ಮನೆ ರಾಷ್ಟ್ರೀಯ ಪಿಎಫ್’ಐ ಪ್ರಕರಣ: ಕೇರಳ, ಕರ್ನಾಟಕದಲ್ಲಿ ಎನ್’ಐಎ ಶೋಧ

ಪಿಎಫ್’ಐ ಪ್ರಕರಣ: ಕೇರಳ, ಕರ್ನಾಟಕದಲ್ಲಿ ಎನ್’ಐಎ ಶೋಧ

0

ನವದೆಹಲಿ(Newdelhi): ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ನಿಷೇಧಿತ ಪಿಎಫ್‌’ಐ ನಡೆಸಿದ ಪಿತೂರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌’ಐಎ) ಕೇರಳ ಮತ್ತು ಕರ್ನಾಟಕದ ಮೂರು ಸ್ಥಳಗಳಲ್ಲಿ ಗುರುವಾರ ಶೋಧ ನಡೆಸಿದೆ.

ಕೇರಳದ ಕೊಯಿಕ್ಕೋಡ್ ಮತ್ತು ಕರ್ನಾಟಕದ ಕಲಬುರಗಿ ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಡಿಜಿಟಲ್‌ ಸಾಧನಗಳು ಹಾಗೂ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್‌’ಐಎ ವಕ್ತಾರರು ತಿಳಿಸಿದ್ದಾರೆ.

ನಿಷೇಧಿತ ಪಾಪ್ಯೂಲರ್‌ ಫ್ರಂಟ್‌ ಆಫ್‌ ಇಂಡಿಯಾ ವಿರುದ್ಧ ಎನ್‌ಐಎ ಏಪ್ರಿಲ್‌ 13ರಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶೋಧ ನಡೆಸಲಾಗಿದೆ.

ಕೇರಳ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಹಾಗೂ ಭಾರತ ಮತ್ತು ವಿದೇಶಗಳಲ್ಲಿ ಹಣವನ್ನು ಸಂಗ್ರಹಿಸಲು ಪಿಎಫ್‌’ಐನ ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಯಕರ್ತರು ಕ್ರಿಮಿನಲ್‌ ಸಂಚು ರೂಪಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ದೇಶದ ವಿವಿಧೆಡೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಆರೋಪಿಗಳು ತಮ್ಮ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದರು ಎಂದೂ ವಕ್ತಾರರು ಹೇಳಿದ್ದಾರೆ.