ಹಳೆಯ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವ ದೆಹಲಿ ಸರ್ಕಾರದ ನೀತಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ
ಹತ್ತು ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳನ್ನು ಅವುಗಳ ಸಂಚಾರ ಅರ್ಹತೆ ಲೆಕ್ಕಿಸದೆ ಕಡ್ಡಾಯವಾಗಿ ಗುಜರಿಗೆ ಹಾಕುವ ಸಂಬಂಧ 2024ರಲ್ಲಿ ದೆಹಲಿ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಗಳ ಬಗ್ಗೆ ಅರ್ಜಿದಾರರಾದ ನಾಗಲಕ್ಷ್ಮಿ ಲಕ್ಷ್ಮಿ ನಾರಾಯಣ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನೀತಿಯ ಅನ್ವಯವು ಭವಿಷ್ಯವರ್ತಿಯೇ ಅಥವಾ ಪೂರ್ವಾನ್ವಯವೇ ಎನ್ನುವುದರ ಬಗ್ಗೆ ಸ್ಪಷ್ಟತೆಯನ್ನು ನೀಡಲಾಗಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ. “ಇದು ಮನಸೋಇಚ್ಛೆಯ ನಿರ್ಧಾರವಾಗಿದ್ದು ಅರ್ಜಿದಾರರ ಕಾನೂನುಬದ್ಧ ನಿರೀಕ್ಷೆಯನ್ನು ಉಲ್ಲಂಘಿಸುತ್ತದೆ ಮತ್ತು ಸಂವಿಧಾನದ 300 ಎ ವಿಧಿಯ ಅಡಿಯಲ್ಲಿ ಅರ್ಜಿದಾರರ ಆಸ್ತಿಯ ಹಕ್ಕನ್ನು ಕಸಿದುಕೊಳ್ಳುತ್ತದೆ” ಎಂದು ವಾದಿಸಿದ್ದಾರೆ.
ವಾಹನಗಳ ನಿಜವಾದ ಮಾಲಿನ್ಯ ಅಥವಾ ಸ್ಥಿತಿಯನ್ನು ಪರಿಗಣಿಸದೆ ಗುಜರಿ ನಿಯಮಗಳನ್ನು ಅನ್ವಯಿಸಲಾಗುತ್ತಿದೆ. ಇದರಿಂದ ಅಂತಹ ವಾಹನಗಳ ಮಾಲೀಕರಿಗೆ ಅನಗತ್ಯ ತೊಂದರೆ ಉಂಟಾಗುತ್ತದೆ. ಗುಜರಿ ನೀತಿಯ ಹಠಾತ್ ಜಾರಿಯಿಂದ ವಾಹನಗಳ ಕಾನೂನುಬದ್ಧ ಖರೀದಿ ನಿಯಮಗಳನ್ನು ಉಲ್ಲಂಘಿಸಲ್ಪಡುತ್ತವೆ. ಒಂದು ವೇಳೆ ನೀತಿ ಜಾರಿಯಾದರೆ ಸಮಾಜದಲ್ಲಿ ಆರ್ಥಿಕವಾಗಿ ಕೆಳಸ್ತರದಲ್ಲಿರುವವರಿಗೆ ಪರಿಹಾರ ನೀಡಬೇಕು ಎಂದು ಅರ್ಜಿ ಪ್ರತಿಪಾದಿಸಿದೆ.