ಮನೆ ಕಾನೂನು CBSC ನಿರಾಕ್ಷೇಪಣಾ ಪತ್ರಕ್ಕೆ ಲೆಕ್ಕ ಪರಿಶೋಧನಾ ಪತ್ರ ಕಡ್ಡಾಯ ಮಾಡದಂತೆ ಕೋರಿ ಅರ್ಜಿ: ಮನವಿ ಪರಿಗಣಿಸಲು...

CBSC ನಿರಾಕ್ಷೇಪಣಾ ಪತ್ರಕ್ಕೆ ಲೆಕ್ಕ ಪರಿಶೋಧನಾ ಪತ್ರ ಕಡ್ಡಾಯ ಮಾಡದಂತೆ ಕೋರಿ ಅರ್ಜಿ: ಮನವಿ ಪರಿಗಣಿಸಲು ಹೈಕೋರ್ಟ್ ಸೂಚನೆ

0

ಬೆಂಗಳೂರು: ರಾಜ್ಯ ಪಠ್ಯಕ್ರಮದಿಂದ ಕೇಂದ್ರ ಪಠ್ಯಕ್ರಮ (ಸಿಬಿಎಸ್‌ಸಿಗೆ) ಸಂಯೋಜನೆಗೆ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆಯಲು ಹಿಂದಿನ ಮೂರು ವರ್ಷದ ಲೆಕ್ಕ ಪರಿಶೋಧನಾ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಬಲವಂತಪಡಿಸಬಾರದು ಹಾಗೂ ನಿಯಮಾನುಸಾರ ಎನ್‌ಒಸಿ ನೀಡುವಂತೆ ಕೋರಿ ಮೈಸೂರಿನ ಬೆಳವಾಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಲ್ಲಿಸಿರುವ ಮನವಿಯನ್ನು ಕಾನೂನು ರೀತಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

Join Our Whatsapp Group

ರಾಷ್ಟ್ರೋತ್ಥಾನ ಪರಿಷತ್‌ನ ಪರಿಷತ್ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿ ಎನ್. ದಿನೇಶ್ ಹೆಗ್ಡೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ ನಿರಾಕ್ಷೇಪಣ ಪತ್ರ (ಎನ್‌ಒಸಿ) ಮಂಜೂರು ಮಾಡುವ ಸಂಬಂಧ ರಾಷ್ಟ್ರೋತ್ಥಾನ ಪರಿಷತ್ 2024ರ ಮೇ 20ರಂದು ಸಲ್ಲಿಸಿರುವ ಮನವಿಯಂತೆ ಆನ್‌ಲೈನ್‌ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಕಾನೂನು ರೀತಿ ಪರಿಗಣಿಸಿ ಎರಡು ವಾರಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು, ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ಸೇರಿದಂತೆ ಸಂಬಂಧಪಟ್ಟ ಪ್ರತಿವಾದಿಗಳಿಗೆ ನಿರ್ದೇಶನ ನೀಡಿದ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿತು.

ರಾಷ್ಟ್ರೋತ್ಥಾನ ಪರಿಷತ್ ಅಧೀನದಲ್ಲಿ ಮೈಸೂರಿನ ಬೆಳವಾಡಿಯ ಇಲವಾಲ ಗ್ರಾಮದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಹೆಸರಲ್ಲಿ 1ರಿಂದ 8ನೇ ತರಗತಿವರೆಗೆ ರಾಜ್ಯ ಪಠ್ಯಕ್ರಮದಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಾಲೆ ನಡೆಸಲು ಸರ್ಕಾರ ಅನುಮತಿ ನೀಡಿತ್ತು. ಇದಕ್ಕೆ ಎಲ್ಲ ಅಗತ್ಯ ಪೂರ್ವಾನುಮತಿಗಳನ್ನು ಪಡೆದುಕೊಳ್ಳಲಾಗಿದೆ. ನರ್ಸರಿಯಿಂದ 8ನೇ ತರಗತಿವರೆಗೆ 591 ವಿದ್ಯಾರ್ಥಿಗಳಿದ್ದು, 2024-35ನೇ ಶೈಕ್ಷಣಿಕ ವರ್ಷದಲ್ಲಿ 306 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ.

ರಾಜ್ಯ ಪಠ್ಯಕ್ರಮದಿಂದ ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಪಡೆದುಕೊಳ್ಳಲು ಸಿಬಿಎಸ್‌ಸಿ ಬೈಲಾ – 2018ರ ಪ್ರಕಾರ ರಾಜ್ಯ ಸರ್ಕಾರದಿಂದ ಎನ್‌ಒಸಿ ಪಡೆದುಕೊಳ್ಳಬೇಕು. ಅದರಂತೆ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳು (ನಿರಾಕ್ಷೇಪಣ ಪತ್ರ ವಿತರಣೆ ಮತ್ತು ನಿಯಂತ್ರಣ) ನಿಯಮಗಳು-2022ರ ಅನ್ವಯ ಎನ್‌ಒಸಿಗೆ ಆನ್‌ಲೈನ್‌ನಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೆ, ಶಿಕ್ಷಣ ಸಂಸ್ಥೆ ಎನ್‌ಒಸಿ ಪಡೆದುಕೊಳ್ಳಲು ಆರ್ಹತೆ ಹೊಂದಿಲ್ಲ ಎಂದು ಆನ್‌ಲೈನ್‌ನ ಪೋರ್ಟಲ್‌ನಲ್ಲಿ ಸಮಜಾಯಿಷಿ ನೀಡಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಎನ್‌ಒಸಿ ನೀಡಬೇಕಾದರೆ ಹಿಂದಿನ ಮೂರು ವರ್ಷಗಳ ಲೆಕ್ಕಪರಿಶೋಧನಾ ವರದಿ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಬಲವಂತಪಡಿಸುತ್ತಿದೆ. ಆದರೆ, 2022ರ ನಿಯಮಗಳಲ್ಲಿ ಇದಕ್ಕೆ ಅವಕಾಶವಿಲ್ಲ. ಅಲ್ಲದೇ, ಎನ್‌ಒಸಿ ಪಡೆದುಕೊಳ್ಳಲು ಲೆಕ್ಕಪರಿಶೋಧನಾ ವರದಿ ಸಲ್ಲಿಸುವುದು ಕಡ್ಡಾಯವಲ್ಲ ಎಂದು 2023ರಲ್ಲಿ ಇದೇ ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಆದ್ದರಿಂದ ಎನ್‌ಒಸಿ ಪಡೆದುಕೊಳ್ಳಲು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳು (ನಿರಾಕ್ಷೇಪಣ ಪತ್ರ ವಿತರಣೆ ಮತ್ತು ನಿಯಂತ್ರಣ) ನಿಯಮಗಳು-2022ರ ಅನ್ವಯ ಹಿಂದಿನ ಮೂರು ವರ್ಷಗಳ ಲೆಕ್ಕಪರಿಶೋಧನಾ ವರದಿ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಘೋಷಿಸಬೇಕು. ಈ ಸಂಬಂಧ ರಾಷ್ಟ್ರೋತ್ಥಾನ ಪರಿಷತ್ 2024ರ ಮೇ 20ರಂದು ಸಲ್ಲಿಸಿರುವ ಮನವಿಯನ್ನು ಪರಿಗಣಿಸಬೇಕು ಎಂದು ಎಂದು ಸರ್ಕಾರ ಹಾಗೂ ಸಾರ್ವನಿಕ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಹಿಂದಿನ ಲೇಖನಹಳೇ ವೈಷಮದ ಹಿನ್ನೆಲೆ ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ
ಮುಂದಿನ ಲೇಖನನಟ ದರ್ಶನ್ ಗೆಳತಿ ಪವಿತ್ರಾಗೌಡ ಪೊಲೀಸರ ವಶಕ್ಕೆ