನೀಡಿ ವಾದ ಮಾಡಲಾಗದು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
“ಅರ್ಜಿದಾರ ಸಂಸ್ಥೆಯು ಡೀಲರ್ಗಳ ಒಕ್ಕೂಟವಾಗಿದೆ. ಎಲ್ಪಿಜಿ ಕಾರ್ಡ್ ಹೊಂದಿರುವವರಿಗೆ ಒಂದು ಲೀಟರ್ ಸೀಮೆಎಣ್ಣೆ ಮತ್ತು ಎಲ್ಪಿಜಿ ಕಾರ್ಡ್ ಹೊಂದಿಲ್ಲದವರಿಗೆ ಮೂರು ಲೀಟರ್ ಸೀಮೆಎಣ್ಣೆ ನೀಡುವುದರಿಂದ ತಮ್ಮ ಬದುಕಿಗೆ ಸಮಸ್ಯೆಯಾಗಿದೆ ಎಂದು ಯಾವುದೇ ಗ್ರಾಹಕ ಮುಂದೆ ಬಂದಿಲ್ಲ. 11-10-2021ರ ರಾಜ್ಯ ಸರ್ಕಾರದ ಆದೇಶದ ಬಗ್ಗೆ ಡೀಲರ್ಗಳು ಆಕ್ಷೇಪಿಸಿದ್ದಾರೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸ್ವೇಚ್ಛೆ ಅಥವಾ ತಾರತಮ್ಯ ಕಂಡುಬಂದರೆ ಮಾತ್ರ ಅದನ್ನು ನ್ಯಾಯಾಂಗದ ಪರಿಶೀಲನೆಗೆ ಒಳಪಡಿಸಬಹುದು” ಎಂದು ನ್ಯಾಯಾಲಯ ಹೇಳಿದೆ.
“ನ್ಯಾಯಾಲಯವು ಆಡಳಿತಗಾರನ ಸ್ಥಾನಕ್ಕೆ ಬಂದು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಸೀಮೆಎಣ್ಣೆ ವಿತರಿಸಲಾಗದು. ಸಂವಿಧಾನದ 14ನೇ ವಿಧಿ ಉಲ್ಲಂಘನೆಯಂಥ ಅಸಾಮಾನ್ಯ ಸಂದರ್ಭ ಹೊರತುಪಡಿಸಿ ನ್ಯಾಯಾಲಯವು ನೀತಿಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಹೇಳಿದೆ.
“ಸರ್ಕಾರವು ತನ್ನ ಆಕ್ಷೇಪಾರ್ಹವಾದ ಆದೇಶದ ಮೂಲಕ ಡೀಲರ್ಗಳ ಆದಾಯ ಕಸಿದಿರುವುದು ಮತ್ತು ಅರ್ಜಿದಾರರ ಕಲ್ಪನೆಯ ಆದಾಯವನ್ನು ಕಸಿದಿರುವುದು ಅವರನ್ನು ಸೀಮೆಎಣ್ಣೆ ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರ ಮಾಡಿರುವ ಆದೇಶವನ್ನು ಪ್ರಶ್ನಿಸಲು ಅವಕಾಶ ಕಲ್ಪಿಸದು” ಎಂದೂ ಹೇಳಿದೆ.
“ಯಾರು, ಯಾವ ಉದ್ದೇಶಕ್ಕಾಗಿ, ಅಡುಗೆ ಮಾಡಲು ಅಥವಾ ದೀಪ ಬೆಳಗಿಸಲು ಸೀಮೆಎಣ್ಣೆ ಬಳಸುತ್ತಿದ್ದಾರೆ ಎಂಬುದರ ಮೇಲೆ ನ್ಯಾಯಾಲಯ ನಿಗಾ ಇಡುವುದಿಲ್ಲ. ಈ ಅರ್ಜಿಯನ್ನು ಪುರಸ್ಕರಿಸಿದರೆ ಅದು ನ್ಯಾಯಾಲಯವು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೇಲೆ ನಿಗಾ ಇಟ್ಟದ್ದಕ್ಕೆ ಸಮನಾಗುತ್ತದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸ್ಪಷ್ಟವಾಗಿ ಸ್ವೇಚ್ಛಾಚಾರವಿದೆ ಎಂದು ಕಂಡುಬರದ ಹೊರತು ವಿತರಣಾ ವ್ಯವಸ್ಥೆಯಲ್ಲಿ ಹಂಚಿಕೆಯ ಓಟಕ್ಕೆ ನ್ಯಾಯಾಲಯ ಯಾವುದೇ ಕಾರಣಕ್ಕೂ ಇಳಿಯುವುದಿಲ್ಲ” ಎಂದಿದೆ.
ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಅಡುಗೆ ಮತ್ತು ದೀಪ ಉರಿಸಲು ಪಿಡಿಎಸ್ ಅಡಿ ನಿರ್ದಿಷ್ಟ ಫಲಾನುಭವಿಗಳಿಗೆ ಸೀಮೆಎಣ್ಣೆ ಹಂಚಿಕೆ ಮಾಡಲು ಆದೇಶಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಅಥವಾ ಅನುದ್ದೇಶಿತ ಬಳಕೆಗೆ ಸೀಮೆಎಣ್ಣೆ ಬಳಕೆ ಮಾಡುತ್ತಿರುವುದರಿಂದ ಹೀಗೆ ಮಾಡಲಾಗಿದೆ. 2021-22ನೇ ಸಾಲಿನ ಮೂರನೇ ತ್ರೈಮಾಸಿಕಕ್ಕೆ ರಾಜ್ಯ ಸರ್ಕಾರಕ್ಕೆ 7,440 ಕಿಲೋ ಲೀಟರ್ ಸೀಮೆಎಣ್ಣೆ ಹಂಚಿಕೆ ಮಾಡಲಾಗಿತ್ತು ಎಂದೂ ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೀಮೆಎಣ್ಣೆ ಪೂರೈಸುವ ಸಗಟು ಡೀಲರ್ಗಳಾಗಿದ್ದಾರೆ. ಆಕ್ಷೇಪಾರ್ಹವಾದ ಆದೇಶ ಮತ್ತು ಸಂವಹನಕ್ಕೂ ಮುನ್ನ ಐಒಸಿ, ಬಿಪಿಸಿ, ಎಚ್ಪಿಸಿಎಲ್ ಇತ್ಯಾದಿ ಡೀಲರ್ಗಳ ಮೂಲಕ ಇಡೀ ರಾಜ್ಯಕ್ಕೆ ಸೀಮೆಎಣ್ಣೆ ಪೂರೈಸಲಾಗುತ್ತಿತ್ತು. ಎಲ್ಪಿಜಿ ಸಂಪರ್ಕ ಇಲ್ಲದ ಎಲ್ಲಾ ಬಿಪಿಎಲ್ ಕಾರ್ಡುದಾರರಿಗೆ ಮಾಸಿಕ ಮೂರು ಲೀಟರ್ ಸೀಮೆಎಣ್ಣೆ ಹಂಚಿಕೆ ಮಾಡುವಂತೆ 27-07-2016ರಲ್ಲಿ ಸರ್ಕಾರ ಮಾಡಿದ್ದ ಆದೇಶವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಪ್ರಶ್ನಿಸಲಾಗಿತ್ತು. ಇದನ್ನು ಅಕ್ಷರಶಃ ಜಾರಿಗೊಳಿಸುವಂತೆ ವಿಭಾಗೀಯ ಪೀಠ ಆದೇಶಿಸಿತ್ತು.
ಇದಾದ ಬಳಿಕ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಪಿಜಿ ಕಾರ್ಡ್ ಹೊಂದಿರದವರಿಗೆ ಮೂರು ಲೀಟರ್ ಸೀಮೆಎಣ್ಣೆ ಹಂಚಿಕೆ ಮಾಡುವಂತೆ ಕೋರಿ ಪಿಐಎಲ್ ಸಲ್ಲಿಕೆ ಮಾಡಲಾಗಿತ್ತು. ಇದನ್ನು ವಜಾ ಮಾಡಿದ ಹಿನ್ನೆಲೆಯಲ್ಲಿ 08-10-2021 ಮತ್ತು 11-10-2021ರಂದು ರಾಜ್ಯ ಸರ್ಕಾರ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿ ಅಖಿಲ ಕರ್ನಾಟಕ ಸೀಮೆಎಣ್ಣೆ ಸಗಟು ಡೀಲರ್ಗಳ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಇದನ್ನು ಈಗ ಹೈಕೋರ್ಟ್ ವಜಾ ಮಾಡಿದೆ.